ADVERTISEMENT

ಚಾಂಪಿಯನ್ಸ್‌ ಟ್ರೋಫಿ ಹಾಕಿ: ಭಾರತಕ್ಕೆ ಗೆಲುವಿನ ‘ಹ್ಯಾಟ್ರಿಕ್‌’ ಗುರಿ

ಪಿಟಿಐ
Published 26 ಜೂನ್ 2018, 18:38 IST
Last Updated 26 ಜೂನ್ 2018, 18:38 IST
ಭಾರತದ ಆಟಗಾರರು ಆಸ್ಟ್ರೇಲಿಯಾವನ್ನು ಮಣಿಸುವ ವಿಶ್ವಾಸದಲ್ಲಿದ್ದಾರೆ
ಭಾರತದ ಆಟಗಾರರು ಆಸ್ಟ್ರೇಲಿಯಾವನ್ನು ಮಣಿಸುವ ವಿಶ್ವಾಸದಲ್ಲಿದ್ದಾರೆ   

ಬ್ರೆಡಾ, ನೆದರ್‌ಲ್ಯಾಂಡ್ಸ್‌ : ಆಡಿರುವ ಎರಡೂ ಪಂದ್ಯಗಳಲ್ಲಿ ಎದುರಾಳಿಗಳ ಸವಾಲು ಮೀರಿರುವ ಭಾರತ ತಂಡ ಎಫ್‌ಐಎಚ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಗೆಲುವಿನ ‘ಹ್ಯಾಟ್ರಿಕ್‌’ ಮೇಲೆ ಕಣ್ಣಿಟ್ಟಿದೆ.

ಬುಧವಾರ ನಡೆಯುವ ತನ್ನ ಮೂರನೇ ಹಣಾಹಣಿಯಲ್ಲಿ ಪಿ.ಆರ್‌.ಶ್ರೀಜೇಶ್‌ ಬಳಗ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.

ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಭಾರತ ತಂಡ ಈ ಬಾರಿ ಆಡಿದ ಮೊದಲ ಪಂದ್ಯದಲ್ಲಿ 4–0 ಗೋಲುಗಳಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾವನ್ನು ಸೋಲಿಸಿತ್ತು. ಎರಡನೇ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟೀನಾಕ್ಕೆ ಆಘಾತ ನೀಡಿ ಹಾಕಿ ಪ್ರಿಯರ ಮನ ಗೆದ್ದಿತ್ತು.

ADVERTISEMENT

ಒಟ್ಟು ಆರು ಪಾಯಿಂಟ್ಸ್‌ ಕಲೆಹಾಕಿರುವ ಶ್ರೀಜೇಶ್‌ ಪಡೆ, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾದ ಖಾತೆಯಲ್ಲಿ ನಾಲ್ಕು ಪಾಯಿಂಟ್ಸ್‌ ಇದ್ದು ಈ ತಂಡ ಎರಡನೇ ಸ್ಥಾನ ತನ್ನದಾಗಿಸಿಕೊಂಡಿದೆ.

ಶೋರ್ಡ್‌ ಮ್ಯಾರಿಜ್‌ ಮಾರ್ಗದರ್ಶನದಲ್ಲಿ ತರಬೇತುಗೊಂಡಿದ್ದ ಭಾರತ ತಂಡ, ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಗಳಿಸಿ ಟೀಕೆಗೆ ಗುರಿಯಾಗಿತ್ತು. ಹೀಗಾಗಿ ಹಾಕಿ ಇಂಡಿಯಾ (ಎಚ್‌ಐ) ಮ್ಯಾರಿಜ್‌ ಬದಲು ಹರೇಂದರ್‌ ಸಿಂಗ್‌ ಅವರನ್ನು ಮುಖ್ಯ ಕೋಚ್‌ ಆಗಿ ನೇಮಿಸಿತ್ತು.

ಹರೇಂದರ್‌ ಅವರ ಗರಡಿಯಲ್ಲಿ ಶ್ರೀಜೇಶ್‌ ಪಡೆಯ ಆಟಗಾರರು ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯ್‌) ವಿಶೇಷ ತರಬೇತಿ ಪಡೆದಿದ್ದರು. ಇದು ಆಟಗಾರರ ಸಾಮರ್ಥ್ಯ ಹೆಚ್ಚುವಂತೆ ಮಾಡಿದೆ.

