ಮಿಯಾಮಿ (ಪಿಟಿಐ): ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಗ್ನಾನಂದ ಅವರು ಸೋಮವಾರ ಇಲ್ಲಿ ಕೊನೆಗೊಂಡ ಎಫ್‌ಟಿಎಕ್ಸ್ ಕ್ರಿಪ್ಟೊ ಕಪ್ ಚೆಸ್ ಟೂರ್ನಿಯ ಕೊನೆಯ ಸುತ್ತಿನಲ್ಲಿ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ 4–2 ರಲ್ಲಿ ಗೆದ್ದರು.
ಆದರೆ ವಿಶ್ವದ ಅಗ್ರ ರ‍್ಯಾಂಕ್‌ನ ಆಟಗಾರನ ಎದುರು ಜಯಿಸಿದರೂ ಅವರು ‘ರನ್ನರ್ಸ್ ಅಪ್’ ಆದರು. ನಾರ್ವೆಯ ಕಾರ್ಲ್‌ಸನ್ ಚಾಂಪಿಯನ್ ಆದರು. ಏಳು ಸುತ್ತುಗಳಲ್ಲಿ ಕಾರ್ಲ್‌ಸನ್ ಒಟ್ಟು 16 ಪಾಯಿಂಟ್ಸ್ ಕಲೆಹಾಕಿದರೆ, ಪ್ರಗ್ನಾನಂದ 15 ಪಾಯಿಂಟ್ಸ್ ಗಳಿಸಿದರು.
ಇರಾನ್ ಮೂಲದ ಫ್ರಾನ್ಸ್‌ನ ಆಟಗಾರ ಅಲಿರೆಜಾ ಫಿರೊಜಾ ಅವರೂ 15 ಪಾಯಿಂಟ್ಸ್ ಕಲೆಹಾಕಿದರು. ಆದರೆ ಅವರು ಪ್ರಗ್ನಾನಂದ ಎದುರು ಸೋತಿದ್ದರಿಂದ ಮೂರನೇ ಸ್ಥಾನ ಪಡೆದರು.
ಪ್ರಗ್ನಾನಂದ ಮತ್ತು ಕಾರ್ಲ್‌ಸನ್ ನಡುವಿನ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿತ್ತು. ನಾಲ್ಕು ಸುತ್ತುಗಳ ಹಣಾಹಣಿಯ ಮೊದಲ ಎರಡು ಗೇಮ್‌ಗಳನ್ನು ಇಬ್ಬರೂ ಡ್ರಾ ಮಾಡಿಕೊಂಡರು.
ಮೂರನೇ ಗೇಮ್ ಗೆದ್ದ ಕಾರ್ಲ್‌ಸನ್ 2–1 ಮುನ್ನಡೆ ಪಡೆದರು. ಆದರೆ ನಾಲ್ಕನೇ ಗೇಮ್ ಜಯಿಸಿದ ಪ್ರಗ್ನಾನಂದ 2–2 ರಲ್ಲಿ ಸಮಬಲ ಮಾಡಿಕೊಂಡರು. ಇದರಿಂದ ವಿಜೇತರನ್ನು ನಿರ್ಣಯಿಸಲು ಟೈಬ್ರೇಕರ್ ಮೊರೆ ಹೋಗಲಾಯಿತು. ಟೈಬ್ರೇಕರ್‌ನ ಎರಡೂ ಗೇಮ್‌ಗಳಲ್ಲಿ ಎದುರಾಳಿಗೆ ಆಘಾತ ನೀಡಿದ ಪ್ರಗ್ನಾನಂದ, ಅಚ್ಚರಿಯ ಗೆಲುವು ಸಾಧಿಸಿದರು.
ಕೊನೆಯ ಸುತ್ತಿನ ಇತರ ಪಂದ್ಯಗಳಲ್ಲಿ ಫಿರೊಜಾ 2.5–1.5 ರಲ್ಲಿ ಲೆವೊನ್ ಅರೋನಿಯನ್ ವಿರುದ್ಧ ಗೆದ್ದರು. ಕುವಾಂಗ್ ಲಿಯೆಮ್ ಲಿ ಅವರು ಹ್ಯಾನ್ಸ್ ನೀಮನ್ ವಿರುದ್ಧ; ಜಾನ್ ಕ್ರಿಸ್ಟೊಫ್ ಡುಡಾ ಅವರು ಅನೀಶ್ ಗಿರಿ ವಿರುದ್ಧ ಜಯಿಸಿದರು.
ಅಂತಿಮ ಸ್ಥಾನ:1.ಮ್ಯಾಗ್ನಸ್ ಕಾರ್ಲ್‌ಸನ್ (16 ಮ್ಯಾಚ್ ಪಾಯಿಂಟ್ಸ್), 2.ಆರ್.ಪ್ರಗ್ನಾನಂದ (15), 3.ಅಲಿರೆಜಾ ಫಿರೊಜಾ (15), 4.ಕುವಾಂಗ್ ಲಿಯೆಮ್ ಲಿ (12), 5.ಜಾನ್ ಕ್ರಿಸ್ಟೊಫ್ ಡುಡಾ (11), 6.ಲೆವೊನ್ ಅರೋನಿಯನ್ (8), 7.ಅನೀಶ್ ಗಿರಿ, 8.ಹ್ಯಾನ್ಸ್ ನೀಮೆನ್ (0)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.