ADVERTISEMENT

ಒಲಿಂಪಿಕ್ಸ್‌ ಬಾಕ್ಸಿಂಗ್ ವಿಶ್ವ ಕ್ವಾಲಿಫೈಯರ್‌: ನಿಶಾಂತ್‌, ಅವಿನಾಶ್ ಮುನ್ನಡೆ

ಪಿಟಿಐ
Published 26 ಮೇ 2024, 15:42 IST
Last Updated 26 ಮೇ 2024, 15:42 IST
ನಿಶಾಂತ್‌ ದೇವ್‌
ನಿಶಾಂತ್‌ ದೇವ್‌   

ಬ್ಯಾಂಕಾಕ್‌: ಭಾರತದ ಸ್ಪರ್ಧಿಗಳು  ಒಲಿಂಪಿಕ್ಸ್‌ ಬಾಕ್ಸಿಂಗ್ ವಿಶ್ವ ಕ್ವಾಲಿಫೈಯರ್‌ ಟೂರ್ನಿಯ ಮೂರನೇ ದಿನವಾದ ಭಾನುವಾರವೂ ಪ್ರಾಬಲ್ಯ ಮುಂದುವರಿಸಿದರು.

ಅವಿನಾಶ್ ಜಮ್ವಾಲ್ (63.5 ಕೆಜಿ) ಮತ್ತು ನಿಶಾಂತ್ ದೇವ್ (71 ಕೆಜಿ) ತಮ್ಮ ವಿಭಾಗಗಳಲ್ಲಿ ಸುಲಭ ಗೆಲುವು ದಾಖಲಿಸಿ ಎರಡನೇ ಸುತ್ತಿಗೆ ಮುನ್ನಡೆದರು.

ಒಲಿಂಪಿಯನ್‌ ಶಿವ ಥಾಪಾ ಬದಲಿಗೆ ಸ್ಥಾನ ಪಡೆದಿದ್ದ ಅವಿನಾಶ್‌ ಅವರು ಮೊದಲ ಸುತ್ತಿನ ಪಂದ್ಯದಲ್ಲಿ ಲಿಥುವೇನಿಯಾದ ಆಂಡ್ರಿಜಸ್ ಲಾವ್ರೆನೋವಾಸ್ ವಿರುದ್ಧ ಉತ್ತಮವಾಗಿ ಆಡಿದರು. ಹಿಮಾಚಲ ಪ್ರದೇಶದ ಬಾಕ್ಸರ್‌ 5-0 ಸರ್ವಾನುಮತದ ತೀರ್ಪಿನಿಂದ ಎದುರಾಳಿಯನ್ನು ಸೋಲಿಸಿದರು.

ADVERTISEMENT

ನಂತರ ನಡೆದ ಮತ್ತೊಂದು ಪಂದ್ಯದಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ದೇವ್ ಅವರು 5-0 ಅಂತರದ ಗಿನಿಯಾ– ಬಿಸ್ಸಾವ್‌ನ ಅರ್ಮಾಂಡೋ ಬಿಘಫಾ ಅವರನ್ನು ಮಣಿಸಿದರು. ಆರಂಭದಿಂದಲೇ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದ ದೇವ್‌, ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗಲಿಲ್ಲ. ಎರಡನೇ ಸುತ್ತಿನಲ್ಲೂ ಪಾರಮ್ಯ ಮುಂದುವರಿಸಿದ ಅವರು, ಸರ್ವಾನುಮತದ ತೀರ್ಪಿನಿಂದ ಗೆದ್ದರು.

ಥಾಯ್ಲೆಂಡ್‌ ರಾಜಧಾನಿಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಭಾರತದ ಹತ್ತು ಬಾಕ್ಸರ್‌ಗಳ ಪೈಕಿ ಸಚಿನ್ ಸಿವಾಚ್ (57 ಕೆಜಿ) ಮತ್ತು ಅಭಿಮನ್ಯು ಲೂರಾ (80 ಕೆಜಿ) ಅವರು ತಮ್ಮ ವಿಭಾಗದ ಮೊದಲ ಸುತ್ತಿನಲ್ಲಿ ಜಯ ಸಾಧಿಸಿದ್ದಾರೆ. ಅಮಿತ್ ಪಂಗಲ್ (51 ಕೆಜಿ), ಸಂಜೀತ್ (92 ಕೆಜಿ), ನರೇಂದರ್ ಬರ್ವಾಲ್ (92 ಕೆಜಿ) ಜೊತೆಗೆ ಮಹಿಳಾ ಬಾಕ್ಸರ್‌ಗಳಾದ ಜಾಸ್ಮಿನ್ ಲಂಬೋರಿಯಾ (57 ಕೆಜಿ) ಮತ್ತು ಅರುಂಧತಿ ಚೌಧರಿ (66 ಕೆಜಿ) ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ.

ಸೋಮವಾರ ಮಹಿಳೆಯರ 60 ಕೆಜಿ ವಿಭಾಗದಲ್ಲಿ ಭಾರತದ ಅಂಕುಶಿತಾ ಬೊರೊ ಅವರು ಮಂಗೋಲಿಯಾದ ನಮುನ್ ಮೊಂಖೋರ್ ವಿರುದ್ಧ ಅಭಿಯಾನ ಆರಂಭಿಸುವರು. ಪುರುಷರ 80 ಕೆಜಿ ವಿಭಾಗದಲ್ಲಿ ಅಭಿಮನ್ಯು ಲೂರಾ 32ರ ಘಟ್ಟದ ಸುತ್ತಿನಲ್ಲಿ ಐರ್ಲೆಂಡ್‌ನ ಕೆಲಿನ್ ಕ್ಯಾಸಿಡಿ ವಿರುದ್ಧ ಸೆಣಸಲಿದ್ದಾರೆ.

ಭಾರತದ ನಿಖತ್ ಜರೀನ್ (50 ಕೆಜಿ), ಪ್ರೀತಿ (54 ಕೆಜಿ), ಮತ್ತು ಲವ್ಲಿನಾ ಬೊರ್ಗೊಹೈನ್ (75 ಕೆಜಿ) ಅವರು ಏಷ್ಯನ್ ಕ್ರೀಡಾಕೂಟದ ಮೂಲಕ ಈಗಾಗಲೇ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಪ್ರವೇಶ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.