ಶೆನ್‌ಝೆನ್ : ಭಾರತದ ಆಟಗಾರ ಎಚ್.ಎಸ್. ಪ್ರಣಯ್, ಮಂಗಳವಾರ ಆರಂಭವಾದ ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಂಗಳವಾರ ಚೀನಾ ತೈಪೆಯ ಚೌ ತಿಯೆನ್ ಚೆನ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಎರಡನೇ ಸುತ್ತಿಗೆ ಮುನ್ನಡೆದರು.
ಬೆನ್ನು ನೋವಿನಿಂದ ಕೆಲವು ಟೂರ್ನಿಗಳನ್ನು ಕಳೆದುಕೊಂಡಿದ್ದ, 31 ವರ್ಷದ ಪ್ರಣಯ್ ಮೊದಲ ಸುತ್ತಿನಲ್ಲಿ 21–18, 22–20 ರಿಂದ ವಿಶ್ವ ಕ್ರಮಾಂಕದಲ್ಲಿ 12ನೇ ಸ್ಥಾನದಲ್ಲಿರುವ ಚೆನ್ ಅವರನ್ನು ಸೋಲಿಸಿದರು. ಆ ಮೂಲಕ ಕಳೆದ ವಾರ ಜಪಾನ್‌ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡರು.
ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ಆಟಗಾರ, ಎರಡನೇ ಸುತ್ತಿನಲ್ಲಿ ಹಾಂಗ್‌ಕಾಂಗ್‌ನ ಲೀ ಚುಕ್ ಯಿಯು ಮತ್ತು ಡೆನ್ಮಾರ್ಕ್‌ನ ಮ್ಯಾಗ್ನಸ್ ಜೊಹಾನ್ಸೆನ್ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.
ಪುರುಷರ ಡಬಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಜೋಡಿ 21–13, 21–10 ರಿಂದ ಇಂಗ್ಲೆಂಡ್‌ನ ಬೆನ್ ಲೇನ್– ಸೀನ್ ವೆಂಡಿ ಅವರನ್ನು ಸೋಲಿಸಿ ಶುಭಾರಂಭ ಮಾಡಿತು. ಸಾತ್ವಿಕ್– ಚಿರಾಗ್ ಜೋಡಿ ಏಷ್ಯನ್ ಕ್ರೀಡಾಕೂಟದ ಚಾಂಪಿಯನ್ ಆಗಿದೆ. ಭಾರತದ ಆಟಗಾರರು ಮುಂದಿನ ಸುತ್ತಿನಲ್ಲಿ ಜಪಾನ್‌ನ ಅಕಿರಾ ಕೊಗಾ–ತೈಚಿ ಸೈಟೊ ಜೋಡಿಯನ್ನು ಎದುರಿಸಲಿದ್ದಾರೆ.
ಮಹಿಳಾ ವಿಭಾಗದಲ್ಲಿರುವ ಭಾರತದ ಏಕೈಕ ಆಟಗಾರ್ತಿ ಆಕರ್ಷಿ ಕಶ್ಯಪ್ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಚೀನಾದ ಝಾಂಗ್ ಯಿ ಮನ್ ಅವರು ಕೇವಲ 33 ನಿಮಿಷಗಳಲ್ಲಿ 21–12, 21–14 ರಿಂದ ಆಕರ್ಷಿ ಅವರನ್ನು ಮಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.