ADVERTISEMENT

ಪ್ಯಾರಿಸ್‌ ಒಲಿಂಪಿಕ್ಸ್: ಆರು ಪೈಲ್ವಾನರ ಮೇಲೆ ಪದಕ ನಿರೀಕ್ಷೆಯ ಭಾರ

ಸತತ ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಕುಸ್ತಿಯಲ್ಲಿ ಪದಕ

ಪಿಟಿಐ
Published 17 ಜುಲೈ 2024, 21:03 IST
Last Updated 17 ಜುಲೈ 2024, 21:03 IST
ಅಮನ್ ಸೆಹ್ರಾವತ್‌
ಅಮನ್ ಸೆಹ್ರಾವತ್‌   

ನವದೆಹಲಿ: ಭಾರತದ ಕುಸ್ತಿಪಟುಗಳು 2008ರಿಂದ ಇಲ್ಲಿಯವರೆಗೂ ನಡೆದ ಒಲಿಂಪಿಕ್ ಕೂಟಗಳಲ್ಲಿ ಪದಕಗಳ ಕೊಡುಗೆ ನೀಡಿದ್ದಾರೆ. ಇದೇ 26ರಂದು ಆರಂಭವಾಗುವ ಪ್ಯಾರಿಸ್‌ ಕೂಟದಲ್ಲೂ ಭಾರತದ ಪೈಲ್ವಾನರ ಮೇಲೆ ನಿರೀಕ್ಷೆಯ ಭಾರ ಹೆಚ್ಚಿದೆ.

ಸತತ ನಾಲ್ಕು ಒಲಿಂಪಿಕ್ಸ್‌ಗಳಲ್ಲಿ ಯಶಸ್ಸು ಪಡೆದ ನಂತರ ಭಾರತದಲ್ಲಿ ಕುಸ್ತಿ ಕ್ರೀಡೆಗೆ ವಿಶೇಷ ಉತ್ತೇಜನ ನೀಡಲಾಗುತ್ತಿದೆ. ಜೂನಿಯರ್‌ ವಿಭಾಗದಲ್ಲೂ ಭಾರತದ ಕುಸ್ತಿಪಟುಗಳು ಮಿಂಚುತ್ತಿರುವುದರಿಂದ ಪ್ಯಾರಿಸ್‌ನಲ್ಲಿ ದೊಡ್ಡ ಯಶಸ್ಸಿನ ಭರವಸೆಯನ್ನು ಮೂಡಿಸಿದೆ.

20‌08ರಲ್ಲಿ ಚೀನಾದ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಸುಶೀಲ್‌ ಕುಮಾರ್‌ ಅವರು ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಪದಕವನ್ನು (ಕಂಚು) ತಂದುಕೊಟ್ಟರು. ಅದಾದ ನಾಲ್ಕು ವರ್ಷಗಳ ಬಳಿಕ ಲಂಡನ್‌ನಲ್ಲಿ ನಡೆದ ಕೂಟದಲ್ಲಿ ಯೋಗೇಶ್ವರ್ ದತ್‌ ಅವರು ಬೆಳ್ಳಿ ಪದಕವನ್ನು ಜಯಿಸಿದರು.

ADVERTISEMENT

ಸಾಕ್ಷಿ ಮಲಿಕ್ ಅವರು 2016ರಲ್ಲಿ ರಿಯೊದಲ್ಲಿ ಕಂಚಿನ ಪದಕವನ್ನು ಜಯಿಸುವ ಮೂಲಕ ಅದೇ ‘ಟ್ರೆಂಡ್’  ಮುಂದುವರೆಸಿದರು. 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಇಬ್ಬರು ಕುಸ್ತಿಪಟುಗಳು ಪದಕಗಳನ್ನು ಗೆದ್ದು ದಾಖಲೆ ನಿರ್ಮಿಸಿದರು. ಅಲ್ಲಿ, ರವಿ ದಹಿಯಾ ಮತ್ತು ಬಜರಂಗ್ ಪೂನಿಯಾ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.

ಕುಸ್ತಿಯಲ್ಲಿ ಭಾರತ ಹೊಸ ಎತ್ತರಕ್ಕೆ ಏರುತ್ತಿರುವ ಹೊತ್ತಿನಲ್ಲಿ ಉಂಟಾದ ಗೊಂದಲದ ವಾತಾವರಣವು ಕ್ರೀಡೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಭಾರತ ಕುಸ್ತಿ ಫೆಡರೇಶನ್‌ನ ಹಿಂದಿನ ಅಧ್ಯಕ್ಷರ ವಿರುದ್ಧ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ನೀಡಿದ ಗಂಭೀರ ಆರೋಪ ಕೇಳಿಬಂತು. ಹೀಗಾಗಿ ಅವರ ವಿರುದ್ಧ ಖ್ಯಾತನಾಮ ಕುಸ್ತಿಪಟುಗಳು ಬೀದಿಗೆ ಇಳಿದು, ಸುದೀರ್ಘ ಸಮಯ ಪ್ರತಿಭಟನೆ ನಡೆಸಿದರು. ಇದು ಅಂತರರಾಷ್ಟ್ರೀಯಮಟ್ಟದಲ್ಲಿ ದೊಡ್ಡ ಸುದ್ದಿಯಾಯಿತು. 

ಮತ್ತೊಂದೆಡೆ ರಾಷ್ಟ್ರೀಯ ಶಿಬಿರಗಳು ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳು ಸ್ಥಗಿತಗೊಂಡವು. ನಿಗದಿತ ಸಮಯಕ್ಕೆ ಚುನಾವಣೆ ನಡೆಸದ ಕಾರಣ ಭಾರತ ಕುಸ್ತಿ ಫೆಡರೇಷನ್‌ ಅನ್ನು ವಿಶ್ವ ಕುಸ್ತಿ ಸಂಸ್ಥೆ ಅಮಾನತು ಮಾಡಿತ್ತು. ನಂತರದಲ್ಲಿ ಚುನಾವಣೆ ನಡೆದು, ಹೊಸ ಸಮಿತಿ ಅಸ್ತಿತ್ವಕ್ಕೆ ಬಂದು ಅಮಾನತು ರದ್ದುಗೊಂಡಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಪ್ಯಾರಿಸ್‌ ಕೂಟಕ್ಕೆ ಒಬ್ಬ ಪುರುಷರ ಮತ್ತು ಐವರು ಮಹಿಳಾ ಕುಸ್ತಿಪಟುಗಳು ಅರ್ಹತೆ ಸಂಪಾದಿಸಿದ್ದಾರೆ.

ಅಮನ್ ಸೆಹ್ರಾವತ್‌
ಅಂತಿಮ್‌ ಪಂಘಲ್‌
ವಿನೇಶಾ ಫೋಗಾಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.