ಏಕ್ತರಿನ್‌ಬರ್ಗ್, ರಷ್ಯಾ:ಬಲಿಷ್ಠ ಪಂಚ್‌ಗಳ ಮೂಲಕ ಎದುರಾಳಿಗಳನ್ನು ತಬ್ಬಿಬ್ಬುಗೊಳಿಸಿದ ಅಮಿತ್ ಪಂಘಲ್ ಮತ್ತು ಮನೀಷ್ ಕೌಶಿಕ್ ಅವರು ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಮಂಗಳವಾರ ನಡೆದ ಪುರುಷರ 52 ಕೆ.ಜಿ. ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಅಮಿತ್ 5–0 ಪಾಯಿಂಟ್ಸ್‌ನಿಂದ ಟರ್ಕಿಯ ಬತುಹಾನ್ ಸಿಟ್‌ಫಸಿ ಅವರನ್ನು ಸೋಲಿಸಿದರು.
ಎರಡನೇ ಶ್ರೇಯಾಂಕದ ಬಾಕ್ಸರ್ ಅಮಿತ್, ಮುಂದಿನ ಸುತ್ತಿನಲ್ಲಿ ಫಿಲಿಪಿನೊ ಕಾರ್ಲೊ ಪಾಲಮ್ ಎದುರು ಸೆಣಸಲಿದ್ದಾರೆ.
ಹೋದ ವರ್ಷ ಜಕಾರ್ತದಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟದ ಸೆಮಿಫೈನಲ್‌ನಲ್ಲಿ ಅಮಿತ್ ಅವರು ಪಾಲಮ್ ಎದುರು ಗೆದ್ದಿದ್ದರು.
23ರ ಹರೆಯದ ಅಮಿತ್, ತನಗಿಂತಲೂ ತುಸು ಎತ್ತರವಾಗಿದ್ದ ಎದುರಾಳಿಯ ಮೇಲೆ ಆರಂಭದಿಂದಲೇ ಪ್ರಹಾರ ನಡೆಸಿದರು. ಮುಖ ಮತ್ತು ತಲೆಗೆ ಶರವೇಗದ ಪಂಚ್‌ಗಳನ್ನು ಮಾಡಿ ಬತುಹಾನ್ ಅವರನ್ನು ಹೈರಾಣಾಗಿಸಿದರು.
63 ಕೆ.ಜಿ ವಿಭಾಗದ ಹದಿನಾರರ ಘಟ್ಟದ ಹಣಾಹಣಿಯಲ್ಲಿ ಮನೀಷ್ 5–0 ಪಾಯಿಂಟ್ಸ್‌ನಿಂದ ಮಂಗೋಲಿಯಾದ ನಾಲ್ಕನೇ ಶ್ರೇಯಾಂಕದ ಬಾಕ್ಸರ್ ಚಿಂಜೋರಿಗ್ ಬಾತರ್‌ಸುಕ್‌ಗೆ ಆಘಾತ ನೀಡಿದರು.
ಮುಂದಿನ ಸುತ್ತಿನಲ್ಲಿ ಮನೀಷ್ ಅವರು ಬ್ರೆಜಿಲ್‌ನ ವಾಂಡರ್ಸನ್ ಡಿ ಒಲಿವಿರಾ ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಒಲಿವಿರಾ, ಜಪಾನ್‌ನ ಸಯಿಸುಕ್ ನರಿಮತ್ಸು ಎದುರು ಗೆದ್ದರು.
ಮನೀಷ್ ಅವರು ಇದೇ ಮೊದಲ ಸಲ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.