ಭುವನದ ಕ್ರೀಡಾ ಸೊಬಗು ಒಲಿಂಪಿಕ್ಸ್‌ಗೆ ಕ್ಷಣಗಣನೆ ಆರಂಭವಾಗಿದೆ. ಪ್ಯಾರಿಸ್‌ನಲ್ಲಿ ಜುಲೈ 26ರಿಂದ ಆಗಸ್ಟ್ 11ರವರೆಗೆ ಆಯೋಜನೆಯಾಗಿರುವ ಈ ಬಾರಿಯ ಕ್ರೀಡಾಕೂಟಕ್ಕೆ ಬ್ರೇಕಿಂಗ್ ಅಥವಾ ಬ್ರೇಕ್‌ಡ್ಯಾನ್ಸ್ ಮತ್ತಷ್ಟು ರಂಗು ತುಂಬಲಿದೆ.
32 ಕ್ರೀಡೆಗಳ 329 ವಿಭಾಗಗಳಲ್ಲಿ ಅಥ್ಲೀಟ್‌ಗಳು ಪದಕಗಳಿಗಾಗಿ ಬೆವರು ಸುರಿಸಲಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆ ಮಾಡಲಾಗಿದ್ದ ಸ್ಕೇಟ್ ಬೋರ್ಡಿಂಗ್, ಸ್ಪೋರ್ಟ್ಸ್ ಕ್ಲೈಂಬಿಂಗ್, ಸರ್ಫಿಂಗ್ ಪ್ಯಾರಿಸ್ ಕೂಟಕ್ಕೂ ಮರಳಿದರೆ, ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ‘ವಿಶ್ವ ಹಬ್ಬ’ದಲ್ಲಿ ಮೊದಲ ಬಾರಿಗೆ ಬ್ರೇಕ್‌ಡ್ಯಾನ್ಸ್ ಪರಿಚಯಿಸಲಾಗುತ್ತಿದೆ.
ಕೆನೋಯ್ ಸ್ಲಾಲೊಮ್ ಕ್ರೀಡೆಯಲ್ಲಿ ಕಯಾಕ್ ಕ್ರಾಸ್ ಎಂಬ ವಿಭಾಗವನ್ನು ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ನಾಲ್ವರು ದೋಣಿ ಸವಾರರು ಏಕಕಾಲಕ್ಕೆ ಸ್ಪರ್ಧಿಸುವ ಈ ವಿಭಾಗದ ಹೀಟ್ಸ್‌ನಲ್ಲಿ ಮೊದಲ ಎರಡು ಸ್ಥಾನ ಪಡೆದವರು ಮುಂದಿನ ಸುತ್ತಿಗೆ ಅರ್ಹತೆ ಪಡೆಯುತ್ತಾರೆ. ಕೊನೆಯಲ್ಲಿ ನಾಲ್ವರು ಉಳಿದುಕೊಂಡಾಗ ಫೈನಲ್ ಆಡಿಸಲಾಗುತ್ತದೆ.
ಏನಿದು ಬ್ರೇಕ್ ಡ್ಯಾನ್ಸ್?: 1970ರ ದಶಕದಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಈ ನೃತ್ಯ ಪ್ರಕಾರ ಹುಟ್ಟಿಕೊಂಡಿತು. ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕುವ ಈ ನಾಟ್ಯ ಪ್ರಕಾರವು ಆಫ್ರಿಕನ್ ಅಮೆರಿಕನ್ನರಲ್ಲಿ ಮೇಳೈಸಿತ್ತು. ಬಳಿಕ ವಿಶ್ವದ ಹಲವೆಡೆ ಪ್ರಭಾವ ಬೀರಿತು.
2018ರ ಬ್ಯೂನಸ್ ಐರಿಸ್ ಯೂತ್ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿ ಬ್ರೇಕ್‌ಡ್ಯಾನ್ಸ್ ಪರಿಚಯಿಸಲಾಯಿತು.
ಆಕ್ರೊಬ್ಯಾಟ್ ಭಂಗಿಗಳು, ಒಂದೇ ಕೈ, ತಲೆ ಮೇಲೆ ನಿಂತು ಸಮತೋಲನ ಕಾಯ್ದುಕೊಳ್ಳುವಿಕೆ, ಟೆಂಪೊ, ಹಿಪ್–ಹಾಪ್ ಸೇರಿದಂತೆ ಹಲವು ಕಸರತ್ತುಗಳನ್ನು ಬ್ರೇಕ್ ಡ್ಯಾನ್ಸ್ ಒಳಗೊಂಡಿದೆ.
