ADVERTISEMENT

ಅಮೆರಿಕ ಓಪನ್‌ ಬ್ಯಾಡ್ಮಿಂಟನ್ ಟೂರ್ನಿ ಅಮಾನತು

ಪಿಟಿಐ
Published 28 ಏಪ್ರಿಲ್ 2020, 19:30 IST
Last Updated 28 ಏಪ್ರಿಲ್ 2020, 19:30 IST
ಸೈನಾ ನೆಹ್ವಾಲ್‌ ಅವರ ಆಟದ ವೈಖರಿ
ಸೈನಾ ನೆಹ್ವಾಲ್‌ ಅವರ ಆಟದ ವೈಖರಿ   

ನವದೆಹಲಿ: ಅಮೆರಿಕ ಓಪನ್‌ ವಿಶ್ವ ಟೂರ್‌ ಟೂರ್ನಿಯನ್ನು ಕೊರೊನಾ ವೈರಾಣು ಉಪಟಳದ ಹಿನ್ನೆಲೆಯಲ್ಲಿ ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಡಬ್ಲ್ಯುಎಫ್‌) ಮಂಗಳವಾರ ಅಮಾನತುಗೊಳಿಸಿದೆ. ಜೂನ್‌ನಲ್ಲಿ ಈ ಟೂರ್ನಿ ನಡೆಯಬೇಕಿತ್ತು.

‘ಕ್ಯಾಲಿಫೋರ್ನಿಯಾದ ಫುಲ್ಲರ್ಟನ್‌ನಲ್ಲಿ ಜೂನ್‌ 23ರಿಂದ 28ವರೆಗೆ ನಿಗದಿಯಾಗಿದ್ದ ಅಮೆರಿಕ ಓಪನ್‌ ಟೂರ್ನಿಯನ್ನು, ಅಮೆರಿಕ ಬ್ಯಾಡ್ಮಿಂಟನ್‌ ಸಂಸ್ಥೆಯೊಂದಿಗೆ ಸಮಾಲೋಚಿಸಿದ ಬಳಿಕ ಅಮಾನತುಗೊಳಿಸಲಾಗಿದೆ’ ಎಂದು ಬಿಡಬ್ಲ್ಯುಎಫ್‌ ಪ್ರಕಟಣೆಯಲ್ಲಿ ತಿಳಿಸಿದೆ.

2017ರಲ್ಲಿ ನಡೆದ ಅಮೆರಿಕ ಓಪನ್‌ ಟೂರ್ನಿಯ ಫೈನಲ್‌ ಪಂದ್ಯವು ಭಾರತದ ಇಬ್ಬರು ಸಿಂಗಲ್ಸ್ ವಿಭಾಗದ‌ ಆಟಗಾರರ ನಡುವಿನ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಎಚ್‌.ಎಸ್‌.ಪ್ರಣಯ್‌ ಅವರು ಪರುಪಳ್ಳಿ ಕಶ್ಯಪ್‌ ಅವರನ್ನು ಮಣಿಸಿ ಪ್ರಶಸ್ತಿ ಕಿರೀಟ ಧರಿಸಿದ್ದರು.

ADVERTISEMENT

ಮೇ, ಜೂನ್‌ ಹಾಗೂ ಜುಲೈನಲ್ಲಿ ನಿಗದಿಯಾಗಿದ್ದ ಹಲವು ಎಚ್‌ಎಸ್‌ಬಿಸಿ ಬಿಡಬ್ಲ್ಯುಎಫ್‌ ವಿಶ್ವ ಟೂರ್‌, ಬಿಡಬ್ಲ್ಯುಎಫ್‌ ಟೂರ್‌ ಮತ್ತು ತಾನು ಆಯೋಜಿಸುವ ಇತರ ಟೂರ್ನಿಗಳನ್ನು ಬಿಡಬ್ಲ್ಯುಎಫ್‌ ಈ ತಿಂಗಳ ಆರಂಭದಲ್ಲಿ ಅಮಾನತುಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.