ADVERTISEMENT

ಇಂಡಿಯಾ ಓಪನ್ ಬ್ಯಾಡ್ಮಿಂಟನ್‌ ಟೂರ್ನಿ: ಕಿದಂಬಿ ಶ್ರೀಕಾಂತ್‌, ಸಿಂಧು ಶುಭಾರಂಭ

ಇಂಡಿಯಾ ಓಪನ್ ಬ್ಯಾಡ್ಮಿಂಟನ್‌ ಟೂರ್ನಿ: ಎವ್ಜೀನಿಯಾಗೆ ಅಸ್ಮಿತಾ ಚಾಲಿಹಾ ಆಘಾತ

ಪಿಟಿಐ
Published 11 ಜನವರಿ 2022, 13:24 IST
Last Updated 11 ಜನವರಿ 2022, 13:24 IST
ಪಿ.ವಿ.ಸಿಂಧು ಆಟದ ಭಂಗಿ –ಪಿಟಿಐ ಚಿತ್ರ
ಪಿ.ವಿ.ಸಿಂಧು ಆಟದ ಭಂಗಿ –ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ಅಗ್ರಶ್ರೇಯಾಂಕದ ಭಾರತದ ಕಿದಂಬಿ ಶ್ರೀಕಾಂತ್‌ ಮತ್ತು ಪಿ.ವಿ.ಸಿಂಧು ಅವರು ಇಂಡಿಯಾ ಓಪನ್ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಮಂಗಳವಾರ ನಡೆದ ಪುರುಷರ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್ ಜೂನಿಯರ್ ವಿಭಾಗದ ವಿಶ್ವ ಕ್ರಮಾಂಕದಲ್ಲಿ ಅಗ್ರಸ್ಥಾನದಕ್ಕೇರಿದ್ದ ಸಿರಿಲ್ ವರ್ಮಾ ಎದುರು 21-17, 21-10ರಲ್ಲಿ ಜಯ ಗಳಿಸಿದರು. ಸಿಂಧು ಭಾರತದವರೇ ಆದ ಶ್ರೀಕೃಷ್ಣಪ್ರಿಯ ಕುದರವಲ್ಲಿ ಅವರನ್ನು 21-5, 21-16ರಲ್ಲಿ ಮಣಿಸಿದರು.

ಸಿಂಧು ಮುಂದಿನ ಪಂದ್ಯದಲ್ಲಿ ಈಜಿಪ್ಟ್‌ನ ಹ್ಯಾನಿ ದೋಹಾ ವಿರುದ್ಧ ಕಣಕ್ಕೆ ಇಳಿಯಲಿದ್ದು ಶ್ರೀಕಾಂತ್‌ಗೆ ಡೆನ್ಮಾರ್ಕ್‌ನ ಕಿಮ್ ಬ್ರುನ್‌ ಎದುರಾಳಿ. ಮೊದಲ ಸುತ್ತಿನಲ್ಲಿ ಕಿಮ್ ಭಾರತದ ಶುಭಂಕರ್‌ ವಿರುದ್ಧ 21-19, 18-21, 21-14ರಲ್ಲಿ ಗೆದ್ದರು.

ADVERTISEMENT

ಪುರುಷರ ವಿಭಾಗದ ಹಾಲಿ ವಿಶ್ವ ಚಾಂಪಿಯನ್ ಲೊಹ್‌ ಕೀನ್ ಮೂರು ಗೇಮ್‌ಗಳ ಹಣಾಹಣಿಯಲ್ಲಿ ಕೆನಡಾದ ಕ್ಸಿಯಾಡಾಂಗ್ ಶೆಂಗ್‌ ಎದುರು 16-21, 21-4, 21-13 ಗೆಲುವು ದಾಖಲಿಸಿದರು.

ಚಿರಾಗ್ ಸೇನ್ 8-21, 7-21ರಲ್ಲಿ ಮಲೇಷ್ಯಾದ ಸೂಂಗ್ ಜೂ ವೆನ್‌ ಎದುರು ಸೋತು ಹೊರಬಿದ್ದರು. ಮಿಶ್ರ ಡಬಲ್ಸ್‌ನಲ್ಲಿ ಕೆ.ಸಾಯಿ ಪ್ರಣೀತ್ ಮತ್ತು ಗಾಯತ್ರಿ ಗೋಪಿಚಂದ್‌ ಜೋಡಿ ಇಶಾನ್ ಭಟ್ನಾಗರ್ ಮತ್ತು ತನಿಶಾ ಕ್ಯಾಸ್ಟ್ರೊ ವಿರುದ್ಧ21-16, 16-21, 21-17ರಲ್ಲಿ ಜಯ ಸಾಧಿಸಿದರು. ಪುರಷರ ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಇಂಡೊನೇಷ್ಯಾ ಜೋಡಿ ಮೊಹಮ್ಮದ್ ಅಹ್ಸಾನ್ ಮತ್ತು ಹೇಂದ್ರ ಸೇತ್ಯವನ್ 21-18, 21-10ರಲ್ಲಿ ಭಾರತದ ಪ್ರೇಮ್ ಸಿಂಗ್‌ ಚೌಹಾಣ್‌ ಮತ್ತು ರಾಜೇಶ್ ವರ್ಮಾ ಅವರನ್ನು ಮಣಿಸಿದರು.