ಸ್ಪರ್ಧೆಯ ಮಾದರಿ: ಪ್ಯಾರಿಸ್‌ನ ಡಿ ಲಾ ಕಾನ್‌ಕೊರ್ಡ್‌ನಲ್ಲಿ ಆಗಸ್ಟ್ 9 ಮತ್ತು 10ರಂದು ಬ್ರೇಕ್ ಡ್ಯಾನ್ಸ್ ಸ್ಪರ್ಧೆಗಳು ನಡೆಯಲಿವೆ. ಬಿ–ಬಾಯ್ಸ್ ಮತ್ತು ಬಿ– ಗರ್ಲ್ಸ್ (ತಲಾ 16 ಮಂದಿ) ವಿಭಾಗಗಳನ್ನಾಗಿ ವಿಂಗಡಿಸಿ ಸ್ಪರ್ಧೆಯನ್ನು ನಡೆಸಲಾಗುತ್ತದೆ. ವೈಯಕ್ತಿಕ ವಿಭಾಗದಲ್ಲಿ ಡ್ಯಾನ್ಸರ್‌ಗಳು ಡಿಜೆ ಟ್ರ್ಯಾಕ್‌ಗೆ ಹೆಜ್ಜೆ ಹಾಕುವ ಮೂಲಕ ಪೈಪೋಟಿ ತೋರಲಿದ್ದು, ಸೃಜನಶೀಲತೆ, ವ್ಯಕ್ತಿತ್ವ, ತಾಂತ್ರಿಕತೆ, ಭಿನ್ನತೆ, ಪ್ರದರ್ಶನ ಮತ್ತು ಸಂಗೀತವನ್ನು ಪರಿಗಣಿಸಿ ಪಾಯಿಂಟ್ಸ್ ಗಳಿಸುತ್ತಾರೆ. ಎದುರಾಳಿಯ ಪ್ರದರ್ಶನಕ್ಕೆ ಯಾವ ರೀತಿ ಪ್ರತಿಸಾಮರ್ಥ್ಯ ತೋರುತ್ತಾರೆ ಎಂಬುದರ ಮೇಲೆ ಸ್ಕೋರ್‌ಗಳಲ್ಲಿ ಏರಿಳಿತ ಆಗುತ್ತಲಿರುತ್ತದೆ.
ಒಬ್ಬರಾದ ನಂತರ ಒಬ್ಬರು ಸೆಣಸಬೇಕು. ಒಂದು ಸುತ್ತಿಗೆ ಸುಮಾರು 1 ನಿಮಿಷದ ಅವಧಿ ಇರುತ್ತದೆ.
ಕ್ವಾರ್ಟರ್‌ಫೈನಲ್, ಸೆಮಿಫೈನಲ್, ಪದಕದ ಸುತ್ತಿನ ಸ್ಪರ್ಧೆಗಳು ‘ಬೆಸ್ಟ್ ಆಫ್ ತ್ರಿ’ ಮಾದರಿಯಲ್ಲಿ ನಡೆಯಲಿವೆ.
ಪುರುಷರ ವಿಭಾಗದಲ್ಲಿ ಮೂರು ಬಾರಿಯ ವಿಶ್ವ ಚಾಂಪಿಯನ್, ಕೆನೆಡಾದ ಫಿಲ್ ವಿಜಾರ್ಡ್, ಅಮೆರಿಕದ ವಿಕ್ಟರ್ ಮೊಂಟಾಲ್ವೊ ಮತ್ತು ಜೆಫ್ರಿ ಲೂಯಿಸ್ ಚಿನ್ನದ ಪದಕ ಜಯಿಸುವ ನೆಚ್ಚಿನ ಸ್ಪರ್ಧಿಗಳೆನಿಸಿದ್ದಾರೆ. ಅಮೆರಿಕದ ಸನ್ನಿ ಚೊಯ್ ಮಹಿಳೆಯರ ವಿಭಾಗದಲ್ಲಿ ಸ್ವರ್ಣ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.
ಕೈಬಿಟ್ಟ ಕ್ರೀಡೆಗಳು: 2020ರ ಟೋಕಿಯೊ ಕೂಟದಲ್ಲಿ ಪದಾರ್ಪಣೆ ಮಾಡಿದ್ದ ಕರಾಟೆ ಮತ್ತು ಬೇಸ್‌ಬಾಲ್–ಸಾಫ್ಟ್‌ಬಾಲ್ ಕ್ರೀಡೆಗಳನ್ನು ಈ ಬಾರಿ ಕೈಬಿಡಲಾಗಿದೆ. ಆದರೆ ಬೇಸ್‌ಬಾಲ್– ಸಾಫ್ಟ್‌ಬಾಲ್ ಆಟಗಳಿಗೆ 2028ರ ಲಾಸ್ ಏಂಜಲೀಸ್ ಕೂಟದಲ್ಲಿ ಮತ್ತೆ ಮಣೆ ಹಾಕಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.