ಬೆಂಗಳೂರು: ಮಂಗಳೂರಿನ ಬೋಳಾರದ ತ್ರಿಶಲ್ ಕೆ.ಪೂಜಾರಿ ಅವರು ಯಜಮಾನರಾಗಿರುವ ಎರಡು ಜೋಡಿ ಕೋಣಗಳು ಹಲವು ಕಾರಣಗಳಿಂದ ‘ಬೆಂಗಳೂರು ಕಂಬಳ’ದ ಆಕರ್ಷಣೆಯಾಗಿದ್ದವು. ಬಂಟ್ವಾಳ ತಾಲ್ಲೂಕಿನ ಕಕ್ಯಪದವಿನಲ್ಲಿ ನಡೆದ ಸತ್ಯ–ಧರ್ಮ ಜೋಡುಕರೆ ಕಂಬಳದಲ್ಲಿ ಅಡ್ಡಹಲಗೆ ವಿಭಾಗದಲ್ಲಿ ಮೊದಲ ಸ್ಥಾನವನ್ನು ಕಾಟಿ–ರಾಜ ಹೆಸರಿನ ಕೋಣಗಳು ಗೆದ್ದಿದ್ದವು.
ಕನೆಹಲಗೆ ವಿಭಾಗದಲ್ಲಿ ಓಡುವ ಇವರದೇ ಮಾಲೀಕತ್ವದ ಕಾಳ–ಕುಟ್ಟಿ ಹೆಸರಿನ ಕೋಣಗಳನ್ನು ಓಡಿಸುವ ಬೈಂದೂರು ಮಹೇಶ ಪೂಜಾರಿ ಅವರೂ ಆಕರ್ಷಣೆಯ ಬಿಂದು. ಕನ್ನಡದ ಸೂಪರ್ ಹಿಟ್ ಚಿತ್ರ ‘ಕಾಂತಾರ’ದ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಕೋಣಗಳನ್ನು ಓಡಿಸುವ ತರಬೇತಿ ನೀಡಿದವರು ಈ ಕಂಬಳದ ‘ಜಾಕಿ’.
‘ರಿಷಬಣ್ಣನ ಸ್ನೇಹಿತ ರಾಘು ಶೆಟ್ಟಿ ನನ್ನನ್ನು ಭೇಟಿಯಾಗಿದ್ದರು. ಕೋಣ ಓಡಿಸುವ ತರಬೇತಿಯಲ್ಲಿ ರಿಷಬ್ ಶೆಟ್ಟಿ ಆಸಕ್ತಿ ಹೊಂದಿರುವುದಾಗಿ ತಿಳಿಸಿದರು. ನಂತರ ರಿಷಬ್ ಶೆಟ್ಟಿ ಬೋಳಾರಕ್ಕೆ ಬಂದು ಕೋಣಗಳನ್ನು ನೋಡಿದರು. ಕೋಣ ಓಡಿಸುವುದನ್ನು ಕಲಿಯಬೇಕೆಂಬ ಅಪೇಕ್ಷೆಯನ್ನು ತಿಳಿಸಿದರು. ನಾವು ‘ಕುದಿ’ (ರೇಸ್‌ಗೆ ಮುನ್ನ ಅಭ್ಯಾಸ) ನಡೆಸುವ ಸಮಯದಲ್ಲಿ ಬಂದಿದ್ದರು. ಪ್ರಯತ್ನಿಸಿದರೆ ಓಡಿಸಲು ಆಗುತ್ತದೆ ಎಂದಿದ್ದೆ’.
‘ಆರಂಭದಲ್ಲಿ ಎರಡು ಸಲ ಬಿದ್ದು ಗಾಯಗೊಂಡಿದ್ದು ಇದೆ. ಹೀಗೆ ಸುಮಾರು ಒಂದೂವರೆ ತಿಂಗಳ ಕಾಲ ಅವರಿಗೆ ತರಬೇತಿ ನಡೆದಿತ್ತು. ಅವರು ಒಬ್ಬ ಸ್ಟಾರ್ ಆದ ಕಾರಣ ನಮಗೆ ಭಯವಿತ್ತು. ಆದರೆ ಅವರು ಕಲಿಯಲು ಧೈರ್ಯ ತೋರಿಸಿದ್ದ ಕಾರಣ ನಮಗೆ ಒತ್ತಡವೆನಿಸಲಿಲ್ಲ’ ಎಂದು ವಿವರಿಸಿದರು. ನಂತರ ನೀವೇ ಸಿನಿಮಾ ನೋಡಿದ್ದೀರಲ್ಲ ಎಂದು ಮುಗುಳ್ನಕ್ಕರು. ಈ ಕಾಳ–ಕುಟ್ಟ ಕೋಣಗಳು ಸಿಕ್ಕಾಬಟ್ಟೆ ಆಕ್ರಮಣದ ಸ್ವಭಾವದವು. ಕಾಳನಿಗೆ 10–12 ವರ್ಷ ವಯಸ್ಸು. ಕುಟ್ಟನಿಗೆ 16 ವರ್ಷ.
