ADVERTISEMENT

ಚೆಸ್ ಒಲಿಂಪಿಯಾಡ್‌: ಭಾರತಕ್ಕೆ ಮಣಿದ ಅಜರ್‌ಬೈಜಾನ್

ಮಹಿಳಾ ತಂಡಕ್ಕೆ ಕಜಕಸ್ತಾನ ಮೇಲೆ ಜಯ

ಪಿಟಿಐ
Published 16 ಸೆಪ್ಟೆಂಬರ್ 2024, 13:17 IST
Last Updated 16 ಸೆಪ್ಟೆಂಬರ್ 2024, 13:17 IST
<div class="paragraphs"><p>ವಿದಿತ್ ಎಸ್.ಗುಜರಾತಿ, ಐದನೇ ಸುತ್ತಿನಲ್ಲಿ ಅಜರ್‌ಬೈಜಾನ್‌ನ ಶಖ್ರಿಯಾರ್ ಮೆಮೆಡ್ಯೆರೋವ್ ಜೊತೆ ಆಡಿದರು. </p></div>

ವಿದಿತ್ ಎಸ್.ಗುಜರಾತಿ, ಐದನೇ ಸುತ್ತಿನಲ್ಲಿ ಅಜರ್‌ಬೈಜಾನ್‌ನ ಶಖ್ರಿಯಾರ್ ಮೆಮೆಡ್ಯೆರೋವ್ ಜೊತೆ ಆಡಿದರು.

   

ಚಿತ್ರಕೃಪೆ: ಫಿಡೆ ವೆಬ್‌ಸೈಟ್‌

ಬುಡಾಪೆಸ್ಟ್‌: ಅಮೋಘ ಲಯದಲ್ಲಿರುವ ಡಿ.ಗುಕೇಶ್ ಮತ್ತು ಅರ್ಜುನ್ ಎರಿಗೈಸಿ ಅವರ ನೆರವಿನಿಂದ ಅಮೋಘ ಆಟದಿಂದ ಭಾರತ ತಂಡ 45ನೇ ಚೆಸ್‌ ಒಲಿಂಪಿಯಾಡ್‌ನ ಓಪನ್ ವಿಭಾಗದ ಐದನೇ ಸುತ್ತಿನಲ್ಲಿ 3–1 ರಿಂದ 11ನೇ ಶ್ರೇಯಾಂಕದ ಅಜರ್‌ಬೈಜಾನ್ ತಂಡವನ್ನು ಸೋಲಿಸಿತು.

ADVERTISEMENT

ಹಾಲಿ ಒಲಿಂಪಿಯಾಡ್‌ನಲ್ಲಿ ಇವರಿಬ್ಬರ ನಿಷ್ಕಳಂಕ ಆಟ ಗಮನಸೆಳೆದಿದೆ. ವಿಶ್ವ ಚಾಂಪಿಯನ್ ಪಟ್ಟದ ಚಾಲೆಂಜರ್ ಆಗಿರುವ ಗುಕೇಶ್, ಏಯ್ದಿನ್ ಸುಲೇಮಾನ್ಲಿ ಅವರನ್ನು ಸೋಲಿಸಿದರೆ, ಅರ್ಜುನ್ ಅವರು ರವೂಫ್‌ ಮೆಮೆಡೊವ್ ಮೇಲೆ ಗೆಲುವನ್ನು ಸಾಧಿಸಿದರು. ಇಬ್ಬರೂ ಬಿಳಿ ಕಾಯಿಗಳಲ್ಲಿ ಆಡುವ ಅವಕಾಶ ಪಡೆದಿದ್ದರು.

ಪ್ರಜ್ಞಾನಂದ ರಮೇಶಬಾಬು ಅವರು ಎರಡನೇ ಬೋರ್ಡ್‌ನಲ್ಲಿ ಪ್ರಬಲ ಆಟಗಾರ ನಿಜತ್ ಅಬಸೋವ್ ವಿರುದ್ಧ ಡ್ರಾ ಮಾಡಿಕೊಂಡು ಭಾರತದ ಗೆಲುವನ್ನು ಖಚಿತಪಡಿಸಿದರು. ವಿದಿತ್ ಎಸ್.ಗುಜರಾತಿ ಕೂಡ ಶಖ್ರಿಯಾರ್ ಮೆಮೆಡ್ಯೆರೋವ್ ಜೊತೆ ಸುದೀರ್ಘ ಆಟದ ನಂತರ ಪಾಯಿಂಟ್ ಹಂಚಿಕೊಂಡರು.

ಭಾರತ ಪುರುಷರ ತಂಡ ಸತತ ಐದನೇ ಗೆಲುವಿನೊಡನೆ ವಿಯೆಟ್ನಾಂ, ಚೀನಾ, ಹಂಗರಿ ಜೊತೆ ಅಗ್ರಸ್ಥಾನವನ್ನು ಹಂಚಿಕೊಂಡಿದೆ. ಸ್ಫೂರ್ತಿಯುತ ಆಟವಾಡುತ್ತಿರುವ ವಿಯೆಟ್ನಾಂ ಐದನೇ ಸುತ್ತಿನಲ್ಲಿ ಪೋಲೆಂಡ್ ತಂಡವನ್ನು 2.5–1.5 ರಿಂದ ಮಣಿಸಿತು.

