ಪಟ್ನಾ: ಸಮಬಲದ ಹೋರಾಟದ ಕೊನೆಯಲ್ಲಿ ಬೆಂಗಳೂರು ಬುಲ್ಸ್‌ಗೆ ರೋಚಕ ಜಯ. ಇಲ್ಲಿನ ಪಾಟಲೀಪುತ್ರ ಕ್ರೀಡಾಸಂಕೀರ್ಣದಲ್ಲಿ ಬುಧವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಟ್ನಾ ಪೈರೇಟ್ಸ್ ತಂಡವನ್ನು ಬುಲ್ಸ್ 43–41ರಿಂದ ಮಣಿಸಿತು.
ಆರಂಭದಿಂದಲೇ ಜಿದ್ದಾಜಿದ್ದಿಯಿಂದ ಹೋರಾಡಿದ ಉಭಯ ತಂಡಗಳು ಸಮಬಲದ ಹೋರಾಟದ ಮೂಲಕ ರಂಜಿಸಿದರು. ಮೊದಲ 10 ನಿಮಿಷಗಳ ಮುಕ್ತಾಯದ ವೇಳೆ ಪಟ್ನಾ ಪೈರೇಟ್ಸ್ ಅಲ್ಪ ಮುನ್ನಡೆ ಸಾಧಿಸಿತು. ಮಧ್ಯಂತರ ಅವಧಿಯ ವೇಳೆ ತಂಡದ ಮುನ್ನಡೆ 21–18 ಆಯಿತು.
ದ್ವಿತೀಯಾರ್ಧದಲ್ಲಿ ಆಟ ಇನ್ನಷ್ಟು ಕಳೆಗಟ್ಟಿತು. ಕೊನೆಯ ಎಂಟು ನಿಮಿಷಗಳು ಬಾಕಿ ಇದ್ದಾಗ ಬುಲ್ಸ್ ಎಂಟು ಪಾಯಿಂಟ್‌ಗಳ ಮುನ್ನಡೆ ಗಳಿಸಿತ್ತು. ಆದರೆ ನಂತರ ಪೈರೇಟ್ಸ್ ತಿರುಗೇಟು ನೀಡಿತು. ಹೀಗಾಗಿ ಮತ್ತೆ ಸಮಬಲದ ಸ್ಪರ್ಧೆ ಕಂಡು ಬಂತು. ಮೂರು ನಿಮಿಷಗಳ ಆಟ ಬಾಕಿ ಇದ್ದಾಗ ಪಾಯಿಂಟ್ 41–41 ಆಯಿತು. ನಂತರ ಹಾಲಿ ಚಾಂಪಿಯನ್ನರನ್ನು ಕಟ್ಟಿ ಹಾಕಿದ ಬುಲ್ಸ್ ಒಂದು ಪಾಯಿಂಟ್ ಕೂಟ ಬಿಟ್ಟುಕೊಡದೆ ಎರಡು ಪಾಯಿಂಟ್‌ಗಳನ್ನು ಕಲೆ ಹಾಕಿ ಜಯ ಗಳಿಸಿತು.
ತಂಡದ ಪವನ್ ಶೆರಾವತ್ 15, ಕಾಶಿಲಿಂಗ ಅಡಕೆ 11 ಮತ್ತು ರೋಹಿತ್ ಕುಮಾರ್ ಏಳು ಪಾಯಿಂಟ್ ಗಳಿಸಿದರು. ಪೈರೇಟ್ಸ್‌ನ ದೀಪಕ್ ನರ್ವಾಲ್ ಮತ್ತು ಮಂಜೀತ್ ತಲಾ 10 ಪಾಯಿಂಟ್ ಗಳಿಸಿದರು.
ಪುಣೇರಿ ಪಲ್ಟನ್‌ಗೆ ಜಯ: ಆಲ್‌ರೌಂಡ್ ಆಟವಾಡಿದ ಪುಣೇರಿ ಪಲ್ಟನ್ ತಂಡವು ಪ್ರೊ ಕಬಡ್ಡಿ ಟೂರ್ನಿಯಲ್ಲಿ ಬುಧವಾರ ದಬಂಗ್ ಡೆಲ್ಲಿ ವಿರುದ್ಧ ಜಯಿಸಿತು.
ಇಲ್ಲಿಯ ಪಾಟಲೀಪುತ್ರ ಕ್ರೀಡಾ ಕಾಂಪ್ಲೆಕ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಪುಣೇರಿ ತಂಡವು 31–27 ರಿಂದ ಡೆಲ್ಲಿ ವಿರುದ್ಧ ಗೆದ್ದಿತು.
ಪುಣೇರಿ ತಂಡದ ಜಿ.ಬಿ. ಮೋರೆ, ದೀಪಕಕುಮಾರ್ ದಹಿಯಾ ಮತ್ತು ಸಂದೀಪ್ ನರ್ವಾಲ್ ಅವರು ತಲಾ ನಾಲ್ಕು ಪಾಯಿಂಟ್‌ಗಳನ್ನು ಗಳಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು. ಟ್ಯಾಕಲ್‌ನಲ್ಲಿ ರಿಂಕು ನರ್ವಾಲ್ ನಾಲ್ಕು, ಮೋನು ಮೂರು ಪಾಯಿಂಟ್ ಗಳಿಸಿ ಮಿಂಚಿದರು.
ಡೆಲ್ಲಿ ತಂಡದ ರೈಡರ್ ನವೀನಕುಮಾರ್ ಏಳು ಪಾಯಿಂಟ್‌ಗಳನ್ನು ಕಬಳಿಸಿದರು. ಜೋಗಿಂದರ್ ನರ್ವಾಲ್ ಮತ್ತು ಚಂದ್ರನ್ ರಂಜೀತ್ ಅವರು ತಲಾ ನಾಲ್ಕು ಮತ್ತು ಮೂರು ಪಾಯಿಂಟ್ಸ್ ಗಳಿಸಿದರು.
ಎ ಗುಂಪಿನಲ್ಲಿ ಪುಣೇರಿ ತಂಡವು ಅಗ್ರಸ್ಥಾನದಲ್ಲಿದೆ. ಡೆಲ್ಲಿ ತಂಡವು ನಾಲ್ಕನೇ ಸ್ಥಾನದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.