ನವದೆಹಲಿ:ಟೋಕಿಯೊ ಒಲಿಂಪಿಕ್ಸ್ ಟಿಕೆಟ್ ಗಿಟ್ಟಿಸಿರುವ ಭಾರತದ ಬಾಕ್ಸರ್‌ಗಳಾದ ಸತೀಶ್ ಕುಮಾರ್ ಹಾಗೂ ಆಶಿಶ್ ಕುಮಾರ್ ಅವರು ಸ್ಪೇನ್‌ನ ಕ್ಯಾಸ್ಟೆಲೊನ್‌ನಲ್ಲಿ ನಡೆಯುತ್ತಿರುವ ಬಾಕ್ಸಮ್ ಅಂತರರಾಷ್ಟ್ರೀಯ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಸುಮಿತ್ ಸಂಗ್ವಾನ್ ಕೂಡ ನಾಲ್ಕರ ಘಟ್ಟ ಪ್ರವೇಶಿಸಿದರು.
ಗುರುವಾರ ರಾತ್ರಿ ನಡೆದ 91+ ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್ ಬೌಟ್‌ನಲ್ಲಿ ಸತೀಶ್ ಕುಮಾರ್ 5–0ಯಿಂದ ಡೆನ್ಮಾರ್ಕ್‌ನ ಗಿವ್‌ಸ್ಕೊವ್ ನೆಲ್ಸನ್ ಅವರನ್ನು ಪರಾಭವಗೊಳಿಸಿದರೆ, ಏಷ್ಯನ್ ಬೆಳ್ಳಿ ಪದಕ ವಿಜೇತ ಆಶಿಶ್ (75 ಕೆಜಿ) 4–1ರಿಂದ ಇಟಲಿಯ ರೆಮೊ ಸಾಲ್ವಟ್ಟಿ ಎದುರು ಗೆದ್ದು ಬೀಗಿದರು. 81 ಕೆಜಿ ವಿಭಾಗದಲ್ಲಿ ಸುಮಿತ್ ಅವರಿಗೂ ಸುಲಭದ ಜಯ ಒಲಿಯಿತು. 4–1ರಿಂದ ಅವರು ಬೆಲ್ಜಿಯಂನ ಮೊಹರ್ ಎಲ್ ಜಿಯಾದ್ ಅವರನ್ನು ಮಣಿಸಿದರು.
ಇದರೊಂದಿಗೆ ಟೂರ್ನಿಯಲ್ಲಿ ಒಟ್ಟಾರೆ ಆರು ಪುರುಷ ಹಾಗೂ ನಾಲ್ಕು ಮಹಿಳೆಯರು ಸೇರಿ ಭಾರತದ 10 ಮಂದಿ ಬಾಕ್ಸರ್‌ಗಳು ನಾಲ್ಕರ ಘಟ್ಟ ತಲುಪಿದಂತಾಗಿದೆ.
ಗುರುವಾರ ಮೊಹಮ್ಮದ್ ಹಸಾಮುದ್ದೀನ್ (57 ಕೆಜಿ), ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಜೋಡಿ ಮನೀಷ್ ಕೌಶಿಕ್ (63 ಕೆಜಿ) ಹಾಗೂ ವಿಕಾಸ್ ಕೃಷ್ಣ (69 ಕೆಜಿ) ಕೂಡ ಪದಕದ ಸುತ್ತಿಗೆ ಲಗ್ಗೆಯಿಟ್ಟಿದ್ದರು.
ಮಹಿಳಾ ವಿಭಾಗದಲ್ಲಿ ಮೇರಿ ಕೋಮ್ (51 ಕೆಜಿ), ಪೂಜಾ ರಾಣಿ (75 ಕೆಜಿ), ಸಿಮ್ರನ್ ಜೀತ್ ಕೌರ್ (60 ಕೆಜಿ) ಹಾಗೂ ಜಾಸ್ಮಿನ್ (57 ಕೆಜಿ) ಸೆಮಿಫೈನಲ್ ಪ್ರವೇಶಿಸಿದವರು.
ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಅಮಿತ್ ಪಂಗಲ್ (52 ಕೆಜಿ) ಅವರು ಯೂರೋಪಿಯನ್ ಚಿನ್ನದ ಪದಕ ವಿಜೇತ, ಸ್ಪೇನ್‌ನ ಗೇಬ್ರಿಯಲ್ ಎಸ್ಕೋಬಾರ್ ಎದುರು ಆಘಾತ ಅನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.