ADVERTISEMENT

ಇನ್ನಷ್ಟು ಸಾಧನೆಯ ಗುರಿ: ಗ್ರ್ಯಾಂಡ್‌ಮಾಸ್ಟರ್‌ ಪ್ರಣವ್‌ ಆನಂದ್

ಜಿಎಂ ಪ್ರಣವ್‌ಗೆ ₹ 10 ಲಕ್ಷ ಬಹುಮಾನ ಘೋಷಣೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 4:24 IST
Last Updated 20 ಸೆಪ್ಟೆಂಬರ್ 2022, 4:24 IST
ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಅವರು ಪ್ರಣವ್ ಅವರನ್ನು ಅಭಿನಂದಿಸಿದರು. ಪ್ರಜಾವಾಣಿ ಚಿತ್ರ/ ಎಸ್‌.ಕೆ.ದಿನೇಶ್
ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಅವರು ಪ್ರಣವ್ ಅವರನ್ನು ಅಭಿನಂದಿಸಿದರು. ಪ್ರಜಾವಾಣಿ ಚಿತ್ರ/ ಎಸ್‌.ಕೆ.ದಿನೇಶ್   

ಬೆಂಗಳೂರು: ‘ಆಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ದು, ಇನ್ನಷ್ಟು ಸಾಧನೆ ಮಾಡುವ ಹಂಬಲ ನನ್ನದು’ ಎಂದು ಗ್ರ್ಯಾಂಡ್‌ಮಾಸ್ಟರ್‌ ಪದವಿ ಪಡೆದ ಕರ್ನಾಟಕದ ಅತಿಕಿರಿಯ ಚೆಸ್‌ ಸ್ಪರ್ಧಿ ಪ್ರಣವ್‌ ಆನಂದ್ ಹೇಳಿದರು.

ಯುವ ಸಬಲೀಕರಣ ಮತ್ತು ಕೀಡಾ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಪಾಲ್ಗೊಂಡರು.

‘ಮುಂದೆ ಪಾಲ್ಗೊಳ್ಳಲಿರುವ ಟೂರ್ನಿಗಳಲ್ಲಿ ಕಠಿಣ ಸವಾಲು ಎದುರಾಗಲಿದೆ. ನವದೆಹಲಿಯಲ್ಲಿ ಅಕ್ಟೋಬರ್‌ನಲ್ಲಿ ನಡೆಯಲಿರುವ ಏಷ್ಯನ್‌ ಕಾಂಟಿನೆಂಟಲ್‌ ಟೂರ್ನಿಯಲ್ಲಿ ಭಾಗವಹಿಸಲಿದ್ದೇನೆ. ಅದು ಚೆಸ್‌ ವಿಶ್ವಕಪ್‌ಗೆ ಅರ್ಹತಾ ಟೂರ್ನಿಯಾಗಿದೆ’ ಎಂದರು.

ADVERTISEMENT

‘ಆ ಬಳಿಕ ಏನು ಮಾಡಬೇಕು ಎಂಬುದರ ಬಗ್ಗೆ ಸದ್ಯಕ್ಕೆ ಯಾವುದೇ ಯೋಜನೆ ಹಾಕಿಕೊಂಡಿಲ್ಲ. ಇದರ ನಡುವೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೂ ತಯಾರಿ ನಡೆಸಬೇಕಿದೆ’ ಎಂದು ತಿಳಿಸಿದರು.

₹ 10 ಲಕ್ಷ ಬಹುಮಾನ ಘೋಷಣೆ: ‘ರಾಜ್ಯದ ಅತಿಕಿರಿಯ ಗ್ರ್ಯಾಂಡ್‌ಮಾಸ್ಟರ್‌ ಎನಿಸಿಕೊಂಡ ಪ್ರಣವ್‌ ಅವರಿಗೆ ರಾಜ್ಯ ಸರ್ಕಾರ ₹ 10 ಲಕ್ಷ ನಗದು ಬಹುಮಾನ ನೀಡಲು ನಿರ್ಧರಿಸಿದೆ. ಅವರು ಇನ್ನಷ್ಟು ಸಾಧನೆ ಮೂಲಕ ರಾಜ್ಯ ಹಾಗೂ ದೇಶದ ಕೀರ್ತಿ ಹೆಚ್ಚಿಸಲಿ‘ ಎಂದು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಶುಭಹಾರೈಸಿದರು.

15 ವರ್ಷದ ಪ್ರಣವ್‌ ಅವರು ರೊಮೇನಿಯದಲ್ಲಿ ನಡೆದ ವಿಶ್ವ ಯೂತ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು. ಮಾತ್ರವಲ್ಲ, ಗ್ರ್ಯಾಂಡ್‌ಮಾಸ್ಟರ್‌ ಪಟ್ಟ ತಮ್ಮದಾಗಿಸಿಕೊಂಡಿದ್ದರು.

ಎಂ.ಎಸ್‌.ತೇಜಕುಮಾರ್‌, ಜಿ.ಎ.ಸ್ಟ್ಯಾನಿ ಮತ್ತು ಗಿರೀಶ್‌ ಕೌಶಿಕ್‌ ಅವರ ಬಳಿಕ ಜಿಎಂ ಪಟ್ಟ ಪಡೆದ ಕರ್ನಾಟಕದ ನಾಲ್ಕನೇ ಚೆಸ್‌ ಆಟಗಾರ ಎಂಬ ಗೌರವ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.