ADVERTISEMENT

Paris Olympics | ಮನ ಗೆದ್ದ ಮನು; ಕೈತಪ್ಪಿದ ಮೂರನೇ ಪದಕ

25 ಮೀ ಸ್ಪೋರ್ಟ್ಸ್ ಪಿಸ್ತೂಲ್ ಶೂಟಿಂಗ್: ಭಾಕರ್ ಕೈತಪ್ಪಿದ ಮೂರನೇ ಪದಕ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 0:30 IST
Last Updated 4 ಆಗಸ್ಟ್ 2024, 0:30 IST
<div class="paragraphs"><p>ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಶನಿವಾರ ನಡೆದ ಮಹಿಳೆಯರ 25 ಮೀ ಸ್ಪೋರ್ಟ್ಸ್‌ ಪಿಸ್ತೂಲ್ ಶೂಟಿಂಗ್ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ಭಾರತದ ಮನು ಭಾಕರ್ ನಿರಾಶೆಯಿಂದ ಪ್ರೇಕ್ಷಕರತ್ತ ಕೈಬೀಸಿ ನಿರ್ಗಮಿಸಿದರು&nbsp; </p></div>

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಶನಿವಾರ ನಡೆದ ಮಹಿಳೆಯರ 25 ಮೀ ಸ್ಪೋರ್ಟ್ಸ್‌ ಪಿಸ್ತೂಲ್ ಶೂಟಿಂಗ್ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ಭಾರತದ ಮನು ಭಾಕರ್ ನಿರಾಶೆಯಿಂದ ಪ್ರೇಕ್ಷಕರತ್ತ ಕೈಬೀಸಿ ನಿರ್ಗಮಿಸಿದರು 

   

(ಪ್ರಜಾವಾಣಿ ಚಿತ್ರ/ಕೆ.ಎನ್. ಶಾಂತಕುಮಾರ್‌)

ಶತೋಹು, ಫ್ರಾನ್ಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕಗಳ ‘ಹ್ಯಾಟ್ರಿಕ್’ ಸಾಧಿಸುವ ಮನು ಭಾಕರ್ ಕನಸು ಕಮರಿತು. ಕಳೆದೊಂದು ವಾರದಲ್ಲಿ ಎರಡು ಕಂಚಿನ ಪದಕಗಳನ್ನು ಜಯಿಸಿ ದಾಖಲೆ ಮಾಡಿದ್ದ ಭಾರತದ ಮನು ಶನಿವಾರ ನಿರಾಶೆ ಅನುಭವಿಸಿದರು. 

ADVERTISEMENT

22 ವರ್ಷದ ಮನು ಅವರು ಶತೋಹು ಶೂಟಿಂಗ್ ರೇಂಜ್‌ನಲ್ಲಿ ನಡೆದ 25 ಮೀ ಸ್ಪೋರ್ಟ್ಸ್ ಪಿಸ್ತೂಲ್ ಶೂಟಿಂಗ್‌ನಲ್ಲಿ ನಾಲ್ಕನೇ ಸ್ಥಾನ ಪಡೆದರು. ಅಲ್ಪ ಅಂತರದಲ್ಲಿ ಪದಕ ಕೈತಪ್ಪಿತು. ಒಂದೇ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಜಯಿಸಿರುವ ಭಾರತದ ಮೊದಲ ಕ್ರೀಡಾಪಟು ಎಂಬ ದಾಖಲೆಯನ್ನು ಮನು ಈಗಾಗಲೇ ಬರೆದಿದ್ದಾರೆ. 