ಚೀನಾ ಮತ್ತು ಹಂಗರಿ ತಂಡಗಳು ಕ್ರಮವಾಗಿ ಸ್ಪೇನ್ ಮತ್ತು ಉಕ್ರೇನ್ ತಂಡಗಳನ್ನು 2.5–1.5 ಸಮಾನ ಅಂತರದಿಂದ ಸೋಲಿಸಿದವು.

ಇನ್ನು ಆರು ಸುತ್ತಿನ ಪಂದ್ಯಗಳು ಉಳಿದಿವೆ.

ಮಹಿಳಾ ತಂಡಕ್ಕೂ ಜಯ:

ಅಗ್ರ ಶ್ರೇಯಾಂಕದ ಪಡೆದಿರುವ ಭಾರತ ಮಹಿಳೆಯರ ತಂಡ, ಕಜಕಸ್ತಾನ ವಿರುದ್ಧ 2.5–1.5 ರಿಂದ ಜಯಪಡೆಯಿತು.

ಹಾರಿಕಾ ಅವರು ಮೊದಲ ಬೋರ್ಡ್‌ನಲ್ಲಿ ಬಿಬಿಸಾರಾ ಅಸೌಬಯೇವಾ ಅವರೆದುರು ಆಘಾತ ಅನುಭವಿಸಿದರು. ಹೆಚ್ಚಿನ ಅವಧಿಯಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಹಾರಿಕಾ, ಇದಕ್ಕಿದ್ದ ಹಾಗೆ ಮಾಡಿದ ಸಣ್ಣಲೋಪ ಪಂದ್ಯ ಸೋಲುವಂತೆ ಮಾಡಿ ಕಜಕಸ್ಥಾನಕ್ಕೆ ಮುನ್ನಡೆಯಾಯಿತು.

ನಾಲ್ಕನೇ ಬೋರ್ಡ್‌ನಲ್ಲಿ ವಂತಿಕಾ ಅಗರವಾಲ್ ಬಿಳಿ ಕಾಯಿಗಳಲ್ಲಿ ಆಡಿ ಅಲುವಾ ನೂರ್ಮನ್ ವಿರುದ್ಧ ಜಯಗಳಿಸಿದರು. ಕ್ಸೆನಿವಾ ಬಲಬಯೇವಾ ಇನ್ನೊಂದು ಪಂದ್ಯದಲ್ಲಿ ದಿವ್ಯಾ ದೇಶಮುಖ್ ಜೊತೆ ಪಾಯಿಂಟ್ ಹಂಚಿಕೊಂಡರು.

ಪಂದ್ಯ 2–2 ಸಮನಾಗಿದ್ದ ಈ ಹಂತದಲ್ಲಿ ವೈಶಾಲಿ ಅವರು ಮಿರುಯರ್ಟ್‌ ಕಮಲಿದೆನೊವಾ ಎದುರು ಜಯಗಳಿಸಿದ್ದು, ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿತು.

ಭಾರತ, ಅರ್ಮೇನಿಯಾ ಮತ್ತು ಮಂಗೋಲಿಯಾ ತಲಾ 10 ಪಾಯಿಟ್ಸ್‌ ಸಂಗ್ರಹಿಸಿ ಅಗ್ರಸ್ಥಾನ ಹಂಚಿಕೊಂಡಿವೆ. ಅರ್ಮೇನಿಯಾ 2.5–1.5 ರಿಂದ ಚೀನಾ ವನಿತೆಯರ ತಂಡ ಸೋಲಿಸಿತು. ಮಂಗೋಲಿಯಾ ಇದೇ ಅಂತರದಿಂದ ಅಮೆರಿಕ ಮೇಲೆ ಜಯ ಪಡೆಯಿತು.

ಜಾರ್ಜಿಯಾ ಮತ್ತು ಪೋಲೆಂಡ್‌ 9.5 ಅಂಕ ಸಂಗ್ರಹಿಸಿ ಎರಡನೇ ಸ್ಥಾನದಲ್ಲಿವೆ. ಭಾರತ ಮುಂದಿನ ಪಂದ್ಯದಲ್ಲಿ ಅರ್ಮೇನಿಯಾ ತಂಡವನ್ನು ಎದುರಿಸಲಿದೆ.

ಅರ್ಜುನ್ ಸಾಧನೆ

ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಅರ್ಜುನ್ ಇರಿಗೇಶಿ ಅವರು ಭಾರತದ ಪರ ಐದೂ ಪಂದ್ಯಗಳಲ್ಲಿ ಆಡಿ ಜಯ ಸಾಧಿಸಿದ್ದಾರೆ.

ಅರ್ಜುನ್‌ ಪ್ರಸ್ತುತ 2788ರ ಲೈವ್‌ ರೇಟಿಂಗ್ ಹೊಂದಿದ್ದು, 2800ರ ಮೈಲಿಗಲ್ಲು ತಲುಪಲು ಕೇವಲ 12 ಪಾಯಿಂಟ್ಸ್‌ ದೂರವಿದ್ದಾರೆ. ಭಾರತದ ಚೆಸ್‌ನಲ್ಲಿ ವಿಶ್ವನಾಥನ್ ಆನಂದ್ ಮಾತ್ರ ಈ ಎತ್ತರಕ್ಕೆ ಏರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.