ಎವ್ಜೀನಿಯಾಗೆ ಅಸ್ಮಿತಾ ಚಾಲಿಹಾ ಆಘಾತ

ಗುವಾಹಟಿಯಯುವ ಆಟಗಾರ್ತಿ ಅಸ್ಮಿತಾ ಚಾಲಿಹಾ ಐದನೇ ಶ್ರೇಯಾಂಕದ ರಷ್ಯಾ ಆಟಗಾರ್ತಿ ಎವ್ಜೀನಿಯಾ ಕೊತೆಸ್ಕಾಯ ವಿರುದ್ಧ24-22, 21-16ರಲ್ಲಿ ಜಯ ಸಾಧಿಸಿದರು. ವಿಶ್ವ ಕ್ರಮಾಂಕದಲ್ಲಿ 28ನೇ ಸ್ಥಾನದಲ್ಲಿರುವ ಎವ್ಜೀನಿಯಾ ಕೇವಲ 31 ನಿಮಿಷಗಳಲ್ಲಿ ಭಾರತದ ಆಟಗಾರ್ತಿಗೆ ಮಣಿದರು.

ಆರಂಭದಲ್ಲಿ ಪಾರಮ್ಯ ಮೆರೆದ ಅಸ್ಮಿತಾ 11–5ರ ಮುನ್ನಡೆ ಸಾಧಿಸಿದರು. ವಿರಾಮದ ನಂತರ ಸ್ವಯಂ ತಪ್ಪುಗಳನ್ನು ಎಸಗಿ ಪಾಯಿಂಟ್‌ಗಳನ್ನು ಕಳೆದುಕೊಂಡರು. ಹೀಗಾಗಿ 14–14ರಲ್ಲಿ ಸಮಬಲ ಸಾಧಿಸಲು ಎದುರಾಳಿಗೆ ಸಾಧ್ಯವಾಯಿತು. ಆ ಮೇಲೆ 16-19ರ ಮುನ್ನಡೆಯೊಂದಿಗೆ ಗೇಮ್‌ ಪಾಯಿಂಟ್‌ನತ್ತ ಹೆಜ್ಜೆ ಹಾಕಿದರು. ಆದರೆ ಪಟ್ಟು ಬಿಡದೆ ಆಡಿದ ಅಸ್ಮಿತಾ ತಿರುಗೇಟು ನೀಡಿದರು. ಭರ್ಜರಿ ಸ್ಮ್ಯಾಷ್ ಮೂಲಕ ಗೇಮ್‌ ತಮ್ಮದಾಗಿಸಿಕೊಂಡರು.

ಎರಡನೇ ಗೇಮ್‌ನಲ್ಲೂ ಅಸ್ಮಿತಾ 11–4ರ ಮುನ್ನಡೆಯೊಂದಿಗೆ ಮುನ್ನುಗ್ಗಿದರು. ಗೇಮ್‌ನ ಕೊನೆಯ ಹಂತದಲ್ಲಿ ರಷ್ಯಾ ಆಟಗಾರ್ತಿ 19–16ರಲ್ಲಿ ಮುನ್ನಡೆದು ಆತಂಕ ಸೃಷ್ಟಿಸಿದರು. ಅದರೆ ತಾಳ್ಮೆಯಿಂದ ಆಡಿದ ಅಸ್ಮಿತಾ ಗೆಲುವು ತಮ್ಮದಾಗಿಸಿಕೊಂಡರು.ಮುಂದಿನ ಪಂದ್ಯದಲ್ಲಿ ಅವರು ಫ್ರಾನ್ಸ್‌ನ ಯೆಲ್ಲಿ ಹೊಯಾಕ್ಸ್ ವಿರುದ್ಧ ಆಡಲಿದ್ದಾರೆ. ರಿಯಾ ಮುಖರ್ಜಿ ಅವರನ್ನು ಯೆಲ್ಲಿ 14-21,13-21ರಲ್ಲಿ ಸೋಲಿಸಿದರು.

ಕೆಲವು ವರ್ಷಗಳಿಂದ ಹೆಚ್ಚು ಪಂದ್ಯಗಳನ್ನು ಆಡುವ ಅವಕಾಶ ಸಿಗಲಿಲ್ಲ. ಆದ್ದರಿಂದ ಒಂದು ಹಂತದಲ್ಲಿ ಆತಂಕದಲ್ಲಿದ್ದೆ. ಆದರೆ ಮೊದಲ ಗೇಮ್‌ ಗೆದ್ದ ನಂತರ ಭರವಸೆ ಮೂಡಿತು.

ಅಸ್ಮಿತಾ ಚಾಲಿಹಾ ಭಾರತದ ಆಟಗಾರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.