ADVERTISEMENT

ಬದುಕಿನುದ್ದಕ್ಕೂ ಬಡತನ ಅನುಭವಿಸಿದರೂ ಹಾಕಿಯನ್ನು ಶ್ರೀಮಂತಗೊಳಿಸಿದ ಬೇನುಬಾಳು ಭಾಟ್

‘ಗದುಗಿನ ಒಲಿಂಪಿಯನ್‌’ ನೆನಪುಗಳು...

ಪ್ರಮೋದ
Published 16 ಸೆಪ್ಟೆಂಬರ್ 2020, 19:30 IST
Last Updated 16 ಸೆಪ್ಟೆಂಬರ್ 2020, 19:30 IST
ಬೇನುಬಾಳು ಭಾಟ್
ಬೇನುಬಾಳು ಭಾಟ್   

ಹುಬ್ಬಳ್ಳಿ: ‘ಬದುಕಿನುದ್ದಕ್ಕೂ ಹಾಕಿ ಕ್ರೀಡೆಯನ್ನು ಉಸಿರಾಗಿಸಿಕೊಂಡಿದ್ದ ಅವರ ಅದೃಷ್ಟವೂ ಚೆನ್ನಾಗಿದ್ದರೆ 1964ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದಲ್ಲಿರಬೇಕಿತ್ತು. ಒಲಿಂಪಿಕ್‌ನಲ್ಲಿ ಆಡದಿದ್ದರೂ ಅವರು ನಮ್ಮೆಲ್ಲರ ಪಾಲಿಗೆ ಒಲಿಂಪಿಯನ್‌ ಇದ್ದಂತೆ...’

ಬುಧವಾರ ನಿಧನರಾದ ಮುದ್ರಣ ನಗರಿಯ ಹೆಸರಾಂತ ಹಾಕಿ ಆಟಗಾರಬೇನುಬಾಳು ಭಾಟ್ ಅವರನ್ನು ನೆನಪಿಸಿಕೊಂಡು ಭಾವುಕರಾಗಿದ್ದು ರೈಲ್ವೆಯಲ್ಲಿ ಅವರ ಜೊತೆ 20 ವರ್ಷ ಹಾಕಿ ಆಡಿರುವ ಎಸ್‌.ಎಫ್‌. ಮಲ್ಲಾಡ.

ಹಾಕಿ ಕ್ರೀಡೆಗೂಮತ್ತು ಗದುಗಿಗೆ ಅಪಾರವಾದ ನಂಟು ಇದೆ. ಅಲ್ಲಿನ ಸೆಟ್ಲಮೆಂಟ್‌ ಮೈದಾನದಲ್ಲಿ ಹಾಕಿ ಆಡಿದ ಅನೇಕರು ಈಗ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿದ್ದಾರೆ. ಅದೇ ಮೈದಾನದಲ್ಲಿ ಆಡಿ ಬದುಕಿನ ಕೊನೆಯ ತನಕವೂ ಹಾಕಿ ಪ್ರೀತಿ ಉಳಿಸಿಕೊಂಡವರಲ್ಲಿಬೇನುಬಾಳು ಭಾಟ್ ಪ್ರಮುಖರು.

ಬೇನುಬಾಳು ತಾವು ಬದುಕಿದ್ದ 87 ವರ್ಷಗಳ ಕಾಲ ನಿರಂತರವಾಗಿ ಬಡತನದ ಬೇಗೆಯಲ್ಲಿ ಬೆಂದವರು. ಆದರೆ, ಸೊಗಸಾದ ಆಟದ ಮೂಲಕ ಹಾಕಿ ಕ್ರೀಡೆಯನ್ನು ಶ್ರೀಮಂತಗೊಳಿಸಿದರು. ಸುಮಾರು 51 ವರ್ಷಗಳ ತನಕ ಹಾಕಿ ಆಡಿದ್ದು ಅವರ ದೈಹಿಕ ಸಾಮರ್ಥ್ಯಕ್ಕೆ ಸಾಕ್ಷಿ.ಆಗಿನ ಮದ್ರಾಸ್‌ನ ಸದರ್ನ್‌ ರೈಲ್ವೆಯಲ್ಲಿ ಉದ್ಯೋಗಿಯಾಗಿದ್ದ ಬಾಳು ಭಾಟ್ 11 ವರ್ಷಗಳ ಕಾಲ ಭಾರತೀಯ ರೈಲ್ವೆ ತಂಡದಲ್ಲಿದ್ದರು.ಸುಭಾಷ ಮಲ್ನಾಡ್‌, ಹುಬ್ಬಳ್ಳಿಯ ವಾಸು ಗೋಕಾಕ್‌, ಯಲ್ಲಪ್ಪ ಗಡಾದ ಮತ್ತು ಯಲ್ಲಪ್ಪ ಕೊರವರ ಇವರೆಲ್ಲ ಬೇನುಬಾಳು ಜೊತೆ ಹಾಕಿ ಆಡಿದವರು.

