ADVERTISEMENT

ಚೆಸ್‌: ಕಾರ್ಲ್‌ಸನ್‌–ನೀಮನ್‌ ವಿವಾದಕ್ಕೆ ತೆರೆ

ರಾಯಿಟರ್ಸ್
Published 29 ಆಗಸ್ಟ್ 2023, 16:42 IST
Last Updated 29 ಆಗಸ್ಟ್ 2023, 16:42 IST
ಮ್ಯಾಗ್ನಸ್‌ ಕಾರ್ಲ್‌ಸನ್‌
ಮ್ಯಾಗ್ನಸ್‌ ಕಾರ್ಲ್‌ಸನ್‌   

ನ್ಯೂಯಾರ್ಕ್‌: ವಿಶ್ವದ ಅಗ್ರಮಾನ್ಯ ಚೆಸ್‌ ಆಟಗಾರ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಮತ್ತು ಅಮೆರಿಕದ ಗ್ರ್ಯಾಂಡ್‌ಮಾಸ್ಟರ್‌ ಹ್ಯಾನ್ಸ್‌ ನೀಮನ್‌ ಅವರು ಮೋಸದಾಟ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ನಡುವೆ ಇದ್ದ ವಿವಾದವನ್ನು ಬಗೆಹರಿಸಿಕೊಂಡಿದ್ದಾರೆ ಎಂದು ಆನ್‌ಲೈನ್‌ ಚೆಸ್‌ ಆಟದ ವೇದಿಕೆ ‘ಚೆಸ್‌ ಡಾಟ್‌ ಕಾಂ’ ವರದಿ ಮಾಡಿದೆ.

ಇವರ ನಡುವಿನ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಕಾನೂನು ಹೋರಾಟ ಕೊನೆಗೊಳಿಸಿ ವಿವಾದಕ್ಕೆ ತೆರೆಎಳೆಯಲು ಇಬ್ಬರೂ ಒಪ್ಪಿಕೊಂಡಿದ್ದಾರೆ.

2022ರ ಸೆಪ್ಟೆಂಬರ್‌ನಲ್ಲಿ ಆರಂಭವಾಗಿದ್ದ ವಿವಾದ ಸಾಕಷ್ಟು ಸುದ್ದಿಮಾಡಿತ್ತು. ಸೆಪ್ಟೆಂಬರ್‌ ಮೊದಲ ವಾರದಲ್ಲಿ ಅಮೆರಿಕದ ಸೇಂಟ್‌ ಲೂಯಿಸ್‌ನಲ್ಲಿ ನಡೆದಿದ್ದ ಸಿಂಕ್‌ಫೀಲ್ಡ್‌ ಕಪ್‌ ಟೂರ್ನಿಯಲ್ಲಿ ಕಾರ್ಲ್‌ಸನ್‌, ನೀಮನ್‌ ಎದುರು ಸೋತಿದ್ದರು. ಅಮೆರಿಕದ ಆಟಗಾರ ಮೋಸದ ಆಟವಾಡಿದ್ದಾರೆ ಎಂದು ಆರೋಪಿಸಿ, ಕಾರ್ಲ್‌ಸನ್‌ ಟೂರ್ನಿಯಿಂದಲೇ ಹಿಂದೆ ಸರಿದಿದ್ದರು.

ADVERTISEMENT

ಇದಾದ ಕೆಲ ವಾರಗಳ ಬಳಿಕ ನಡೆದಿದ್ದ ಆನ್‌ಲೈನ್‌ ಟೂರ್ನಿಯಲ್ಲಿ ನಾರ್ವೆಯ ಆಟಗಾರ, 20 ವರ್ಷದ ನೀಮನ್‌ ವಿರುದ್ಧದ ಪಂದ್ಯದಲ್ಲಿ ಕೇವಲ ಒಂದು ನಡೆಯ ಬಳಿ ಹಿಂದೆ ಸರಿದಿದ್ದರು. ‘ನೀಮನ್‌ ಅಥವಾ ಆ ರೀತಿಯ ಮೋಸದ ಆಟದಲ್ಲಿ ತೊಡಗಿದವರ ಜತೆ ನಾನು ಆಡುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದರು.

‘ಈ ಹಿಂದೆ 12 ವರ್ಷ ಮತ್ತು 16 ವರ್ಷದವನಾಗಿದ್ದಾಗ ಆನ್‌ಲೈನ್‌ ಚೆಸ್‌ ಟೂರ್ನಿಯಲ್ಲಿ ಆಡುವಾಗ ಮೋಸ ಮಾಡಿದ್ದೆ’ ಎಂದು ನೀಮನ್‌ ಒಪ್ಪಿಕೊಂಡಿದ್ದರು. ಆದರೆ ಚೆಸ್‌ಬೋರ್ಡ್‌ ಮುಂದೆ (ಓವರ್‌ ದಿ ಬೋರ್ಡ್) ಆಡುವಾಗ ಮೋಸ ಮಾಡಿಲ್ಲ ಎಂದಿದ್ದರು.

ನೀಮನ್‌ ಅವರು ಆ ಬಳಿಕ ಕಾರ್ಲ್‌ಸನ್‌ ವಿರುದ್ಧ ₹ 827 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅಮೆರಿಕದ ಮಿಸ್ಸೋರಿಯ ಡಿಸ್ಟ್ರಿಕ್ಟ್‌ ಕೋರ್ಟ್‌ನಲ್ಲಿ ಈ ಕುರಿತು ಮೊಕದ್ದಮೆ ದಾಖಲಾಗಿತ್ತು.

ಕಾರ್ಲ್‌ಸನ್‌ ಆರೋಪಗಳ ಬಗ್ಗೆ ‘ಚೆಸ್‌ ಡಾಟ್‌ ಕಾಂ’ ಸಂಸ್ಥೆ ಕೂಡಾ ತನಿಖೆ ಕೈಗೊಂಡಿತ್ತು. ‘ಚೆಸ್‌ ಬೋರ್ಡ್‌ ಮುಂದೆ ಆಡುವಾಗ ನೀಮನ್‌ ಮೋಸ ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ನಿರ್ಣಾಯಕ ಪುರಾವೆಗಳು ದೊರೆತಿಲ್ಲ’ ಎಂದು ಸೋಮವಾರ ಬಿಡುಗಡೆಗೊಳಿಸಿದ ವರದಿಯಲ್ಲಿ ಹೇಳಿದೆ.

‘ಸಿಂಕ್‌ಫೀಲ್ಡ್ ಕಪ್‌ನಲ್ಲಿ ನನ್ನ ವಿರುದ್ಧದ ಪಂದ್ಯದಲ್ಲಿ ನೀಮನ್ ಮೋಸ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂಬ ಚೆಸ್‌ ಡಾಟ್‌ ಕಾಂ ವರದಿಯನ್ನು ಅಂಗೀಕರಿಸುತ್ತೇನೆ. ಭವಿಷ್ಯದಲ್ಲಿ ಅವರ ವಿರುದ್ಧ ಆಡಲು ಸಿದ್ಧ’ ಎಂದು ಕಾರ್ಲ್‌ಸನ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.