ನವದೆಹಲಿ: ಬ್ಯಾಡ್ಮಿಂಟನ್‌ನಲ್ಲಿ ಸದ್ದು ಮಾಡುತ್ತಿರುವ ‘ಸ್ಪಿನ್ ಸರ್ವ್’ಗೆ ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್) ತಾತ್ಕಾಲಿಕ ನಿಷೇಧ ಹೇರಿದೆ. ಮೇ 29ರ ವರೆಗೆ ಯಾರೂ ‘ಸ್ಪಿನ್ ಸರ್ವ್’ ಮಾಡುವಂತಿಲ್ಲ ಎಂದಿದೆ.
ಭಾನುವಾರ ಆರಂಭವಾಗಲಿರುವ ಸುದಿರ್‌ಮನ್ ಕಪ್ ಫೈನಲ್ಸ್ ಮತ್ತು ಬಳಿಕದ ವಾರ ನಡೆಯಲಿರುವ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಗೆ ಈ ನಿಷೇಧ ಅನ್ವಯವಾಗಲಿದೆ.
‘ಸ್ಪಿನ್ ಸರ್ವ್’ಗೆ ಶಾಶ್ವತ ನಿಷೇಧ ಹೇರಬೇಕೇ ಅಥವಾ ಮುಂದಿನ ದಿನಗಳಲ್ಲಿ ಇದನ್ನು ಪ್ರಯೋಗಿಸಲು ಅವಕಾಶ ನೀಡಬೇಕೇ ಎಂಬುದನ್ನು ಮೇ 27 ರಂದು ನಡೆಯಲಿರುವ ಬಿಡಬ್ಲ್ಯುಎಫ್ ಎಜಿಎಂನಲ್ಲಿ ನಿರ್ಧರಿಸಲಾಗುವುದು ಎಂದು ಫೆಡರೇಷನ್ ತಿಳಿಸಿದೆ.
ಡೆನ್ಮಾರ್ಕ್ ಆಟಗಾರ ಮಾರ್ಕಸ್ ರಿಂಡ್‌ಶೊಜ್ ಅವರು ಕಳೆದ ತಿಂಗಳು ನಡೆದಿದ್ದ ಪೋಲೆಂಡ್ ಓಪನ್ ಟೂರ್ನಿಯಲ್ಲಿ ‘ಸ್ಪಿನ್ ಸರ್ವ್’ ಪರಿಚಯಿಸಿದ್ದರು. ಬಳಿಕ ಇತರ ಕೆಲವು ಆಟಗಾರರೂ ಅದನ್ನು ಕರಗತಮಾಡಿಕೊಂಡಿದ್ದರು.
‘ಆಟದಲ್ಲಿ ಹೊಸತನ ಪರಿಚಯಿಸುವುದನ್ನು ಸ್ವಾಗತಿಸುತ್ತೇವೆ. ಆದರೆ ಸ್ಪಿನ್ ಸರ್ವ್ ಆಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ’ ಎಂದು ಬಿಡಬ್ಲ್ಯುಎಫ್ ಅಧ್ಯಕ್ಷ ಪಾಲ್ ಎರಿಕ್ ಹೋಯರ್ ಹೇಳಿದ್ದಾರೆ.
ಏನಿದು ಸ್ಪಿನ್ ಸರ್ವ್?: ಆಟಗಾರ ತನ್ನ ಹೆಬ್ಬೆರಳು ಮತ್ತು ಮಧ್ಯದ ಬೆರಳಿನ ನಡುವೆ ಶಟಲ್ ಕಾಕ್‌ನ ಕಾರ್ಕ್‌ಅನ್ನು ಹಿಡಿದಿಟ್ಟುಕೊಳ್ಳುವನು. ಆ ಬಳಿಕ ಷಟಲ್‌ಅನ್ನು ಗಿರಗಿರನೆ ತಿರುಗಿಸಿ ರ್‍ಯಾಕೆಟ್ ಮೂಲಕ ಎದುರಾಳಿಯತ್ತ ಹೊಡೆಯುವನು. ಷಟಲ್ ತಿರುಗುತ್ತಾ, ಅತ್ತಿತ್ತ ಓಲಾಡುತ್ತಾ ಎದುರಾಳಿಯತ್ತ ಹೋಗುವುದರಿಂದ ಅದನ್ನು ರಿಟರ್ನ್ ಮಾಡುವುದು ಕಷ್ಟ. ರಿಟರ್ನ್‌ಗೆ ಪ್ರಯತ್ನಿಸಿದರೂ ನೆಟ್‌ಗೆ ಬಡಿಯುತ್ತದೆ. ಇದರಿಂದ ಒಬ್ಬ ಆಟಗಾರನಿಗೆ ಸರ್ವ್‌ನಲ್ಲಿ ಸತತವಾಗಿ ಪಾಯಿಂಟ್ ಗಳಿಸಲು ಸಾಧ್ಯವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.