ಅಡ್ಡಹಲಗೆ ವಿಭಾಗದಲ್ಲಿ ಕಾಟಿ–ರಾಜ ಹೆಸರಿನ ಕೋಣಗಳನ್ನು ಓಡಿಸುವ ಸಾವ್ಯ ಗಂಗಯ್ಯ ಪೂಜಾರಿ ‘ಬೆಂಗಳೂರಿನ ಕಂಬಳ’ದ ಅತಿ ಹಿರಿಯ ಜಾಕಿ. ಅವರಿಗೆ 35 ವರ್ಷಗಳ ಅನುಭವವಿದೆ. ಕೆಲವರಿಗೆ ಅವರು ತರಬೇತಿಯನ್ನೂ ನೀಡಿದ್ದಾರೆ. 17 ವರ್ಷ ಇರುವಾಗಲೇ ಮೊದಲ ಬಾರಿ ಕೋಣಗಳನ್ನು ಓಡಿಸಿದ್ದ ಸಾಹಸಿ. ಕಾಟಿ– ರಾಜ ಕೋಣಗಳು ಕಂಬಳದ ಅತಿ ದೊಡ್ಡ ಕೋಣಗಳು.
ಯಜಮಾನ ತ್ರಿಶಲ್ ಕೆ.ಪೂಜಾರಿ ಅವರ ಮನೆಯಿರುವುದು ಮಂಗಳಾದೇವಿ ದೇವಸ್ಥಾನದ ಹಿಂದುಗಡೆ. 18 ವರ್ಷವಿರುವಾಗಲೇ ಕಂಬಳದ ಕೋಣಗಳನ್ನು ಹೊಂದಿದ್ದ ಅವರು ಅತಿ ಕಿರಿಯ ಯಜಮಾನ ಎನಿಸಿದ್ದಾರೆ.
‘ಕೋಣಗಳನ್ನು ಸಾಕಲು ವರ್ಷಕ್ಕೆ ₹20 ರಿಂದ 25 ಲಕ್ಷ ಖರ್ಚು ತಗಲುತ್ತದೆ. ಆಹಾರ, ಆರೋಗ್ಯದ ಕಾಳಜಿ ಜೊತೆಗೆ, ನಿತ್ಯ ಶುದ್ಧ ತೆಂಗಿನೆಣ್ಣೆಯ ಮಸಾಜು ಬೇಕಾಗುತ್ತದೆ’ ಎನ್ನುತ್ತಾರೆ ಬೋಳಾರ ಶ್ರವಣ ಪೂಜಾರಿ.
ಕೋಣ ತಿವಿದು ಗಾಯ
ಬೆಂಗಳೂರು ಕಂಬಳದಲ್ಲಿ ಕೋಣವೊಂದು ಪೊಲೀಸರೊಬ್ಬರಿಗೆ ತಿವಿದು, ಗಾಯಗೊಳಿಸಿದೆ.
ಕಂಬಳದ ಬಂದೋಬಸ್ತ್‌ಗೆ ಬಂದಿದ್ದ ಪೊಲೀಸರು, ಕುತೂಹಲದಿಂದ ಕೋಣದ ಬಳಿ ಹೋಗಿದ್ದಾಗ, ಅದು ತಿವಿದಿದೆ. ಕಣ್ಣಿನ ಭಾಗದಲ್ಲಿ ಗಾಯಗೊಂಡ ಒಬ್ಬರನ್ನು ಆಸ್ಪತ್ರೆ ಸೇರಿಸಲಾಗಿದೆ.
ಕಂಬಳ ನೋಡುವ ಆಸೆ ಈಡೇರಿತು
ನಾವು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದವರು. ಕಂಬಳದ ಬಗ್ಗೆ ಕೇಳಿ ಗೊತ್ತಿತ್ತು. ಕಾಂತಾರ ಸಿನಿಮಾ ನೋಡಿದ ಮೇಲೆ ಕಂಬಳ ನೋಡಬೇಕು ಎಂಬ ಆಸಕ್ತಿ ಉಂಟಾಗಿತ್ತು. ಬೆಂಗಳೂರಿನಲ್ಲಿ ನಾವು ಕೆಲಸ ಮಾಡುತ್ತಿರುವುದರಿಂದ ಉಡುಪಿ, ಮಂಗಳೂರಿಗೆ ಹೋಗಿ ಕಂಬಳ ನೋಡಲು ಆಗುತ್ತಿರಲಿಲ್ಲ. ಬೆಂಗಳೂರಿನಲ್ಲಿಯೇ ಕಂಬಳ ಮಾಡಿರುವುದು ಖುಷಿ ನೀಡಿದೆ.