ಭಾರತ ತಂಡದ ಆಯ್ಕೆಯಾಗಿ ನಡೆಯುತ್ತಿದ್ದ ರಂಗಸ್ವಾಮಿ ಕಪ್‌ ಟೂರ್ನಿಯಲ್ಲಿ ಸುಮಾರು 10 ವರ್ಷಕ್ಕೂ ಹೆಚ್ಚು ಕಾಲಬೇನುಬಾಳು ಆಡಿದ್ದಾರೆ. ಈ ಟೂರ್ನಿಯ ನೆನಪುಗಳನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಮಲ್ಲಾಡ ‘ಬೇನುಬಾಳು ಅವರೊಂದಿಗೆ ಸುಮಾರು 20 ವರ್ಷ ಹಾಕಿ ಆಡಿದ್ದೇನೆ. 1984ರಲ್ಲಿ ಸೌತ್‌ ಸೆಂಟ್ರಲ್‌ ರೈಲ್ವೆಗೆ ನಾನು ನೇಮಕವಾದಾಗ ಅವರು ಆಗಲೇ ಭಾರತ ರೈಲ್ವೆ ತಂಡದಲ್ಲಿ ದೊಡ್ಡ ಹೆಸರು ಮಾಡಿದ್ದರು. ರಂಗಸ್ವಾಮಿ ಕಪ್‌ನಲ್ಲಿ ಸತತ ಹತ್ತು ವರ್ಷಗಳ ಕಾಲ ಹೆಚ್ಚು ಗೋಲುಗಳನ್ನು ಗಳಿಸಿದ ದಾಖಲೆ ಮಾಡಿದ್ದರು’ ಎಂದು ನೆನಪಿಸಿಕೊಂಡರು.

ಬೇನುಬಾಳು ಅವರ ಇನ್ನೊಬ್ಬ ಸಹ ಆಟಗಾರ ವಾಸು ಗೋಕಾಕ್‌ ‘ಬೇನುಬಾಳು ಮಹಾನ್‌ ಆಟಗಾರ. ನಿಧನದ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಕಣ್ಣೀರು ಸುರಿಸಿದರು. ಅಗಲಿದ ಮಿತ್ರನನ್ನು ನೆನಪಿಸಿಕೊಳ್ಳುತ್ತ ‘ಬಹಳಷ್ಟು ಜನ ಪಂದ್ಯಕ್ಕಿಂತ ಹೆಚ್ಚಾಗಿಬೇನುಬಾಳು ಆಟ ನೋಡಲು ಮೈದಾನಕ್ಕೆ ಬರುತ್ತಿದ್ದರು. ಅವರಂಥಆಟಗಾರನನ್ನು ಎಲ್ಲಿಯೂ ನೋಡಿರಲಿಲ್ಲ’ ಎಂದರು.

ಕಷ್ಟದಲ್ಲಿಯೇ ಅಂತ್ಯಕಂಡಿತು ಬದುಕು

ರೈಲ್ವೆಯಿಂದ ನಿವೃತ್ತಿಯಾದ ಬಳಿಕವೂ ಅವರು ಕಷ್ಟದಲ್ಲಿಯೇ ಕೈ ತೊಳೆಯಬೇಕಾಯಿತು.ಜೀವನ ನಿರ್ವಹಣೆಗಾಗಿ ಪೆಟ್ರೋಲ್‌ ಬಂಕ್‌ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಮಾಧ್ಯಮಗಳ ಮೂಲಕ ಈ ವಿಷಯ ತಿಳಿದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳು ಅವರನ್ನು ಹಾಕಿ ಕೋಚ್‌ ಆಗಿ ನೇಮಿಸಿಕೊಂಡಿತು. ಹತ್ತು ವರ್ಷ ಅವರು ಕ್ರೀಡಾ ಇಲಾಖೆಯಲ್ಲಿ ಕೋಚ್‌ ಆಗಿದ್ದರು. ಅವರ ಮಾರ್ಗದರ್ಶನದಲ್ಲಿ ಪಳಗಿದ ಅನೇಕ ಆಟಗಾರರು ಈಗ ದೇಶದಾದ್ಯಂತ ಇದ್ದಾರೆ.

****

ಬೇನುಬಾಳು ಭಾಟ್ ಅವರ ಆಟವನ್ನು ನೋಡುವ ಭಾಗ್ಯವಂತೂ ಸಿಗಲಿಲ್ಲ. ಅವರಿಂದ ತರಬೇತಿ ಪಡೆಯುವ ಅವಕಾಶ ಲಭಿಸಿದ್ದು ಅದೃಷ್ಟವೆಂದೇ ಭಾವಿಸಿದ್ದೇನೆ.

– ಮಂಜುನಾಥ ಬಾಗಲಕೋಟೆ, ಹಾಕಿ ಕೋಚ್‌, ಗದಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.