ಪಾಕಿಸ್ತಾನ ಎದುರು ಭಾರತದ ಮುಂಚೂಣಿ ವಿಭಾಗದ ಆಟಗಾರರು ಪರಿಣಾಮಕಾರಿ ಆಟ ಆಡಿದ್ದರು. ನಾಲ್ಕು ಫೀಲ್ಡ್‌ ಗೋಲುಗಳನ್ನು ಗಳಿಸಿ ಗಮನ ಸೆಳೆದಿದ್ದರು.

ದಿಲ್‌‍ಪ್ರೀತ್‌ ಸಿಂಗ್‌, ಮನದೀಪ್‌ ಸಿಂಗ್, ಲಲಿತ್‌ ಉಪಾಧ್ಯಾಯ ಮತ್ತು ಕರ್ನಾಟಕದ ಎಸ್‌.ವಿ.ಸುನಿಲ್‌ ಹಿಂದಿನ ಪಂದ್ಯಗಳಲ್ಲಿ ಮಿಂಚಿದ್ದರು. ಇವರು ಆಸ್ಟ್ರೇಲಿಯಾ ಎದುರೂ ಮೋಡಿ ಮಾಡಲು ಕಾಯುತ್ತಿದ್ದಾರೆ. ಮಿಡ್‌ಫೀಲ್ಡ್‌ ವಿಭಾಗದಲ್ಲಿ ಅನುಭವಿ ಸರ್ದಾರ್‌ ಸಿಂಗ್‌ ಅವರ ಬಲ ತಂಡಕ್ಕಿದೆ.

ಆಸ್ಟ್ರೇಲಿಯಾ ತಂಡ ಭಾರತವನ್ನು ಮಣಿಸಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವತ್ತ ಚಿತ್ತ ನೆಟ್ಟಿದೆ. ಈ ತಂಡ ಮೊದಲ ಪಂದ್ಯದಲ್ಲಿ ಬೆಲ್ಜಿಯಂ ಎದುರು 3–3 ಗೋಲುಗಳಿಂದ ಡ್ರಾ ಮಾಡಿಕೊಂಡಿತ್ತು. ನಂತರ 2–1 ಗೋಲುಗಳಿಂದ ಪಾಕಿಸ್ತಾನವನ್ನು ಮಣಿಸಿತ್ತು.

ಲಂಡನ್‌ನಲ್ಲಿ ನಡೆದಿದ್ದ ಹಿಂದಿನ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಪ್ರಶಸ್ತಿ ಗೆದ್ದಿತ್ತು. ಫೈನಲ್‌ನಲ್ಲಿ ಭಾರತವನ್ನು ಸೋಲಿಸಿತ್ತು.

ಕಾಂಗರೂಗಳ ನಾಡಿನ ತಂಡ ಆಟದ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದೆ. ಹೀಗಾಗಿ ಭಾರತದ ‘ಹ್ಯಾಟ್ರಿಕ್‌’ ಹಾದಿ ಅಷ್ಟು ಸುಲಭವಾಗಿಲ್ಲ.

ರಮಣದೀಪ್‌ ಅಲಭ್ಯ

ಗಾಯಗೊಂಡಿರುವ ಭಾರತದ ರಮಣದೀಪ್‌ ಸಿಂಗ್‌ ಅವರು ಚಾಂಪಿಯನ್ಸ್‌ ಟ್ರೋಫಿಯಿಂದ ಹೊರ ಬಿದ್ದಿದ್ದಾರೆ.

ಪಾಕಿಸ್ತಾನ ಎದುರಿನ ಪಂದ್ಯದ ವೇಳೆ ರಮಣದೀಪ್‌ ಅವರ ಬಲ ಮಂಡಿಗೆ ಪೆಟ್ಟು ಬಿದ್ದಿತ್ತು.

‘ರಮಣದೀಪ್‌ಗೆ ಆಗಿರುವ ಗಾಯ ಗಂಭೀರ ಸ್ವರೂಪದ್ದಾಗಿದೆ. ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಹೀಗಾಗಿ ಟೂರ್ನಿಯ ಉಳಿದ ಪಂದ್ಯಗಳಲ್ಲಿ ಅವರು ಆಡುವುದಿಲ್ಲ’ ಎಂದು ತಂಡದ ಮುಖ್ಯ ಕೋಚ್‌ ಹರೇಂದರ್‌ ಸಿಂಗ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.