ಬೆಳಗಾವಿ: ಇಲ್ಲಿನ ಸ್ವಿಮ್ಮರ್ಸ್ ಕ್ಲಬ್ ಮತ್ತು ಅಕ್ವೇರಿಯಸ್ ಸ್ವಿಮ್ ಕ್ಲಬ್‌ನ ಈಜುಪಟುಗಳಾದ ಜ್ಯೋತಿ ಕೋರಿ (ಹೊಸಟ್ಟಿ) ಹಾಗೂ ಅವರ ಪುತ್ರ ವಿಹಾನ್ ಜತೆಯಾಗಿ, ಕೆಎಲ್‌ಇ ಸಂಸ್ಥೆಯ ಸುವರ್ಣ ಜೆಎನ್‌ಎಂಸಿ ಈಜುಕೊಳದಲ್ಲಿ ಗುರುವಾರ ನಡೆದ ‘ನಾನ್‌ಸ್ಟಾಪ್ ಸ್ವಿಮ್ಮಿಂಗ್ ರಿಲೆ'ಯಲ್ಲಿ 12 ಗಂಟೆ, 22 ನಿಮಿಷ ಈಜಿ ಇಂಡಿಯಾ ಅಂಡ್ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದರು.
44 ವರ್ಷ ವಯಸ್ಸಿನ ಜ್ಯೋತಿ ಹಾಗೂ 12ರ ಪ್ರಾಯದ ವಿಹಾನ್ ನಸುಕಿನ 5.08ಕ್ಕೆ ಈಜಲು ಆರಂಭಿಸಿದರು. ಸಂಜೆ 5.30ಕ್ಕೆ ಮುಗಿಸಿದರು. ವಿಹಾನ್ 18 ಕಿ.ಮೀ ಹಾಗೂ ಜ್ಯೋತಿ 12 ಕಿ.ಮೀ. ಈಜಿದರು. ಇಬ್ಬರೂ ರಿಲೆ ಮಾದರಿಯಲ್ಲಿ ತಲಾ ಒಂದೊಂದು ಗಂಟೆ ಈಜಿ ದಾಖಲೆ ಮೆರೆದರು.
‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಮತ್ತು ‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’ನ ತೀರ್ಪುಗಾರ್ತಿ ರೇಖಾ ಸಿಂಗ್ ಈ ದಾಖಲೆಯನ್ನು ಖಚಿತಪಡಿಸಿದರು.
‘ತಾಯಿ ಮತ್ತು ಮಗ ರಿಲೇ ಮಾದರಿಯಲ್ಲಿ ಸತತ 12 ಗಂಟೆ, 22 ನಿಮಿಷ ಈಜಿ ದಾಖಲೆ ಮಾಡಿದ್ದು ಇದೇ ಮೊದಲು. ಅವರಿಬ್ಬರೂ ಯಾರ ದಾಖಲೆ ಮುರಿಯಲು ಈಜಲಿಲ್ಲ. ಬದಲಿಗೆ, ಚೊಚ್ಚಲ ದಾಖಲೆ ಮಾಡಿದ್ದಾರೆ’ ಎಂದರು.
‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ ಅಪ್ರಿಸಿಯೇಷನ್ ಕಾಲಂನಲ್ಲಿ ಈಜು ತರಬೇತುದಾರ ಉಮೇಶ ಕಲಘಟಗಿ ಕೂಡ ಸೇರಿದ್ದಾರೆ’ ಎಂದು ಹೇಳಿದರು.
ಬೆಳಗಾವಿ ತಾಲ್ಲೂಕಿನ ಕಡೋಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಾಲಯ ತಾಂತ್ರಿಕ ಅಧಿಕಾರಿಯಾಗಿರುವ ಜ್ಯೋತಿ, 38ನೇ ವಯಸ್ಸಿನಲ್ಲಿ ಈಜಲು ಆರಂಭಿಸಿದರು. ರಾಷ್ಟ್ರಮಟ್ಟದ ಏಳು ಟೂರ್ನಿಗಳಲ್ಲಿ 26 ಪದಕ, ರಾಜ್ಯಮಟ್ಟದ ಟೂರ್ನಿಗಳಲ್ಲಿ 54 ಪದಕ ಹಾಗೂ ಶ್ರೀಲಂಕಾದಲ್ಲಿ ನಡೆದ ಆಹ್ವಾನಿತ ಈಜು ಟೂರ್ನಿಯಲ್ಲಿ 6 ಪದಕ ಗೆದ್ದಿದ್ದಾರೆ.
ಸೇಂಟ್ ಝೇವಿಯರ್ ಪ್ರೌಢಶಾಲೆಯಲ್ಲಿ ಓದುತ್ತಿರುವ ವಿಹಾನ್ ರಾಜ್ಯ ಹಾಗೂ ಜಿಲ್ಲಾಮಟ್ಟದ ಈಜು ಟೂರ್ನಿಗಳಲ್ಲಿ 22 ಪದಕ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.