ADVERTISEMENT

ಬಾಕ್ಸಿಂಗ್ | ಏಷ್ಯನ್ ಯೂತ್ ಚಾಂಪಿಯನ್‌ಷಿಪ್‌: ಭಾರತದ ನಾಲ್ವರು ಸೆಮಿಗೆ

ಪಿಟಿಐ
Published 1 ಮೇ 2024, 13:43 IST
Last Updated 1 ಮೇ 2024, 13:43 IST
51 ಕೆ.ಜಿ. ವಿಭಾಗದ ಪಂದ್ಯದಲ್ಲಿ ಎದುರಾಳಿಗೆ ಪಂಚ್‌ ನೀಡುತ್ತಿರುವ ಭಾರತದ ಆರ್ಯನ್
51 ಕೆ.ಜಿ. ವಿಭಾಗದ ಪಂದ್ಯದಲ್ಲಿ ಎದುರಾಳಿಗೆ ಪಂಚ್‌ ನೀಡುತ್ತಿರುವ ಭಾರತದ ಆರ್ಯನ್   

ಅಸ್ತಾನಾ (ಕಜಕಸ್ತಾನ): ಭಾರತದ ಆರ್ಯನ್, ಯಶವರ್ಧನ್ ಸಿಂಗ್‌, ಪ್ರಿಯಾಂಶು ಮತ್ತು ಸಾಹಿಲ್ ಅವರು ಅಧಿಕಾರಯುತ ಗೆಲುವಿನೊಡನೆ ಎಎಸ್‌ಬಿಸಿ ಏಷ್ಯನ್ 22 ವರ್ಷದೊಳಗಿನವರ ಮತ್ತು ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಸೆಮಿಫೈನಲ್ ತಲುಪಿದರು.

51 ಕೆ.ಜಿ. ವಿಭಾಗದಲ್ಲಿ ಆರ್ಯನ್ ಅವರು ಉಜ್ಬೇಕಿಸ್ತಾನದ ಜುರಯೇವ್ ಶಕರ್‌ಬಾಯ್ ಅವರನ್ನು 5–0 ಯಿಂದ ಸರ್ವಾನುಮತದ ತೀರ್ಪಿನಲ್ಲಿ ಸೋಲಿಸಿ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಯಶವರ್ಧನ್ 63.5 ಕೆ.ಜಿ. ವಿಭಾಗದಲ್ಲಿ ಇರಾನ್‌ನ ಮಿರ್‌ಅಹಮದಿ ಬಾಬಾಹೀದಾರಿ ವಿರುದ್ಧ ಮೊದಲ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರೂ ಚೇತರಿಸಿಕೊಂಡ 4–1 ಅಂತರದ ಜಯ ಸಂಪಾದಿಸಿದರು.

ಪ್ರಿಯಾಂಶು (71 ಕೆ.ಜಿ) ಮತ್ತು ಸಾಹಿಲ್ (80 ಕೆ.ಜಿ) ಅವರು ತಮ್ಮ ಎದುರಾಳಿಗಳನ್ನು ಸೋಲಿಸಲು ಅಷ್ಟೇನೂ ಪ್ರಯಾಸಪಡಲಿಲ್ಲ. ಅವರು ಕ್ರಮವಾಗಿ ಚೀನಾ ತೈಪೆಯ ವು ಯು ಎನ್‌ ಮತ್ತು ತುರ್ಕಮೆನಿಸ್ತಾನದ ಯಕ್ಲಿವೊಮ್ ಅಬ್ದಿರ್ಮಾ ಅವರನ್ನು ಸೋಲಿಸಿದರು.

ADVERTISEMENT

ಆದರೆ 57 ಕೆ.ಜಿ. ವಿಭಾಗದಲ್ಲಿ ಜತಿನ್ ಹಿನ್ನಡೆ ಕಂಡರು. ಉಜ್ಬೇಕಿಸ್ತಾನದ ಎ.ನಾಡಿರ್ಬೆಕ್ ಅವರು 4–1 ರಿಂದ ಭಾರತದ ಬಾಕ್ಸರ್‌ ವಿರುದ್ಧ ಜಯಗಳಿಸಿದರು.

ಯುವ ವಿಭಾಗದ ಸೆಮಿಫೈನಲ್ ಪಂದ್ಯಗಳು ಶುಕ್ರವಾರ ನಡೆಯಲಿವೆ.

ಮಂಗಳವಾರ ತಡರಾತ್ರಿ ನಡೆದ 22 ವರ್ಷದೊಳಗಿನವರ ಪಂದ್ಯಗಳಲ್ಲಿ ಜುಗ್ನೂ (86 ಕೆ.ಜಿ), ತಮ್ಮನಾ (50 ಕೆ.ಜಿ) ಮತ್ತು ಪ್ರೀತಿ (54 ಕೆ.ಜಿ) ಅವರು ಜಯಗಳಿಸಿ ಸೆಮಿಫೈನಲ್ ತಲುಪಿದ್ದರು.

ಗುರುವಾರ ಎಂಟು ಮಂದಿ ಬಾಕ್ಸರ್‌ಗಳು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸೆಣಸಾಡಲಿದ್ದಾರೆ. ಎಂ. ಜಾದುಮಣಿ ಸಿಂಗ್ (51 ಕೆ.ಜಿ), ಆಶಿಶ್‌ (54 ಕೆ.ಜಿ), ನಿಖಿಲ್ (57 ಕೆ.ಜಿ), ಅಜಯ್ ಕುಮಾರ್ (63.5 ಕೆ.ಜಿ), ಅಂಕುಶ್ (71 ಕೆ.ಜಿ) ಮತ್ತು ಧ್ರುವ್‌ ಸಿಂಗ್ (80 ಕೆ.ಜಿ) ಅವರು ‍ಪುರುಷರ ವಿಭಾಗದಲ್ಲಿ ಮತ್ತು ಗುಡ್ಡಿ (48 ಕೆ.ಜಿ) ಮತ್ತು ಪೂನಮ್ (57 ಕೆ.ಜಿ) ಮಹಿಳಾ ವಿಭಾಗದಲ್ಲಿ ಅವರು ಸ್ಪರ್ಧಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.