ಟೊರಾಂಟೊ: ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್ ಅವರು ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ 11ನೇ ಸುತ್ತಿನಲ್ಲಿ, ಅಗ್ರ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ ಜೊತೆ ‘ಡ್ರಾ’ ಸಾಧಿಸಿ ಗಮನ ಸೆಳೆದರು. ಆದರೆ ಅವರು ಜಂಟಿ ಎರಡನೇ ಸ್ಥಾನಕ್ಕೆ ಸರಿದರು. ಭಾರತದ ಇನ್ನಿಬ್ಬರು ಗ್ರ್ಯಾಂಡ್‌ಮಾಸ್ಟರ್‌ಗಳಾದ ಆರ್. ಪ್ರಜ್ಞಾನಂದ ಮತ್ತು ವಿದಿತ್ ಗುಜರಾತಿ ಅವರು ಬುಧವಾರ ನಿರಾಸೆ ಅನುಭವಿಸಿದರು.
ಇಲ್ಲಿನ ‘ಗ್ರೇಟ್ ಹಾಲ್’ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಅಮೆರಿಕದ ಅನುಭವಿ ಆಟಗಾರ ಹಿಕಾರು ನಕಾಮುರಾ ಅವರು ಪ್ರಜ್ಞಾನಂದ ಅವರನ್ನು ಸೋಲಿಸಿದರೆ, ಕಳೆದ ಬಾರಿಯ ಚಾಂಪಿಯನ್ ಇಯಾನ್ ನೆಪೊಮ್‌ನಿಯಾಚಿ ಅವರು ವಿದಿತ್ ಎದುರು ಗೆಲುವು ಪಡೆದು ಏಕಾಂಗಿಯಾಗಿ ಅಗ್ರಸ್ಥಾನಕ್ಕೇರಿದರು.
ದಿನದ ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್‌ನ ಆಟಗಾರ ಅಲಿರೇಝಾ ಫಿರೋಜ್ ಅವರಿಗೆ ಅಜರ್‌ಬೈಜಾನ್‌ನ ನಿಜತ್ ಅಬಸೋವ್ ವಿರುದ್ಧ ಗೆಲುವು ದೊರೆಯಿತು. ಅಬಸೋವ್ ಇಲ್ಲಿ ಪಾಲ್ಗೊಂಡಿರುವ ಅತಿ ಕಡಿಮೆ (114ನೇ) ಕ್ರಮಾಂಕದ ಆಟಗಾರ ಎನಿಸಿದ್ದಾರೆ.
ಇನ್ನು ಮೂರು ಸುತ್ತುಗಳಷ್ಟೇ ಉಳಿದಿದ್ದು, ಇಲ್ಲಿ ಸತತ ಮೂರನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ನೆಪೊಮ್‌ನಿಯಾಚಿ ಏಳು ಪಾಯಿಂಟ್ಸ್ ಸಂಗ್ರಹಿಸಿ, ತಮ್ಮ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿದರು. ಟೂರ್ನಿಯ ಅತಿ ಕಿರಿಯ ಆಟಗಾರ ಎನಿಸಿರುವ 17 ವರ್ಷದ ಗುಕೇಶ್, ನಕಾಮುರಾ ಅವರೊಂದಿಗೆ (ತಲಾ 6.5) ಎರಡನೇ ಸ್ಥಾನದಲ್ಲಿದ್ದಾರೆ.
ಕರುವಾನಾ (6) ನಾಲ್ಕನೇ ಸ್ಥಾನದಲ್ಲಿದ್ದಾರೆ. ಪ್ರಜ್ಞಾನಂದ (5.5) ಮತ್ತು ವಿದಿತ್ (5) ನಂತರದ ಸ್ಥಾನಗಳಲ್ಲಿದ್ದಾರೆ. ಅಲಿರೇಝಾ (4.5), ಅಬಸೋವ್ (3) ಏಳು ಮತ್ತು ಎಂಟನೇ ಸ್ಥಾನದಲ್ಲಿದ್ದಾರೆ.
ಮಹಿಳಾ ವಿಭಾಗದಲ್ಲಿ ಚೀನಾದ ಚೆಸ್ ತಾರೆಯರು ಮೇಲುಗೈ ಸಾಧಿಸಿದರು. ಝೊಂಗ್‌ಯಿ ತಾನ್ ಅವರು ರಷ್ಯಾದ ಕ್ಯಾತರಿನಾ ಲಾಗ್ನೊ ಅವರನ್ನು ಸೋಲಿಸಿ, ಏಳೂವರೆ ಪಾಯಿಂಟ್ಸ್‌ನೊಡನೆ ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟರು.
ಚೀನಾದ ಮತ್ತೋರ್ವ ಆಟಗಾರ್ತಿ ಟಿಂಗ್ಜಿ ಲೀ, ಉಕ್ರೇನ್‌ನ ಅನ್ನಾ ಮುಝಿಚುಕ್ (4.5) ಅವರ ಜೊತೆ ಪಾಯಿಂಟ್ ಹಂಚಿಕೊಂಡರು.
ಗೆದ್ದ ಹಂಪಿ, ವೈಶಾಲಿ:
ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್.ವೈಶಾಲಿ ಇನ್ನೊಂದು ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ (ರಷ್ಯಾ) ಅವರನ್ನು 70 ನಡೆಗಳಲ್ಲಿ ಸೋಲಿಸಿ, ಜಯದ ಹಳಿಗೆ ಮರಳಿದರು. ಹಂಪಿ, ಬಲ್ಗೇರಿಯಾದ ನುರ್ಗ್ಯುಲ್ ಸಲಿಮೋವಾ (4) ಅವರನ್ನು ಮಣಿಸಿದರು. ಆ ಮೂಲಕ ಟೂರ್ನಿಯ ಮೊದಲ ರೌಂಡ್‌ರಾಬಿನ್ ಲೀಗ್‌ನಲ್ಲಿ ಅನುಭವಿಸಿದ ಸೋಲಿಗೆ ಮುಯ್ಯಿ ತೀರಿಸಿಕೊಂಡರು.
ಝೊಂಗ್‌ಯಿ ತಾನ್ ಏಳು ಪಾಯಿಂಟ್‌ಗಳೊಡನೆ ಅಗ್ರಸ್ಥಾನದಲ್ಲಿದ್ದಾರೆ. ಲೀ ಟಿಂಗ್ಜಿ ಅರ್ಧ ಪಾಯಿಂಟ್ ಅಂತರದಿಂದ ಎರಡನೇ ಸ್ಥಾನದಲ್ಲಿದ್ದಾರೆ. ವೈಶಾಲಿ ಎದುರು ಹಿನ್ನಡೆಯಿಂದ ಗೊರ್ಯಾಚ್ಕಿನಾ ಪ್ರಶಸ್ತಿ ಆಸೆಗೆ ಬಲವಾದ ಹಿನ್ನಡೆಯಾಗಿದೆ.
Highlights - ಅಗ್ರಸ್ಥಾನಕ್ಕೇರಿದ ನೆಪೊಮ್‌ನಿಯಾಚಿ ವೈಶಾಲಿಗೆ ಮಣಿದ ಗೊರ್ಯಾಚ್ಕಿನಾ ಮಹಿಳಾ ವಿಭಾಗದಲ್ಲಿ ಝೊಂಗ್‌ಯಿ ಮುನ್ನಡೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.