ADVERTISEMENT

ಬೈಕ್ ರೇಸ್: ಭಾರತಕ್ಕೆ 10ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 15:47 IST
Last Updated 24 ಸೆಪ್ಟೆಂಬರ್ 2024, 15:47 IST
ಪತ್ರಿಕಾಗೋಷ್ಠಿಯಲ್ಲಿ ದೇವ್‌ (ಎಡ) ಸರ್ದಾರ್ ಶಹಾನ್ ಖಾನ್ ಮಾತನಾಡಿದರು
ಪತ್ರಿಕಾಗೋಷ್ಠಿಯಲ್ಲಿ ದೇವ್‌ (ಎಡ) ಸರ್ದಾರ್ ಶಹಾನ್ ಖಾನ್ ಮಾತನಾಡಿದರು   

ಬೆಂಗಳೂರು: ಕರ್ನಾಟಕದ ಸರ್ದಾರ್ ಶಹಾನ್ ಖಾನ್, ದೇವ್ ಮತ್ತು ಕೇರಳದ ಆನಂದ್ ಅವರನ್ನು ಒಳಗೊಂಡ ಭಾರತ ತಂಡವು ದಕ್ಷಿಣ ಆಫ್ರಿಕಾದ ನಮೀಬಿಯಾದಲ್ಲಿ ನಡೆದ ವರ್ಲ್ಡ್ ಜಿ.ಎಸ್. ಮೋಟಾರ್ ಸೈಕಲ್ ರೇಸ್ ಸ್ಪರ್ಧೆಯಲ್ಲಿ 10ನೇ ಸ್ಥಾನ ಗಳಿಸಿದೆ.

ಸೆ.15ರಿಂದ 21ರವರೆಗೆ ನಡೆದ ಆರು ದಿನಗಳ ಸ್ಪರ್ಧೆಯಲ್ಲಿ 22 ದೇಶಗಳಿಂದ ಖ್ಯಾತನಾಮ ರೇಸರ್‌ಗಳು ಭಾಗವಹಿಸಿದ್ದರು. ಭಾರತ ತಂಡವು ಇದೇ ಮೊದಲ ಬಾರಿಗೆ ಅಗ್ರ 10ರ ಸಾಧನೆ ಮಾಡಿದೆ.

ಎರಡು ವರ್ಷಕ್ಕೊಮ್ಮೆ ನಡೆಯುವ ಈ ಸ್ಪರ್ಧೆಯಲ್ಲಿ 2018ರಿಂದ ಭಾರತ ತಂಡ ಭಾಗವಹಿಸುತ್ತಿದೆ. ಈ ಹಿಂದಿನ ಆವೃತ್ತಿಗಳಲ್ಲಿ 17ನೇ ಸ್ಥಾನ ಗಳಿಸಿದ್ದು ಭಾರತದ ಉತ್ತಮ ಸಾಧನೆಯಾಗಿತ್ತು. ಈ ಸ್ಪರ್ಧೆಗಾಗಿ 2023ರ ನವೆಂಬರ್‌ನಲ್ಲಿ ಭಾರತದಲ್ಲಿ ಟ್ರಯಲ್ಸ್‌ ನಡೆಸಲಾಗಿತ್ತು. ದೇಶದ ವಿವಿಧೆಡೆಯಿಂದ 150ಕ್ಕೂ ಅಧಿಕ ರೇಸರ್‌ಗಳ ಪೈಕಿ ಅಂತಿಮವಾಗಿ ಬೆಂಗಳೂರಿನ ಶಹಾನ್‌, ದೇವ್‌ ಮತ್ತು ಆನಂದ್‌ ಆಯ್ಕೆಯಾಗಿದ್ದರು.

ADVERTISEMENT

‘ನಮೀಬಿಯಾದ ಬೆಟ್ಟ, ಗುಡ್ಡ, ಮರುಭೂಮಿಯಲ್ಲಿ ಸ್ಪರ್ಧೆ ಆಯೋಜನೆಯಾಗಿತ್ತು. ಬೈಕ್ ರೇಸ್‌ನಲ್ಲಿ ಖ್ಯಾತಿ ಪಡೆದ ವಿದೇಶಿ ರೇಸರ್‌ಗಳ ಜತೆ ನಾವೂ ಹೋರಾಟ ಮಾಡಿದ್ದು ಉತ್ತಮ ಅನುಭವ ಕೊಟ್ಟಿತು. ಸ್ಪರ್ಧೆಯ ಮೂರನೇ ದಿನ ನಮ್ಮ ತಂಡ ಅಗ್ರ ಐದರಲ್ಲಿ ಸ್ಥಾನ ಪಡೆದಿತ್ತು. ಪೋಡಿಯಂ ಫಿನಿಷ್‌ನ ನಿರೀಕ್ಷೆಯಲ್ಲಿದ್ದೆವು. ಆದರೆ, ಕೊನೆಯ ಹಂತದಲ್ಲಿ ನಾವು ಮಾಡಿದ ತಾಂತ್ರಿಕ ತಪ್ಪಿನಿಂದಾಗಿ ಆ ಅವಕಾಶ ತಪ್ಪಿತು. ಆದರೂ ನಮ್ಮ ಸಾಧನೆಗೆ ಖುಷಿಯಿದೆ’ ಎಂದು ಮಂಗಳವಾರ ಸ್ಪರ್ಧೆಯ ಅನುಭವವನ್ನು ಶಹಾನ್ ಖಾನ್ ಹಂಚಿಕೊಂಡರು.

‘ಆರು ದಿನ ಸುಮಾರು 1300 ಕಿ.ಮೀ. ದೂರ ಸಾಗಬೇಕಿತ್ತು. ಪ್ರತಿ ಹಂತವೂ ಸವಾಲಿನಿಂದ ಕೂಡಿತ್ತು. 21 ವರ್ಷ ವಯಸ್ಸಿನ ಶಹಾನ್‌ ಅವರು ಸ್ಪರ್ಧೆಯಲ್ಲಿದ್ದ ಅತ್ಯಂತ ಕಿರಿಯ ರೇಸರ್‌. ಅವರು ಸ್ಪರ್ಧೆಯ ವೇಳೆ ಗಾಯಗೊಂಡರೂ ವಿಚಲಿತರಾಗದೆ, 18ನೇ ಸ್ಥಾನದಲ್ಲಿದ್ದ ತಂಡವನ್ನು ಅಗ್ರ 10ಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು’ ಎಂದು ಸಹ ಸ್ಪರ್ಧಿ ದೇವ್ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.