ಕ್ರೀಡಾಪ್ರೇಮಿಗಳ ಎದೆಬಡಿತ ಹೆಚ್ಚಿಸಿದ್ದ ಫೈನಲ್‌ ಸುತ್ತಿನಲ್ಲಿ  ಚಿನ್ನದ ಪದಕ ಜಯಿಸುವ ಕನಸಿನೊಂದಿಗೆ ಕಣಕ್ಕಿಳಿದ ಮನು ಅವರಿಗೆ ಕಠಿಣ ಪೈಪೋಟಿ ಎದುರಾಯಿತು. ಆರಂಭಿಕ ಹಂತದಲ್ಲಿ ಅವರ ಪ್ರದರ್ಶನವು ಸಾಧಾರಣವಾಗಿತ್ತು. ಆದರೂ ಪದಕ ಗೆಲುವಿನ ಅವಕಾಶವನ್ನು ಅವರು ಬಿಟ್ಟುಕೊಡಲಿಲ್ಲ. ನಂತರದ ಹಂತದಲ್ಲಿ ಅವರು ಎರಡನೇ ಸ್ಥಾನಕ್ಕೂ ಏರಿದ್ದರು. ಆದರೆ ಎಂಟನೇ ಸರಣಿಯ ಶೂಟಿಂಗ್‌ನಲ್ಲಿ ಮನು ಒತ್ತಡಕ್ಕೊಳಗಾದಂತೆ ಕಾಣಿಸಿದರು. 

ಈ ಸುತ್ತಿನಲ್ಲಿ ಹಂಗೆರಿಯ ವೆರೊನಿಕಾ ಮೆಯರ್ ಎದುರಿನ ಶೂಟ್ ಆಫ್‌ನಲ್ಲಿ ಮನು ನಾಲ್ಕನೇ ಸ್ಥಾನಕ್ಕೆ ಇಳಿದರು. ಮನು ಅವರು ಮೂರನೇ ಪದಕ ಗೆದ್ದು ಹೊಸ ಇತಿಹಾಸ ಬರೆಯುವುದನ್ನು ಕಣ್ತುಂಬಿಕೊಳ್ಳಲು  ರೇಂಜ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು, ಮಾಧ್ಯಮ ಪ್ರತಿನಿಧಿಗಳು ಮತ್ತು ಕೋಚ್‌ಗಳು ಮೌನಕ್ಕೆ ಜಾರಿದರು. 

ಕಳೆದೊಂದು ವಾರದಿಂದ ತಮ್ಮ ಮೇಲಿನ ಒತ್ತಡದ ಸನ್ನಿವೇಶಗಳನ್ನು ಸಮರ್ಥವಾಗಿ ನಿಭಾಯಿಸಿದ್ದ ಮನು ಎರಡು ಸ್ಪರ್ಧೆಗಳಲ್ಲಿ ಪದಕಗಳನ್ನು ಜಯಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಇಲ್ಲಿ ಅವರು ಒತ್ತಡಕೊಳಗಾದರು. ಅವರು ಮೂರು ಮತ್ತು ನಾಲ್ಕನೇ ಸುತ್ತುಗಳಲ್ಲಿ ತೆಗೆದುಕೊಂಡಿದ್ದ ಕಡಿಮೆ ಅಂಕಗಳು ಅವರಿಗೆ ಕೊನೆಯಲ್ಲಿ ಕಂಟಕವಾದವು.  ಕೊನೆಯ ಸುತ್ತಿನಲ್ಲಿ ಭಾಕರ್ ತಮ್ಮೆಲ್ಲ ಏಕಾಗ್ರತೆ ಸಾಮರ್ಥ್ಯವನ್ನು ಪಣಕ್ಕೊಡ್ಡಿದರು. ಮನು 3 ಅಂಕ ಪಡೆದರೆ, ಮೇಯರ್ಸ್ 4 ಅಂಕ ಗಳಿಸಿ ಗೆದ್ದರು. 

ಅಭಿಮಾನಿಗಳತ್ತ ಕೈಬೀಸಿ ಕೃತಜ್ಞತೆ ಸಲ್ಲಿಸಿದ ಅವರು ನಿರಾಶೆಯ ಮುಖಭಾವ ಹೊತ್ತು ಭಾರವಾದ ಹೆಜ್ಜೆಗಳೊಂದಿಗೆ ತಮ್ಮ ಸ್ಥಾನಕ್ಕೆ ಹೋಗಿ ಕುಳಿತುಕೊಂಡರು. ನೆರವು ಸಿಬ್ಬಂದಿ ಅವರ ಕೈಕುಲುಕಿ ಭುಜ ತಟ್ಟಿ ಸಮಾಧಾನ ಮಾಡಿದರು. ಪದಕ ಕೈತಪ್ಪಿಸಿಕೊಂಡ ಮನು ಕ್ರೀಡಾಪ್ರೇಮಿಗಳ ಮನ ಗೆದ್ದರು.  

