ಬುಡಾಪೆಸ್ಟ್ (ಹಂಗೆರಿ): ಮೊದಲ ಎರಡು ಪಂದ್ಯಗಳನ್ನು 4–0 ಅಂತರದಿಂದ ಗೆದ್ದಿದ್ದ ಭಾರತ ತಂಡ, 45ನೇ ಚೆಸ್ ಒಲಿಂಪಿಯಾಡ್‌ನ ಒಪನ್ ವಿಭಾಗದ ಮೂರನೇ ಸುತ್ತಿನಲ್ಲಿ ಶುಕ್ರವಾರ ಹಂಗೆರಿ ‘ಬಿ’ ತಂಡದ ಎದುರು ಗೆಲ್ಲುವ ಮೊದಲು ಅರ್ಧ ಪಾಯಿಂಟ್ ಕಳೆದುಕೊಂಡಿತು.
ಅರ್ಜುನ್ ಇರಿಗೇಶಿ ಅವರು ಪೀಟರ್ ಪ್ರೊಹಝ್ಸ್ಕಾ ವಿರುದ್ಧ ಆಕ್ರಮಣಕಾರಿಯಾಗಿ ಆಡಿ, ಕ್ವೀನ್ ಬಲಿಗೊಟ್ಟು ನಂತರ ‘ಚೆಕ್‌ಮೇಟ್’ ಮಾಡಿ ಭಾರತದ ಗೆಲುವಿನಲ್ಲಿ ಗಮನ ಸೆಳೆದರು.
ವಿದಿತ್ ಗುಜರಾತಿ, ಪಾಪ್ ಗ್ಯಾಬೊರ್ ಎದುರು ‘ಡ್ರಾ’ಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು. ಆದರೆ ಇನ್ನಿಬ್ಬರು ಆಟಗಾರರು– ಡಿ.ಗುಕೇಶ್ ಮತ್ತು ಆರ್.ಪ್ರಜ್ಞಾನಂದ ಕ್ರಮವಾಗಿ ಆ್ಯಡಂ ಕೊಝಾಕ್ ಮತ್ತು ಥಾಮಸ್ ಬನುಝ್ ಅವರನ್ನು ಸೋಲಿಸಿ ಭಾರತದ ಯಶಸ್ಸಿನ ಓಟ ಮುಂದುವರಿಸಿದರು.
ಮಹಿಳೆಯರ ವಿಭಾಗದಲ್ಲಿ ಮೊದಲ ಬೋರ್ಡ್‌ನಲ್ಲಿ ಡಿ.ಹಾರಿಕ ಅವರು ಆಘಾತಕಾರಿ ಸೋಲನುಭವಿಸಿದರು ಭಾರತ 3–1 ರಿಂದ ಸ್ವಿಜರ್ಲೆಂಡ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು.
ಇತ್ತೀಚೆಗಷ್ಟೇ ರಷ್ಯಾದ ಪೌರತ್ವ ತ್ಯಜಿಸಿ ಸ್ವಿಜರ್ಲೆಂಡ್‌ಗೆ ವಲಸೆಹೋಗಿ ಇತ್ತೀಚೆಗೆ ಅಲ್ಲಿನ ತಂಡ ಸೇರಿಕೊಂಡಿರುವ ಅಲೆಕ್ಸಾಂಡ್ರಾ ಕೊಸ್ಟೆನಿಯುಕ್ ಅವರು ಹಾರಿಕಾ ಅವರನ್ನು ಸೋಲಿಸಿದರು. ಅವರು ಮಹಿಳೆಯರ ವಿಭಾಗದ ಮಾಜಿ ವಿಶ್ವ ಚಾಂಪಿಯನ್ ಕೂಡ. ಮಧ್ಯಮ ಹಂತದ ಆಟದಲ್ಲಿ ಹಾರಿಕಾ ಅವರು ಲಯತಪ್ಪಿದರು.
ಆದರೆ ವೈಶಾಲಿ, ಎದುರಾಳಿ ಘಝಲ್ ಹಕಿಮಿಫರ್ದ್ ಅವರಿಗೆ ಮೇಲುಗೈಗೆ ಅವಕಾಶ ನೀಡದೇ ಗೆಲುವು ಪಡೆದರು. ಹಕಿಮಿಫರ್ದ್, ಇರಾನ್ ಪೌರತ್ವ ತೊರೆದು ಇತ್ತೀಚೆಗೆ ಸ್ವಿಜರ್ಲೆಂಡ್‌ನಲ್ಲಿ ನೆಲೆಕಂಡುಕೊಂಡಿದ್ದಾರೆ. ವಿಶ್ವ ಜೂನಿಯರ್ ಚಾಂಪಿಯನ್ ದಿವ್ಯಾ ದೇಶಮುಖ್ ಮತ್ತು ನಾಲ್ಕನೇ ಬೋರ್ಡ್‌ನಲ್ಲಿ ವಂತಿಕಾ ಅಗರವಾಲ್ ತಮ್ಮ ಎದುರಾಳಿಗಳನ್ನು ಸೋಲಿಸಿದರು.
ಓಪನ್ ವಿಭಾಗದ ಅನಿರೀಕ್ಷಿತ ಫಲಿತಾಂಶವೊಂದರಲ್ಲಿ ಇಟಲಿ 3–1 ರಿಂದ ಐದನೇ ಶ್ರೇಯಾಂಕದ ಹಾಲೆಂಡ್‌ಗೆ ಅನಿರೀಕ್ಷಿತ ಆಘಾತ ನೀಡಿದರು. ಡಚ್ ತಂಡದ ಅಗ್ರ ಆಟಗಾರ ಅನಿಶ್ ಗಿರಿ ಸೋಲನುಭವಿಸಿದ್ದು ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು.
ಓಪನ್ ವಿಭಾಗದಲ್ಲಿ 16 ತಂಡಗಳು ತಲಾ ಆರು ಪಾಯಿಂಟ್‌ಗಳೊಡನೆ ಮುನ್ನಡೆ ಹಂಚಿಕೊಂಡಿವೆ. ಮಹಿಳಾ ವಿಭಾಗದಲ್ಲಿ ಕೂಡ ಇಷ್ಟೇ ತಂಡಗಳು ಮುನ್ನಡೆ ಹಂಚಿಕೊಂಡಿವೆ.
ಎರಡನೇ ಶ್ರೇಯಾಂಕದ ಭಾರತ ತಂಡ ನಾಲ್ಕನೇ ಸುತ್ತಿನಲ್ಲಿ ಸರ್ಬಿಯಾ ವಿರುದ್ಧ ಆಡಲಿದೆ. ವನಿತೆಯರ ತಂಡ ಫ್ರಾನ್ಸ್ ತಂಡವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.