ಮುಲ್ಹೆಮ್, ಜರ್ಮನಿ: ಇಲ್ಲಿ ನಡೆಯುತ್ತಿರುವ ಜರ್ಮನಿ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ.
ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧಿಸಿದ್ದ ದೇಶದ ನಾಲ್ವರು ಮೊದಲ ಸುತ್ತುಗಳಲ್ಲೇ ಸೋಲನುಭವಿಸಿದರು.
ಆರನೇ ಶ್ರೇಯಾಂಕ ಪಡೆದಿದ್ದ ಭಾರತದ ಲಕ್ಷ್ಯ ಸೇನ್ ಪುರುಷರ ವಿಭಾಗದ ಮೊದಲ ಪಂದ್ಯದಲ್ಲಿ ಬುಧವಾರ 19–21, 16–21ರಿಂದ ಫ್ರಾನ್ಸ್‌ನ ಕ್ರಿಸ್ಟೊ ಪೊಪೊವ್ ಎದುರು ಎಡವಿದರು. 45 ನಿಮಿಷಗಳಲ್ಲಿ ಈ ಹಣಾಹಣಿ ಅಂತ್ಯವಾಯಿತು.
ಇತ್ತೀಚೆಗೆ ರಾಷ್ಟ್ರೀಯ ಚಾಂಪಿಯನ್ ಆಗಿದ್ದ, ಕರ್ನಾಟಕದ ಮಿಥುನ್ ಮಂಜುನಾಥ್ ಅವರು 8-21, 21-19, 11-21ರಿಂದ ಮಾಜಿ ವಿಶ್ವ ಚಾಂಪಿಯನ್ ಆಟಗಾರ, ಸಿಂಗಪುರದ ಲೊಹ್ ಕೀನ್ ಯಿವ್ ಎದುರು ಮಣಿದರು.
ಕ್ವಾಲಿಫೈಯರ್ಸ್‌ನಲ್ಲಿ ಗೆದ್ದು ಬಂದಿದ್ದ ತಸ್ನಿಂ ಮೀರ್ ಅವರು ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ 8-21, 10-21ರಿಂದ ಥಾಯ್ಲೆಂಡ್‌ನ ಪಾರ್ನ್‌ಪವಿ ಚೊಚುವಾಂಗ್ ಅವರಿಗೆ ಸೋತರು. ಎಂಟನೇ ಶ್ರೇಯಾಂಕದ ಆಟಗಾರ್ತಿ ಕೇವಲ 25 ನಿಮಿಷಗಳಲ್ಲಿ ತಸ್ನಿಂ ಅವರನ್ನು ಮಣಿಸಿದರು.
ಮಾಳವಿಕಾ ಬನ್ಸೋದ್ 13-21, 14-21ರಿಂದ ಚೀನಾದ ವಾಂಗ್ ಜೀ ವಿರುದ್ಧ ಸೋಲು ಕಂಡರು.
ಮಿಶ್ರ ಡಬಲ್ಸ್ ಜೋಡಿ, ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಬಿ.ಸುಮಿತ್ ರೆಡ್ಡಿ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 10–21, 12–21ರಿಂದ ಸ್ಕಾಟ್ಲೆಂಡ್‌ನ ಜೂಲಿ ಮ್ಯಾಕ್ ಪರ್ಸನ್ ಮತ್ತು ಆ್ಯಡಂ ಹಾಲ್ ವಿರುದ್ಧ ಸೋತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.