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಶನಿವಾರ ನಡೆದ ಮಹಿಳೆಯರ 25 ಮೀ ಸ್ಪೋರ್ಟ್ಸ್‌ ಪಿಸ್ತೂಲ್ ಶೂಟಿಂಗ್ ಫೈನಲ್‌ನಲ್ಲಿ ಪದಕ ಗೆದ್ದವರು (ಎಡದಿಂದ) ಕೆಮಿಲಿ ಜೆದ್ರೆಝೆವಾಸ್ಕಿ (ಫ್ರಾನ್ಸ್‌–ಬೆಳ್ಳಿ) ಜೀನ್ ಯಾಂಗ್ (ದಕ್ಷಿಣ ಕೊರಿಯಾ–ಚಿನ್ನ) ವೆರೊನಿಕಾ ಮೆಯರ್ (ಹಂಗೇರಿ–ಕಂಚು)   

ಬೆಂಬಿಡದ ನಾಲ್ಕನೇ ಸ್ಥಾನ

ಪ್ಯಾರಿಸ್: ಒಲಿಂಪಿಕ್ಸ್‌  ಶೂಟಿಂಗ್‌ನಲ್ಲಿ ನಾಲ್ಕನೇ ಸ್ಥಾನ ಪಡೆದ ಭಾರತೀಯರಲ್ಲಿ ಮನು ಭಾಕರ್ ನಾಲ್ಕನೇಯವರಾಗಿದ್ದಾರೆ. 

2012ರಲ್ಲಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಪುರುಷರ 50 ಮೀ ರೈಫಲ್‌ ಪ್ರಾನ್ ವಿಭಾಗದಲ್ಲಿ ಜಾಯ್‌ದೀಪ್ ಕರ್ಮಾಕರ್ ಅವರು ಅಲ್ಪಅಂತರದಲ್ಲಿ ಕಂಚಿನ ಪದಕ ಕೈತಪ್ಪಿಸಿಕೊಂಡಿದ್ದರು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ 10 ಮೀ ಏರ್ ರೈಫಲ್‌ನಲ್ಲಿ ಅಭಿನವ್ ಬಿಂದ್ರಾ ಮತ್ತು ಈ ವರ್ಷದ ಒಲಿಂಪಿಕ್ಸ್‌ನಲ್ಲಿ 10 ಮೀ ಏರ್ ರೈಫಲ್‌ನಲ್ಲಿ ಅರ್ಜುನ್ ಬಬೂತಾ ಅವರು ನಾಲ್ಕನೇ ಸ್ಥಾನ ಪಡೆದರು. 

ಸ್ಕೀಟ್: ಅನಂತ್‌ಗೆ 24ನೇ ಸ್ಥಾನ 

ಭಾರತದ ಅನಂತ್ ಜೀತ್ ಸಿಂಗ್ ನರೂಕಾ ಅವರು ಸ್ಕೀಟ್ ವಿಭಾಗದಲ್ಲಿ 24ನೇ ಸ್ಥಾನ ಪಡೆದರು. ಒಟ್ಟು 30 ಸ್ಪರ್ಧಿಗಳಿದ್ದ ಸುತ್ತಿನಲ್ಲಿ ಅವರು  ಆಡಿದರು. ಐದು ಅರ್ಹತಾ ಸುತ್ತುಗಳಲ್ಲಿ 125 ಅಂಕಗಳಿಗೆ 116 ಗಳಿಸಿದರು. 

ಮಹಿಳೆಯರ ವಿಭಾಗದಲ್ಲಿ ಭಾರತದ ಮಹೇಶ್ವರಿ ಚವ್ಹಾಣ್  ಅವರು 71 ಪಾಯಿಂಟ್‌ಗಳೊಂದಿಗೆ ಎಂಟನೇ ಸ್ಥಾನ ಪಡೆದರು. ಉದಯೋನ್ಮುಖ ಶೂಟರ್ ರೈಜಾ ದಿಲ್ಲೋನ್ ಅವರು 25ನೇ ಸ್ಥಾನ ಪಡೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.