ಚೆನ್ನೈ: ದೇಶದ ಅಗ್ರಮಾನ್ಯ ಆಟಗಾರ ಎಂಬ ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಅವರ 37 ವರ್ಷಗಳ ದೀರ್ಘ ಕಾಲದ ಆಧಿಪತ್ಯ ಅಂತ್ಯಗೊಂಡಿತು. ಹದಿಹರೆಯದ ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್ ಅವರು ಶುಕ್ರವಾರ ಅಧಿಕೃತವಾಗಿ ಆ ಸ್ಥಾನಕ್ಕೇರಿದ್ದಾರೆ.
1986ರ ಜುಲೈ 1 ರಿಂದ ಆನಂದ್ ಅವರು ದೇಶದ ನಂಬರ್ ವನ್ ಆಟಗಾರರಾಗಿದ್ದರು. ಚೆನ್ನೈನ ಗುಕೇಶ್ ಅವರು ಬಾಕುವಿನಲ್ಲಿ (ಅಜರ್‌ಬೈಜಾನ್) ನಡೆದ ವಿಶ್ವಕಪ್ ಚೆಸ್ ಟೂರ್ನಿಯ ವೇಳೆ ರ‍್ಯಾಂಕಿಂಗ್‌ನಲ್ಲಿ ಆನಂದ್ ಅವರನ್ನು ಹಿಂದೆಹಾಕಿದ್ದರು. ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಸೋತಿದ್ದರು.
ಸೆಪ್ಟೆಂಬರ್ ತಿಂಗಳ ಫಿಡೆ ಕ್ರಮಾಂಕ ಪಟ್ಟಿ ಪ್ರಕಟವಾಗಿದ್ದು ಅದರಲ್ಲಿ 17 ವರ್ಷದ ಗುಕೇಶ್ ಅವರು 2758 ರೇಟಿಂಗ್‌ನೊಡನೆ ಎಂಟನೇ ಸ್ಥಾನಕ್ಕೆ ಏರಿದ್ದಾರೆ. ಐದು ಬಾರಿಯ ವಿಶ್ವ ಚಾಂಪಿಯನ್ ಆನಂದ್ (2754) ಈಗ 9ನೇ ಸ್ಥಾನದಲ್ಲಿದ್ದಾರೆ. ಆಗಸ್ಟ್ ತಿಂಗಳ ರೇಟಿಂಗ್ ಪಟ್ಟಿಯಲ್ಲಿ ಗುಕೇಶ್ 11ನೇ ಸ್ಥಾನದಲ್ಲಿದ್ದರು. ಆಗ ಅವರ ಬಳಿ 2751 ಪಾಯಿಂಟ್ಸ್ ಇತ್ತು.
ಚೆಸ್ ವಿಶ್ವಕಪ್ ಫೈನಲ್ ತಲುಪಿ ಮನೆಮಾತಾದ ಇನ್ನೊಬ್ಬ ಪ್ರತಿಭಾವಂತ ಆರ್.ಪ್ರಜ್ಞಾನಂದ (2727) ಅವರೂ ಬಡ್ತಿ ಪಡೆದಿದ್ದು 19ನೇ ಸ್ಥಾನಕ್ಕೇರಿದ್ದಾರೆ. ಅವರು ಭಾರತದ ಆಟಗಾರರ ಪೈಕಿ ಮೂರನೇ ಸ್ಥಾನದಲ್ಲಿದ್ದಾರೆ.
ಭಾರತದ ಐವರು ಆಟಗಾರರು ಅಗ್ರ 30ರೊಳಗೆ ಸ್ಥಾನ ಪಡೆದಿದ್ದಾರೆ. ಗುಕೇಶ್, ಆನಂದ್, ಪ್ರಗ್ಗು ಜೊತೆ ವಿದಿತ್ ಗುಜರಾತಿ (27ನೇ) ಮತ್ತು ಅರ್ಜನ್ ಎರಿಗೇಶಿ ಅವರು (29) ಅವರು ಇತರ ಇಬ್ಬರು. ಅನುಭವಿ ಆಟಗಾರ ಪಿ.ಹರಿಕೃಷ್ಣ 31ನೇ ಸ್ಥಾನದಲ್ಲಿದ್ದಾರೆ. ನಿಹಾಲ್ ಸರೀನ್ 43ನೇ ಸ್ಥಾನಕ್ಕೇರಿದ್ದಾರೆ. ಕಳೆದ ತಿಂಗಳು 51ನೇ ಸ್ಥಾನದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.