ADVERTISEMENT

ಪ್ರೊ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್‌ಗೆ ಮೊದಲ ಜಯ

ಪ್ರೊ ಕಬಡ್ಡಿ ಲೀಗ್: ಬೆಂಗಾಲ್‌--–ಪುಣೇರಿ ಪಂದ್ಯ ರೋಚಕ ಟೈ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 18:06 IST
Last Updated 29 ಅಕ್ಟೋಬರ್ 2024, 18:06 IST
ಬೆಂಗಾಲ್ ವಾರಿಯರ್ಸ್‌ ವಿರುದ್ಧ ಪುಣೇರಿ ಪಲ್ಟನ್ ತಂಡದ ಅಸ್ಲಾಂ ಇನಾಮದಾರ್ ಅವರ ರೇಡಿಂಗ್‌....
ಬೆಂಗಾಲ್ ವಾರಿಯರ್ಸ್‌ ವಿರುದ್ಧ ಪುಣೇರಿ ಪಲ್ಟನ್ ತಂಡದ ಅಸ್ಲಾಂ ಇನಾಮದಾರ್ ಅವರ ರೇಡಿಂಗ್‌....   

ಹೈದರಾಬಾದ್‌: ಬಹುತೇಕ ಹಿನ್ನಡೆಯಲ್ಲೇ ಇದ್ದ ಬೆಂಗಳೂರು ಬುಲ್ಸ್ ತಂಡ ಅಮೋಘವಾಗಿ ಚೇತರಿಸಿ   ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಕೆ.ಸಿ. ತಂಡದ ಮೇಲೆ 34–33 ರಲ್ಲಿ ಒಂದು ಪಾಯಿಂಟ್‌ನ ರೋಚಕ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು. ಆ ಮೂಲಕ ಜಯದ ಖಾತೆಯನ್ನೂ ತೆರೆಯಿತು.

ಗಚ್ಚಿಬೌಲಿ ಕ್ರೀಡಾಂಗಣದ ಜಿಎಂಸಿಬಿ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ವಿರಾಮದ ವೇಳೆ ದಬಾಂಗ್ ಡೆಲ್ಲಿ 22–14 ರಲ್ಲಿ ಎಂಟು ಪಾಯಿಂಟ್‌ಗಳ ಮುನ್ನಡೆ ಸಾಧಿಸಿತ್ತು. ಆದರೆ ಜೈಭಗವಾನ್ ತಂಡದ ನೆರವಿಗೆ ಬಂದರು. ಇದಕ್ಕೆ ಮೊದಲು ಆಡಿದ ನಾಲ್ಕೂ ಪಂದ್ಯಗಳಲ್ಲಿ ಬುಲ್ಸ್ ಸೋಲನುಭವಿಸಿತ್ತು.

ಸಬ್‌ಸ್ಟಿಟ್ಯೂಟ್‌ ಆಗಿ ಕಣಕ್ಕಿಳಿದ ಜೈಭಗವಾನ್ (11) ಸೂಪರ್ ಟೆನ್‌ ಗಳಿಸಿದರೆ, ನಾಯಕ ಪ್ರದೀಪ್ ನರ್ವಾಲ್ (7 ಅಂಕ) ನಿರ್ಣಾಯಕ ಸಂದರ್ಭದಲ್ಲಿ ಮಿಂಚಿದರು. ಡೆಲ್ಲಿ ಕಡೆ ನಾಯಕ ಆಶು ಮಲಿಕ್ (13) ಮತ್ತು ಕೆ.ವಿನಯ್ (6) ಮಿಂಚಿದರು.

ADVERTISEMENT

ನಾಯಕ ಆಶು ಮಲಿಕ್ (13 ಅಂಕ) ಅವರ ಮಿಂಚಿನ ರೇಡಿಂಗ್ ಬಲದಿಂದ ಡೆಲ್ಲಿ ಆರಂಭದಿಂದಲೇ  ಮುನ್ನಡೆಯಿತು. ಬುಲ್ಸ್‌ ಮತ್ತೊಂದು ಸೋಲಿನತ್ತ ಸಾಗುವಂತೆ ಕಂಡಿತು. ಆದರೆ ವಿರಾಮದ ನಂತರ ಪ್ರತಿಹೋರಾಟ ತೋರಿತು. ಮುಕ್ತಾಯಕ್ಕೆ ಹತ್ತು ನಿಮಿಷಗಳಿದ್ದಾಗ ಹಿನ್ನಡೆ 27–22ಕ್ಕೆ ಇಳಿಯಿತು. ಎರಡು ನಿಮಿಷಗಳಿದ್ದಾಗ ನರ್ವಾಲ್ ರೇಡಿಂಗ್‌ ವೇಳೆ ಡೆಲ್ಲಿ ತಂಡ ಆಲೌಟ್‌ ಆಗಿ, ತಂಡ ಮೊದಲ ಬಾರಿ ಒಂದು ಪಾಯಿಂಟ್ ಮುನ್ನಡೆಯನ್ನೂ ಪಡೆಯಿತು. ಇದೇ ಅಂತರ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಮೊದಲ ಪಂದ್ಯ ಟೈ: ಇದಕ್ಕೆ ಮೊದಲು ಪುಣೇರಿ ಪಲ್ಟನ್‌ ಮತ್ತು ಬೆಂಗಾಲ್‌ ವಾರಿಯರ್ಸ್‌ ತಂಡಗಳು 32–32 ರಲ್ಲಿ ಸಮಬಲ ಸಾಧಿಸಿದವು. ಹೀಗಾಗಿ ಇತ್ತಂಡಗಳು ತಲಾ ಮೂರು ಅಂಕಗಳನ್ನು ಹಂಚಿಕೊಂಡವು. ಇದು ಹಾಲಿ ಆವೃತ್ತಿಯಲ್ಲಿ ಟೈ ಆದ ಮೂರನೇ ಪಂದ್ಯ.

ಪುಣೇರಿ ಪಲ್ಟನ್‌ ಪರ ಆಕಾಶ್‌ ಶಿಂದೆ (8 ಅಂಕ)  ಮತ್ತು ಪಂಕಜ್‌ ಮೋಹಿತೆ (8 ಅಂಕ) ಗರಿಷ್ಠ ವೈಯಕ್ತಿಕ ಅಂಕ ಗಳಿಸಿದರು. ಬೆಂಗಾಲ್‌ ಪರ ಸುಶೀಲ್‌ ಕಂಬ್ರೇಕರ್‌ (10) ಜೊತೆಗೆ ನಿತಿನ್‌ ಧನಕರ್‌ (6ಅಂಕ) ಮಿಂಚಿದರು.

ಬುಧವಾರದ ಪಂದ್ಯ: ಗುಜರಾತ್‌ ಜೈಂಟ್ಸ್– ತಮಿಳ್‌ ತಲೈವಾಸ್‌ (ರಾತ್ರಿ 8.00); ಯು.ಪಿ. ಯೋಧಾಸ್‌–  ಮತ್ತು ಹರಿಯಾಣ ಸ್ಟೀಲರ್ಸ್‌ (ರಾತ್ರಿ 9.00)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.