ಬೆಲ್‌ಗ್ರೇಡ್: ಐದು ಬಾರಿಯ ಏಷ್ಯನ್ ಚಾಂಪಿಯನ್, ಭಾರತದ ಶಿವ ಥಾಪಾ ಅವರು ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರೀಕ್ವಾರ್ಟರ್‌ಫೈನಲ್‌ಗೆ ಕಾಲಿಟ್ಟಿದ್ದಾರೆ.
ಶನಿವಾರ ರಾತ್ರಿ ನಡೆದ 63.5 ಕೆಜಿ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಶಿವ ಅವರು 5–0ಯಿಂದ ಸಿಯಾರ ಲಿಯೋನ್‌ನ ಜಾನ್ ಬ್ರೌನ್ ಅವರನ್ನು ಪರಾಭವಗೊಳಿಸಿದರು.
ಭಾರತೀಯರ ಪೈಕಿ ದಿನದ ಕೊನೆಯ ಸ್ಪರ್ಧಿಯಾಗಿದ್ದ ಶಿವ, ಬ್ರೌನ್ ಎದುರು ಸಂಪೂರ್ಣ ಮೇಲುಗೈ ಸಾಧಿಸಿದರು. ಅತ್ಯುತ್ಸಾಹಿಯಾಗಿದ್ದ ಸಿಯಾರ ಲಿಯೋನ್‌ನ ಬಾಕ್ಸರ್ ತಂತ್ರಗಳನ್ನು ಕಾರ್ಯಗತಗೊಳಿಸುವಲ್ಲಿ ಎಡವಿದ್ದು, ಶಿವ ಗೆಲುವನ್ನು ಸುಲಭವಾಗಿಸಿತು. ಹುಕ್ ಸೇರಿದಂತೆ ಚಾಣಾಕ್ಷ ಕೌಶಲಗಳಿಂದ ಗಮನಸೆಳೆದ ಭಾರತದ ಬಾಕ್ಸರ್ ಮೂರೂ ಸುತ್ತುಗಳಲ್ಲಿ ಪಾರಮ್ಯ ಮೆರೆದರು.
ಈ ಹಿಂದೆ ವಿಶ್ವಕಪ್‌ನಲ್ಲಿ ಕಂಚು ಗೆದ್ದಿರುವ ಶಿವ ಅವರು, 16ರ ಘಟ್ಟದ ಬೌಟ್‌ನಲ್ಲಿ ಫ್ರಾನ್ಸ್‌ನ ಲೂನೆಸ್ ಹಮ್ರೊಯಿ ಎದುರು ಕಣಕ್ಕಿಳಿಯಲಿದ್ದಾರೆ.
ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಸಚಿನ್ (80 ಕೆಜಿ ವಿಭಾಗ) ಅಭಿಯಾನ ಅಂತ್ಯವಾಯಿತು. ಎರಡನೇ ಸುತ್ತಿನ ಬೌಟ್‌ನಲ್ಲಿ ಅವರು 1–4ರಿಂದ ಅಮೆರಿಕದ ರಾಬಿ ಗೊನ್ಜಾಲೆಂಜ್ ಎದುರು ಎಡವಿದರು.
48 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಗೋವಿಂದ್ ಸಹಾನಿ ಕೂಡ 0–4ರಿಂದ ಜಾರ್ಜಿಯಾದ ಸಕೀಲ್ ಅಲಾಕ್ವೆರ್ದೊವಿ ವಿರುದ್ಧ ಮುಗ್ಗರಿಸಿದರು.
ಸುಮಿತ್ (75 ಕೆಜಿ) ಹಾಗೂ ನಿಶಾಂತ್ ದೇವ್ (71 ಕೆಜಿ) ಈಗಾಗಲೇ ಪ್ರೀಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.