ADVERTISEMENT

ಹ್ಮಾಮಿಲ್ಟನ್–ಬೊತಾಸ್: ಮರ್ಸಿಡಿಸ್ vs ಮರ್ಸಿಡಿಸ್

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 19:30 IST
Last Updated 22 ಜುಲೈ 2020, 19:30 IST
ಲೂಯಿಸ್ ಹ್ಯಾಮಿಲ್ಟನ್ (ಎಡ) ಮತ್ತು ವಾಲ್ಟೆರಿ ಬೊತಾಸ್ –ಎಎಫ್‌ಪಿ ಚಿತ್ರ
ಲೂಯಿಸ್ ಹ್ಯಾಮಿಲ್ಟನ್ (ಎಡ) ಮತ್ತು ವಾಲ್ಟೆರಿ ಬೊತಾಸ್ –ಎಎಫ್‌ಪಿ ಚಿತ್ರ   

ಕೊರೊನಾ ಹಾವಳಿಯ ಆತಂಕದ ನಡುವೆಯೇ ನಡೆದ ಫಾರ್ಮುಲಾ ಒನ್ ರೇಸ್‌ಗಳಲ್ಲಿ ಮಿಂಚಿದ ಲೂಯಿಸ್ ಹ್ಯಾಮಿಲ್ಟನ್ ದಾಖಲೆಗಳ ಹಾದಿಯಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸುವ ಸಿದ್ಧತೆಯಲ್ಲಿದ್ದಾರೆ. ಮುಂದಿನ ರೇಸ್‌ಗಳಲ್ಲಿ ಗೆಲುವು ಸಾಧಿಸುತ್ತ ಸಾಗಿದರೆ 91 ಗ್ರ್ಯಾನ್‌ ಪ್ರಿ ಪ್ರಶಸ್ತಿ ಗೆದ್ದಿರುವ ಮೈಕೆಲ್ ಶುಮಾಕರ್ ಅವರ ದಾಖಲೆ ಮುರಿಯುವ ಅಥವಾ ಸಮಗಟ್ಟುವ ಅವಕಾಶ ಹ್ಯಾಮಿಲ್ಟನ್‌ಗೆ ಒದಗಲಿದೆ. ಇದಕ್ಕಾಗಿ ಮೋಟರ್ ರೇಸ್ ಪ್ರಿಯರು ಕಾತರರಾಗಿದ್ದರೆ, ಅತ್ತ ಹ್ಯಾಮಿಲ್ಟನ್‌ಗೆ ಸಾಟಿಯಾಗುವವರು ಯಾರೂ ಇಲ್ಲವೇ ಎಂಬ ಪ್ರಶ್ನೆಯೂ ರೇಸಿಂಗ್ ಟ್ರ್ಯಾಕ್ ಸುತ್ತ ಹರಿದಾಡುತ್ತಿದೆ. ಹೌದು, ಸಾಂಪ್ರದಾಯಿಕ ಎದುರಾಳಿ ಸೆಬಾಸ್ಟಿಯನ್ ವೆಟೆಲ್ ಅವರಂಥ ದಿಗ್ಗಜರನ್ನೇ ಹಿಂದಿಕ್ಕಿ ಮುನ್ನುಗ್ಗುತ್ತಿರುವ ಆರು ಬಾರಿಯ ವಿಶ್ವ ಚಾಂಪಿಯನ್ ಹ್ಯಾಮಿಲ್ಟನ್‌ಗೆ ಸದ್ಯ ಎದುರಾಳಿ ಇಲ್ಲವೇ...? ಇದ್ದಾರೆ; ಅವರೇ ಫಿನ್ಲೆಂಡ್‌ನ ವಾಲ್ಟೆರಿ ಬೊತಾಸ್. ಹ್ಮಾಮಿಲ್ಟನ್ ಪ್ರತಿನಿಧಿಸುವ ಮರ್ಸಿಡಿಸ್ ಕಂಪೆನಿಯನ್ನೇ ಬೊತಾಸ್ ಕೂಡ ಪ್ರತಿನಿಧಿಸುತ್ತಿದ್ದಾರೆ ಎಂಬುದು ವಿಶೇಷ.

