ADVERTISEMENT

ಚೆಸ್‌: ಪ್ರಶಸ್ತಿಯತ್ತ ಲಿಸೆಂಕೊ ಲುಬೊವ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 22:48 IST
Last Updated 3 ಅಕ್ಟೋಬರ್ 2024, 22:48 IST
ಗ್ರಾಡಿಸೆಕ್‌ ಬೊರ್
ಗ್ರಾಡಿಸೆಕ್‌ ಬೊರ್   

ಬೆಂಗಳೂರು: ಭಾರತದ ಮೇಘಾ ಚಕ್ರವರ್ತಿ ವಿರುದ್ಧ 52 ನಡೆಗಳಲ್ಲಿ ಜಯಗಳಿಸಿದ ಅಗ್ರ ಶ್ರೇಯಾಂಕದ ಝಿಲ್ಟ್‌ಝೊವಾ ಲಿಸೆಂಕೊ ಲುಬೊವ್ ಅವರು 12ನೇ ಐಬಿಸಿಎ ಮಹಿಳಾ ವಿಶ್ವ ಚಾಂಪಿಯನ್‌ಷಿಪ್‌ನ ಚೆಸ್‌ ಟೂರ್ನಿಯ ಆರನೇ ಸುತ್ತಿನ ನಂತರ ಗರಿಷ್ಠ ಆರು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಪೋಲೆಂಡ್‌ನ ಇಗೆಮನ್ ಎಮಿಲಿಯಾ (4.5) ಅವರು ಅಗ್ರಸ್ಥಾನದಲ್ಲಿರುವ ಉಕ್ರೇನ್‌ ಸ್ಪರ್ಧಿಗಿಂತ ಒಂದೂವರೆ ಪಾಯಿಂಟ್‌ನಷ್ಟು ಹಿಂದೆಯಿದ್ದಾರೆ. ಹೀಗಾಗಿ ಲುಬೊವ್ ಈ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಯೊಂದಿಗೆ ತಮ್ಮ ದಶಕದ ಪಾರಮ್ಯ ಮುಂದುವರಿಸುವುದು ಬಹುತೇಕ ಖಚಿತವಾಗಿದೆ. ಗುರುವಾರ ನಡೆದ ಪಂದ್ಯದಲ್ಲಿ ಬಿಳಿ ಕಾಯಿಗಳಲ್ಲಿ ಆಡಿದ ಇಗೆಮನ್, ಅಮೆರಿಕದ ಟ್ರಿಯಾನ್‌ಸ್ಕಾ ಎಮಿಲಿಯಾ ವಿರುದ್ಧ ಜಯಗಳಿಸಿದರು. 19ನೇ ನಡೆಯಲ್ಲಿ ದೊಡ್ಡ ತಪ್ಪೆಸಗಿದ ಟ್ರಿಯಾನ್‌ಸ್ಕಾ ಆಟ ಮುಂದುವರಿಸಿದರೂ, 38ನೇ ನಡೆಯಲ್ಲಿ ಸೋಲೊಪ್ಪಿಕೊಂಡರು.

ಮೂರು ಮಂದಿ ಆಟಗಾರ್ತಿಯರು– ಟ್ರಿಯಾನ್‌ಸ್ಕಾ, ಬೊಂದರ್ ಒಲೆನಾ (ಉಕ್ರೇನ್‌) ಮತ್ತು ಅಮೆರಿಕದ ಲೌಸರ್ ಜೆಸಿಕಾ ತಲಾ ನಾಲ್ಕು ಪಾಯಿಂಟ್‌ಗಳೊಡನೆ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.

ADVERTISEMENT

ಜೂನಿಯರ್ (ಓಪನ್) ವಿಭಾಗದಲ್ಲಿ ಭಾಗವಹಿಸಿರುವ ಏಕೈಕ ಆಟಗಾರ್ತಿ ಸಾಲೊಮನ್ ಜೂಲಿಯಾ  (ಪೋಲೆಂಡ್‌) (5 ಪಾಯಿಂಟ್‌) ಅಗ್ರಸ್ಥಾನದಲ್ಲಿದ್ದಾರೆ. ಹಾಲಿ ಚಾಂಪಿಯನ್, ಪೋಲೆಂಡ್‌ನ ರೇಸಿಸ್‌ ಮೈಕೆಲ್ (4.5) ಎರಡನೇ ಸ್ಥಾನದಲ್ಲಿದ್ದಾರೆ. ಮೈಕೆಲ್ ಜೊತೆ ಡ್ರಾ ಮಾಡಿಕೊಂಡ ಸ್ಲೊವೇನಿಯಾದ ಗ್ರಾಡಿಸೆಕ್‌ ಬೊರ್ ಮತ್ತು ಕಜಕಸ್ತಾನದ ಕುವಾನ್ಶುಲಿ ನುರ್ಗಿಸ (ತಲಾ 4) ಮೂರನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.