ADVERTISEMENT

Paris Olympics: ಬೋಪಣ್ಣಗೆ ಪದಕ ಗೆಲ್ಲಲು ಕೊನೆಯ ಅವಕಾಶ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 23:30 IST
Last Updated 26 ಜುಲೈ 2024, 23:30 IST
<div class="paragraphs"><p>ಎನ್‌. ಶ್ರೀರಾಮ್‌ ಬಾಲಾಜಿ ಮತ್ತು ರೋಹನ್‌ ಬೋಪಣ್ಣ</p></div>

ಎನ್‌. ಶ್ರೀರಾಮ್‌ ಬಾಲಾಜಿ ಮತ್ತು ರೋಹನ್‌ ಬೋಪಣ್ಣ

   

–ಪಿಟಿಐ ಚಿತ್ರ

ಪ್ಯಾರಿಸ್‌: ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಅತಿ ಹಿರಿಯ ಆಟಗಾರ ರೋಹನ್‌ ಬೋಪಣ್ಣ ಅವರು ಪದಕ ಗೆಲ್ಲುವ ಕೊನೆಯ ಪ್ರಯತ್ನದಲ್ಲಿದ್ದಾರೆ.

ADVERTISEMENT

ಮೂರನೇ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ 44 ವರ್ಷ ವಯಸ್ಸಿನ ಬೋಪಣ್ಣ ಅವರು ಶ್ರೀರಾಮ್‌ ಬಾಲಾಜಿ ಅವರೊಂದಿಗೆ ಟೆನಿಸ್‌ ಪುರುಷರ ಡಬಲ್ಸ್‌ನಲ್ಲಿ ಶನಿವಾರ ಅಭಿಯಾನ ಆರಂಭಿಸುವರು. ಮೊದಲ ಸುತ್ತಿನಲ್ಲಿ ಅವರು, ಫ್ರಾನ್ಸ್‌ನ ಫ್ಯಾಬಿಯನ್ ರೆಬೌಲ್ ಮತ್ತು ಎಡ್ವರ್ಡ್ ರೋಜರ್ ವ್ಯಾಸೆಲಿನ್ ಜೋಡಿಯನ್ನು ಎದುರಿಸಲಿದ್ದಾರೆ. 

ಟೆನಿಸ್‌ನಲ್ಲಿ ಭಾರತಕ್ಕೆ ಈತನಕ ಕೇವಲ ಒಂದು ಒಲಿಂಪಿಕ್‌ ಪದಕ ಒಲಿದಿದೆ. 1996ರ ಅಟ್ಲಾಂಟಾ ಕ್ರೀಡಾಕೂಟದಲ್ಲಿ ಲಿಯಾಂಡರ್‌ ಪೇಸ್‌, ಪುರುಷರ ಸಿಂಗಲ್ಸ್‌ನಲ್ಲಿ ಕಂಚು ಗೆದ್ದಿದ್ದರು.

2012ರಲ್ಲಿ ಬೋಪಣ್ಣ ಅವರು ಮಹೇಶ್‌ ಭೂಪತಿ ಅವರೊಂದಿಗೆ ಎರಡನೇ ಸುತ್ತು ಪ್ರವೇಶಿಸಿದ್ದರು. 2016ರಲ್ಲಿ ಪೇಸ್‌ ಜೊತೆ ಮೊದಲ ಸುತ್ತಿನಲ್ಲಿ ನಿರಾಸೆ ಅನುಭವಿಸಿದ್ದರು. ಆದರೆ, ಅದೇ ಕೂಟದಲ್ಲಿ ಸಾನಿಯಾ ಮಿರ್ಜಾ ಅವರೊಂದಿಗೆ ಮಿಶ್ರ ಡಬಲ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು, ಸ್ವಲ್ಪದರಲ್ಲೇ ಕಂಚನ್ನು ತಪ್ಪಿಸಿಕೊಂಡಿದ್ದರು. ಎಟಿಪಿ ಟೂರ್‌ ರ‍್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಕೊಡಗಿನ ಬೋಪಣ್ಣ ಅವರಿಗೆ ಪದಕ ಜಯಿಸಲು ಇದು ಅವಕಾಶವಾಗಿದೆ.

ನಗಾಲ್‌ಗೆ ಕೊರೆಂಟಿನ್‌ ಸವಾಲು: ಭಾರತದ ಅಗ್ರಮಾನ್ಯ ಟೆನಿಸ್‌ ಸಿಂಗಲ್ಸ್‌ ಆಟಗಾರ ಸುಮಿತ್‌ ನಗಾಲ್‌ ಮೊದಲ ಸುತ್ತಿನಲ್ಲಿ ಆತಿಥೇಯ ಫ್ರಾನ್ಸ್‌ನ ಮೌಟೆಟ್ ಕೊರೆಂಟಿನ್ ಅವರನ್ನು ಎದುರಿಸುವರು.

ಎಟಿಪಿ ಕ್ರಮಾಂಕದಲ್ಲಿ 80ನೇ ಸ್ಥಾನದಲ್ಲಿರುವ 26 ವರ್ಷ ವಯಸ್ಸಿನ ನಗಾಲ್‌, ಕೊರೆಂಟಿನ್‌ ಜೊತೆ ಒಟ್ಟಾರೆ 2–2 ಗೆಲುವಿನ ದಾಖಲೆಯನ್ನು ಹೊಂದಿದ್ದಾರೆ. ರ‍್ಯಾಂಕಿಂಗ್‌ನಲ್ಲಿ ನಗಾಲ್‌, ಫ್ರೆಂಚ್‌ ಆಟಗಾರನಿಗಿಂತ 12 ಸ್ಥಾನ ಹಿಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.