ADVERTISEMENT

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ಪ್ರೀಕ್ವಾರ್ಟರ್‌ಗೆ ಸೈನಾ ನೆಹ್ವಾಲ್

ಅಶ್ವಿನಿ ಭಟ್‌ – ಶಿಖಾ ಗೌತಮ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2022, 11:25 IST
Last Updated 23 ಆಗಸ್ಟ್ 2022, 11:25 IST
ಸೈನಾ ನೆಹ್ವಾಲ್‌ ಆಟದ ವೈಖರಿ –ಎಪಿ ಚಿತ್ರ
ಸೈನಾ ನೆಹ್ವಾಲ್‌ ಆಟದ ವೈಖರಿ –ಎಪಿ ಚಿತ್ರ   

ಟೋಕಿಯೊ (ಪಿಟಿಐ): ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್‌ ಅವರು ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರೀಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಅವರು 21–19, 21–9 ರಲ್ಲಿ ಹಾಂಗ್‌ಕಾಂಗ್‌ನ ಚುಂಗ್ ಎಂಗನ್ ಯಿ ಅವರನ್ನು ಪರಾಭವಗೊಳಿಸಿದರು. ಲಂಡನ್‌ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸೈನಾ, 38 ನಿಮಿಷಗಳಲ್ಲಿ ಗೆದ್ದರು.

ಸೈನಾ ಅವರು ಎರಡನೇ ಸುತ್ತಿನಲ್ಲಿ ಜಪಾನ್‌ನ ನೊಜೊಮಿ ಒಕುಹರ ಅವರನ್ನು ಎದುರಿಸಬೇಕಿತ್ತು. ಆದರೆ ಗಾಯದ ಕಾರಣ ನೊಜೊಮಿ ಹಿಂದೆ ಸರಿದರು. ‘ಬೈ’ ಪಡೆದ ಸೈನಾ ಪ್ರೀಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟರು.

ADVERTISEMENT

ಚುಂಗ್‌ ವಿರುದ್ಧದ ಪಂದ್ಯದ ಮೊದಲ ಗೇಮ್‌ನಲ್ಲಿ 4–7 ರಲ್ಲಿ ಹಿನ್ನಡೆಯಲ್ಲಿದ್ದ ಸೈನಾ, ಮರುಹೋರಾಟ ನಡೆಸಿ 12–11 ರಲ್ಲಿ ಮುನ್ನಡೆ ಪಡೆದರು. ಆ ಬಳಿಕ ಇಬ್ಬರ ನಡುವೆ ತುರುಸಿನ ಪೈಪೋಟಿ ನಡೆಯಿತು. 19–19 ರಲ್ಲಿ ಸಮಬಲ ಕಂಡುಬಂತು. ಈ ವೇಳೆ ಶಿಸ್ತಿನ ಆಟವಾಡಿದ ಸೈನಾ ಎರಡು ಪಾಯಿಂಟ್ಸ್‌ ಕಲೆಹಾಕಿ ಗೇಮ್‌ ಗೆದ್ದುಕೊಂಡರು.

ಎರಡನೇ ಗೇಮ್‌ನಲ್ಲಿ ಭಾರತದ ಆಟಗಾರ್ತಿ ಸೊಗಸಾದ ಆಟವಾಡಿದರು. ಆರಂಭದಲ್ಲೇ 11–6 ರಲ್ಲಿ ಮುನ್ನಡೆ ಪಡೆದು ಎದುರಾಳಿಯ ಮೇಲೆ ಒತ್ತಡ ಹೇರಿದರು. ಅದೇ ಮೇಲುಗೈಯನ್ನು ಕಾಪಾಡಿಕೊಂಡು ಪಂದ್ಯ ಜಯಿಸಿದರು.

ತ್ರಿಶಾ– ಗಾಯತ್ರಿ ಶುಭಾರಂಭ: ಭಾರತದ ತ್ರಿಶಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್‌ ಅವರು ಮಹಿಳೆಯರ ಡಬಲ್ಸ್‌ ವಿಭಾಗದಲ್ಲಿ ಶುಭಾರಂಭ ಮಾಡಿದರು. ಮೊದಲ ಸುತ್ತಿನಲ್ಲಿ ಅವರು 21–11, 21–13 ರಲ್ಲಿ ಮಲೇಷ್ಯಾದ ಯೀನ್‌ ಯುವಾನ್‌ ಲೊ ಮತ್ತು ವಲೇರಿ ಸಿಯೊ ಅವರನ್ನು ಮಣಿಸಿದರು.

ಕೆ.ಅಶ್ವಿನಿ ಭಟ್‌ ಮತ್ತು ಶಿಖಾ ಗೌತಮ್‌ ಅವರೂ ಎರಡನೇ ಸುತ್ತಿಗೆ ಮುನ್ನಡೆದರು. ಮಂಗಳವಾರ ನಡೆದ ಮೊದಲ ಸುತ್ತಿನ ಹಣಾಹಣಿಯಲ್ಲಿ ಭಾರತದ ಜೋಡಿ 21–8, 21–14 ರಲ್ಲಿ ಇಟಲಿಯ ಮಾರ್ಟಿನಾ ಕೊರ್ಸಿನಿ– ಜುಡಿತ್‌ ಮಯೆರ್‌ ಎದುರು ಜಯಿಸಿತು.

ಮಿಶ್ರ ಡಬಲ್ಸ್‌ನಲ್ಲಿ ವೆಂಕಟ್‌ ಗೌರವ್‌ ಪ್ರಸಾದ್‌– ಜೂಹಿ ದೇವಾಂಗನ್‌ ಜೋಡಿ 10–21, 21–23 ರಲ್ಲಿ ಇಂಗ್ಲೆಂಡ್‌ನ ಗ್ರೆಗೊರಿ ಮಯರ್ಸ್‌– ಜೆನ್ನಿ ಮೂರ್‌ ಎದುರು ಪರಾಭವಗೊಂಡಿತು.

ತನಿಷಾ ಕ್ರಾಸ್ಟೊ ಮತ್ತು ಇಶಾನ್‌ ಭಟ್ನಾಗರ್‌ ಅವರೂ ನಿರಾಸೆ ಅನುಭವಿಸಿದರು. ಥಾಯ್ಲೆಂಡ್‌ನ ಸುಪಕ್ ಜೊಮ್ಕೊ– ಸುಪಿಸರ ಪೆವ್‌ಸಂಪ್ರನ್‌ ಅವರು 21–14, 21–17 ರಲ್ಲಿ ಭಾರತದ ಜೋಡಿಯನ್ನು ಮಣಿಸಿತು.

ಪುರುಷರ ಡಬಲ್ಸ್‌ನಲ್ಲಿ ಕೃಷ್ಣ ಪ್ರಸಾದ್‌ ಗರಗ ಮತ್ತು ವಿಷ್ಣುವರ್ಧನ್‌ ಪಂಜಲ ಅವರ ಸವಾಲಿಗೆ ತೆರೆಬಿತ್ತು. ಅವರು 14–21, 18–21 ರಲ್ಲಿ ಫ್ರಾನ್ಸ್‌ನ ಫ್ಯಾಬಿಯೆನ್ ಡೆಲ್ರು– ವಿಲಿಯಮ್‌ ವಿಲೆಜರ್‌ ಎದುರು ಸೋತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.