ADVERTISEMENT

ಚೀನಾ ಮಾಸ್ಟರ್ಸ್‌ ಟೂರ್ನಿ: ಸಾತ್ವಿಕ್‌, ಚಿರಾಗ್ ಮೇಲೆ ನಿರೀಕ್ಷೆ

ಪಿಟಿಐ
Published 18 ನವೆಂಬರ್ 2024, 16:16 IST
Last Updated 18 ನವೆಂಬರ್ 2024, 16:16 IST
<div class="paragraphs"><p>ಸಾತ್ವಿಕ್‌, ಚಿರಾಗ್</p></div>

ಸಾತ್ವಿಕ್‌, ಚಿರಾಗ್

   

ಶೆನ್‌ಜೆನ್‌ (ಚೀನಾ): ಭಾರತದ ಡಬಲ್ಸ್‌ ಜೋಡಿ ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ನಿರೀಕ್ಷೆಗಳೊಂದಿಗೆ ಮತ್ತೆ ಅಂಗಳಕ್ಕೆ ಮರಳಿದ್ದು ಮಂಗಳವಾರ ಆರಂಭವಾಗಲಿರುವ ಚೀನಾ ಮಾಸ್ಟರ್ಸ್‌ ಸೂಪರ್ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡೆಗಳಲ್ಲಿ ನಿರಾಶಾದಾಯಕ ಪ್ರದರ್ಶನ ನಂತರ ವಿಶ್ವದ ಮಾಜಿ ಅಗ್ರಮಾನ್ಯ ಜೋಡಿ ಸ್ಪರ್ಧಾತ್ಮಕ ಕ್ರೀಡೆಯಿಂದ ಕೆಲ ತಿಂಗಳು ದೂರ ಉಳಿದಿತ್ತು. 

ADVERTISEMENT

ಈ ಸಮಯದಲ್ಲಿ ಆರ್ಕ್ಟಿಕ್‌ ಓಪನ್‌, ಡೆನ್ಮಾರ್ಕ್‌ ಓಪನ್‌ ಮತ್ತು ಚೀನಾ ಓಪನ್‌ ಟೂರ್ನಿಗಳಲ್ಲಿ ಭಾರತದ ಜೋಡಿ ಆಡಿರಲಿಲ್ಲ. ಮಥಿಯಾಸ್‌ ಬೋ ಕೋಚ್‌ ಹುದ್ದೆ ತೊರೆದಿರುವುದರಿಂದ ಅವರ ಅನುಪಸ್ಥಿತಿಯಲ್ಲಿ ಸಾತ್ವಿಕ್‌ ಮತ್ತು ಚಿರಾಗ್‌ ಆಡಬೇಕಾಗಿದೆ.

ಕಳೆದ ವರ್ಷದ ಚೀನಾ ಮಾಸ್ಟರ್ಸ್‌ನಲ್ಲಿ ಭಾರತದ ಜೋಡಿ ರನ್ನರ್‌ಅಪ್‌ ಆಗಿತ್ತು. ಈ ಬಾರಿ ಮೊದಲ ಸುತ್ತಿನಲ್ಲಿ ಚೀನಾ ತೈಪೆಯ ಯಾಂಗ್‌ ಪೊ–ಹ್ಸುವಾನ್‌ ಮತ್ತು ಲೀ ಝೆ-ಹುಯಿ ಜೋಡಿಯನ್ನು ಎದುರಿಸಲಿದೆ.  

ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಮತ್ತು ಲಕ್ಷ್ಯ ಸೇನ್‌ ವೈಫಲ್ಯದಿಂದ ಹೊರಬರಬೇಕಿದ್ದು ಸುಧಾರಿತ ಪ್ರದರ್ಶನ ನೀಡಬೇಕಿದೆ. ಪ್ಯಾರಿಸ್‌ ಒಲಿಂಪಿಕ್ಸ್‌ ನಂತರ ಈ ಇಬ್ಬರು ಆಟಗಾರರು ಲಯಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌ನ ಸೆಮಿಫೈನಲ್‌ನಲ್ಲಿ ಸೋತ ನಂತರ ಲಕ್ಷ್ಯ ಅವರು ಆರ್ಕ್ಟಿಕ್‌ ಓಪನ್‌ ಸೂಪರ್‌ 500 ಮತ್ತು ಡೆನ್ಮಾರ್ಕ್‌ ಓಪನ್‌ ಮತ್ತು ಕಳೆದ ವಾರ ಕುಮಾಮೊಟೊ ಮಾಸ್ಟರ್ಸ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು.  

ಲಕ್ಷ್ಯಸೇನ್‌ ಏಳನೇ ಶ್ರೇಯಾಂಕಿತ ಆಟಗಾರ ಮಲೇಷ್ಯಾದ ಲೀ ಜೀ ಜಿಯಾ ವಿರುದ್ಧ ಮೊದಲ ಸವಾಲು ಎದುರಿಸಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.