ಕೊರೊನಾ ಹಾವಳಿಯಿಂದ ಸ್ಥಗಿತಗೊಂಡಿದ್ದ ರೇಸಿಂಗ್ ಚಟುವಟಿಕೆ ಈ ತಿಂಗಳ ಆರಂಭದಲ್ಲಿ ಆಸ್ಟ್ರಿಯಾ ಗ್ರ್ಯಾನ್‌ ಪ್ರಿ ಮೂಲಕ ಪುನರಾರಂಭಗೊಂಡಿತ್ತು. ಅದರಲ್ಲಿ ಬೊತಾಸ್ ಪ್ರಶಸ್ತಿ ಗೆದ್ದಿದ್ದರೆ, ಹ್ಯಾಮಿಲ್ಟನ್‌ಗೆ ನಾಲ್ಕನೇ ಸ್ಥಾನ ದಕ್ಕಿತ್ತು. ಜುಲೈ 19ರ ಭಾನುವಾರ ನಡೆದ ಹಂಗರಿ ಗ್ರ್ಯಾನ್‌ ಪ್ರಿಯ ಪ್ರಶಸ್ತಿ ಸುತ್ತಿನ ರೇಸ್‌ನಲ್ಲಿ ಬೊತಾಸ್ ಕೂದಲೆಳೆ ಅಂತರದಲ್ಲಿ ಎರಡನೇ ಸ್ಥಾನ ಕಳೆದುಕೊಂಡಿದ್ದರು. ಇಲ್ಲಿ ವೈಯಕ್ತಿಕ 86ನೇ ಪ್ರಶಸ್ತಿ ಗೆದ್ದ ಹ್ಯಾಮಿಲ್ಟನ್ ಒಟ್ಟು 91 ಗ್ರ್ಯಾನ್ ಪ್ರಿ ಪ್ರಶಸ್ತಿ ಗಳಿಸಿರುವ ಶುಮಾಕರ್ ದಾಖಲೆಯ ಬೆನ್ನುಬಿದ್ದಿದ್ದಾರೆ. ಆಗಸ್ಟ್‌ನಲ್ಲಿ ಸ್ಪೇನ್‌, ಬೆಲ್ಜಿಯಂ ಮತ್ತು ಇಟಲಿಯಲ್ಲಿ ಒಟ್ಟು ನಾಲ್ಕು ರೇಸ್‌ಗಳಲ್ಲಿ ಪಾಲ್ಗೊಳ್ಳಲಿದ್ದು ಸೆಪ್ಟೆಂಬರ್‌ನಲ್ಲಿ ಇಟಲಿಯಲ್ಲಿ ಮತ್ತೆ ಎರಡು ರೇಸ್‌ಗಳು ಅವರಿಗಾಗಿ ಕಾದಿವೆ. ಇಲ್ಲೆಲ್ಲ ಗೆಲ್ಲುತ್ತ ಸಾಗಿದರೆ ಅವರ ದಾಖಲೆಯ ಕನಸು ನನಸಾಗಲಿದೆ.

ಆದರೆ ಬ್ರಿಟನ್‌ನ ಈ ಚಾಲಕನಿಗೆ ಬೊತಾಸ್ ಅಡ್ಡಿಯಾಗುವರೇ ಎಂಬುದು ಸದ್ಯದ ಕುತೂಹಲ. ಹಂಗರಿಯಲ್ಲಿ ಸ್ಪರ್ಧೆ ಮುಗಿದ ನಂತರ ಬಹುತೇಕ ಚಾಲಕರು ಬೊತಾಸ್ ಸಾಮರ್ಥ್ಯವನ್ನು ಕೊಂಡಾಡಿದ್ದರು. ವೆಟೆಲ್ ಮತ್ತು ಲೆಕ್ಲೆರ್ಕ್‌, ಈ ಬಾರಿಯ ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸುವ ಸಾಮರ್ಥ್ಯ ಇರುವ ಇಬ್ಬರ ಪೈಕಿ ಒಬ್ಬರು ಬೊತಾಸ್ ಎಂದು ಹೇಳಿದ್ದರು. ಹಂಗರಿ ಗ್ರ್ಯಾನ್‌ಪ್ರಿ ಫೈನಲ್‌ನ ಅಮೋಘ ’ಆರಂಭ‘ವೇ ಇಂಥ ಅಭಿಪ್ರಾಯಗಳು ಕೇಳಿಬರಲು ಕಾರಣ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.