-ಶ್ರುತಿ ಹೆಗಡೆ, ಭವ್ಯಾ ಖಾಸಗಿ ಕಂಪನಿ ಉದ್ಯೋಗಿಗಳು
ಕಂಬಳಕ್ಕಾಗಿಯೇ ಬೆಂಗಳೂರಿಗೆ ಬಂದೆ
ಪ್ರವಾಸಕ್ಕೆಂದು ಭಾರತಕ್ಕೆ ಬಂದಿದ್ದೆವು. ಎರಡು ವಾರದಗಳ ಹಿಂದೆ ಗೋವಾದಲ್ಲಿ ಇದ್ದಾಗ ಬೆಂಗಳೂರಿನಲ್ಲಿ ಕಂಬಳ ಇದೆಯೊಂದು ಗೊತ್ತಾಯಿತು. ಹೀಗಾಗಿ ಬೆಂಗಳೂರಿಗೆ ಬಂದೆವು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವಿಡಿಯೊ ನೋಡಿದ್ದೆವು. ನಮ್ಮ ದೇಶದಲ್ಲಿ ಕುದುರೆಗಳ ಓಟ ಇದ್ದರೂ, ಅದು ಇಷ್ಟು ದೊಡ್ಡ ಪ್ರಮಾಣದಲ್ಲಿ, ಇಷ್ಟು ಅದ್ಧೂರಿಯಾಗಿ ನಡೆಯುವುದಿಲ್ಲ. ಕೋಣಗಳ ವೇಗವಾಗಿ ಓಡುವುದನ್ನು ನೋಡಿ ರೋಮಾಂಚನವಾಗುತ್ತದೆ. ಇಲ್ಲಿನ ಜನರಿಂದ ನಮಗೆ ವಿಶೇಷ ಆತಿಥ್ಯ ಸಿಕ್ಕಿತು.
-ಲಿಯೋನಿ, ಯುಕೆ ಪ್ರಜೆ
ಬಾಲಕಿಯರ ಆರೈಕೆ
ಕಾಂತಾರ ಸಿನಿಮಾದಲ್ಲಿ ನಟ ರಿಷಭ್ ಶೆಟ್ಟಿ ಓಡಿಸಿರುವ ಕೋಣಗಳನ್ನು ಈಗ 13 ವರ್ಷದ ಬಾಲಕಿ ಆರೈಕೆ ಮಾಡುತ್ತಿರುವುದು ವಿಶೇಷ. ಬೈಂದೂರಿನ ಬೋಳಂಬಳ್ಳಿ ಪರಮೇಶ್ವರ್ ಭಟ್ ಎನ್ನುವರ ಕೋಣವನ್ನು ಕಾಂತಾರ ಸಿನಿಮಾದಲ್ಲಿ ತೋರಿಸಲಾಗಿದೆ. ಈಗ ಪರಮೇಶ್ವರ ಭಟ್ಟರ ಪುತ್ರಿ 13 ವರ್ಷದ ಶ್ರೀರಾಮ್ ಚೈತ್ರಾ ಆರೈಕೆ ಮಾಡುತ್ತಿದ್ದಾರೆ. ಬಾಲ್ಯದಿಂದಲೇ ಕೋಣಗಳನ್ನು ನೋಡಿಕೊಂಡೇ ಬೆಳೆದ ನನಗೆ ಅವುಗಳ ಜತೆ ವಿಶೇಷ ಕಾಳಜಿ ಇತ್ತು. ಆರನೇ ವಯಸ್ಸಿನಲ್ಲೇ ಅವುಗಳ ಆರೈಕೆಯಲ್ಲಿ ತೊಡಗಿಸಿಕೊಂಡೆ. ಕಳೆದ ಎರಡು ವರ್ಷಗಳಿಂದ ಕಂಬಳಗಳಿಗೆ ಹೋಗುತ್ತಿದ್ದೇನೆ. ಕಂಬಳಗಳು ವಾರಾಂತ್ಯದಲ್ಲಿ ನಡೆಯುವುದರಿಂದ ಕಲಿಕೆಗೇನೂ ತೊಂದೆಯಾಗದು ಎಂದು ಚೈತ್ರಾ ‘ಪ್ರಜಾವಾಣಿ’ಯೊಂದಿಗೆ ತಮ್ಮ ಅನುಭವ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.