ADVERTISEMENT

ವಿಶ್ವಕಪ್‌ ಬಾಕ್ಸಿಂಗ್‌: ಫೈನಲ್‌ಗೆ ಲಗ್ಗೆಯಿಟ್ಟ ಸತೀಶ್‌ ಕುಮಾರ್‌

ಪಿಟಿಐ
Published 19 ಡಿಸೆಂಬರ್ 2020, 10:29 IST
Last Updated 19 ಡಿಸೆಂಬರ್ 2020, 10:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್ ಬೆಳ್ಳಿ ಪದಕ ವಿಜೇತ ಸತೀಶ್‌ ಕುಮಾರ್ ಅವರು ಜರ್ಮನಿಯ ಕೊಲೊನ್‌ನಲ್ಲಿ ನಡೆಯುತ್ತಿರುವವಿಶ್ವಕಪ್ ಬಾಕ್ಸಿಂಗ್ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಶುಕ್ರವಾರ ನಡೆದ +91 ಕೆಜಿ ವಿಭಾಗದ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಅವರು ಫ್ರಾನ್ಸ್‌ನ ಜಾಮಿಲಿ ಡಿನಿ ಮೊಯಿನ್ಜ್‌ ಅವರನ್ನು 4–1ರಿಂದ ಪರಾಭವಗೊಳಿಸಿದರು.

ಪ್ರಶಸ್ತಿ ಸುತ್ತಿನ ಬೌಟ್‌ನಲ್ಲಿ ಸತೀಶ್ ಅವರು ಜರ್ಮನಿಯ ನೆಲ್ವಿ ಟಿಫಾಕ್‌ ಅವರನ್ನು ಎದುರಿಸಲಿದ್ದಾರೆ.

ಮಹಿಳೆಯರ 57 ಕೆಜಿ ವಿಭಾಗದಲ್ಲಿ ಸಾಕ್ಷಿ ಹಾಗೂ ಮನೀಷಾ ಕೂಡ ಫೈನಲ್‌ಗೆ ಕಾಲಿಟ್ಟರು. ಅಂತಿಮ ಬೌಟ್‌ನಲ್ಲಿ ಇವರಿಬ್ಬರ ನಡುವೆಯೇ ಸ್ಪರ್ಧೆ ನಡೆಯಲಿದೆ.

ADVERTISEMENT

ಸೆಮಿಫೈನಲ್‌ಗಳಲ್ಲಿ ಮನೀಷಾ ಅವರು 5–0ಯಿಂದ ಭಾರತದವರೇ ಆದ ಸೋನಿಯಾ ಲಾಥರ್ ಅವರನ್ನು ಸೋಲಿಸಿದರೆ, ಸಾಕ್ಷಿ 4–1ರಿಂದ ಜರ್ಮನಿಯ ರಮೋನಾ ಗ್ರಾಫ್‌ ಸವಾಲು ಮೀರಿದರು.

ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಪೂಜಾರಾಣಿ, ನೆದರ್ಲೆಂಡ್ಸ್‌ನ ನೌಚಕ್ ಫಾಂಟಿನ್ ಎದುರು ಮಣಿದು ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು.

ಪುರುಷರ 57 ಕೆಜಿ ವಿಭಾಗದಲ್ಲಿ ಮೊಹಮ್ಮದ್ ಹಸಾಮುದ್ದೀನ್‌ ಹಾಗೂ ಗೌರವ್ ಸೋಳಂಕಿ ಕೂಡ ಕಂಚಿನ ಪದಕಗಳನ್ನು ಗೆದ್ದುಕೊಂಡರು. ನಾಲ್ಕರ ಘಟ್ಟದ ಬೌಟ್‌ಗಳಲ್ಲಿ ಹಸಾಮುದ್ದೀನ್‌ ಜರ್ಮನಿಯ ಹಮ್ಸತ್‌ ಶಾದಲೊಯ್‌ ಎದುರು, ಸೋಳಂಕಿ ಅವರು ಫ್ರಾನ್ಸ್‌ನ ಸ್ಯಾಮ್ಯುಯೆಲ್‌ ಕಿಸ್ತೊಹರಿ ವಿರುದ್ಧ ಮುಗ್ಗರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.