ಶೆನ್‌ಜೆನ್: ಏಷ್ಯನ್ ಗೇಮ್ಸ್ ಚಾಂಪಿಯನ್ನರಾದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ನೇರ ಸೆಟ್‌ಗಳಿಂದ ಇಂಡೊನೇಷ್ಯಾದ ಲಿಯೊ ರೋಲಿ ಕರ್ನಾಂಡೊ ಮತ್ತು ಡೇನಿಯಲ್ ಮಾರ್ಟಿನ್ ಅವರನ್ನು ಸೋಲಿಸಿ ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಡಬಲ್ಸ್ ಸೆಮಿಫೈನಲ್ ತಲುಪಿತು.
ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಸಾತ್ವಿಕ್– ಚಿರಾಗ್ ಜೋಡಿ 21–16, 21–14 ರಿಂದ ಕರ್ನಾಂಡೊ– ಮಾರ್ಟಿನ್ ಜೋಡಿಯನ್ನು ಸೋಲಿಸಿತು. ಭಾರತದ ಆಟಗಾರರು, ವಿಶ್ವ ಕ್ರಮಾಂಕದಲ್ಲಿ 13ನೇ ಸ್ಥಾನದಲ್ಲಿರುವ ಇಂಡೊನೇಷ್ಯಾ ಜೋಡಿಯನ್ನು ಮಣಿಸಲು 46 ನಿಮಿಷ ತೆಗೆದುಕೊಂಡರು.
ವಿಶ್ವ ಕ್ರಮಾಂಕದಲ್ಲಿ ಐದನೇ ಸ್ಥಾನದಲ್ಲಿರುವ ಭಾರತದ ಆಟಗಾರರು ಶನಿವಾರ ಸೆಮಿಫೈನಲ್‌ನಲ್ಲಿ ಚೀನಾದ ಹಿ ಜಿ ಟಿಂಗ್ ಮತ್ತು ರೆನ್ ಷಿಯಾಂಗ್ ಯು ಜೋಡಿಯನ್ನು ಎದುರಿಸಲಿದ್ದಾರೆ. ಎಂಟರ ಘಟ್ಟದ ಪಂದ್ಯದಲ್ಲಿ ಟಿಂಗ್– ರೆನ್ ಜೋಡಿ 21–15, 21–15 ರಿಂದ ಸ್ವದೇಶದ ಲಿಯು ಯು ಚೆನ್– ಉಕ್ಸುವಾನ್ ಯಿ ಜೋಡಿಯನ್ನು ನೇರ ಗೇಮ್‌ಗಳಿಂದ ಸೋಲಿಸಿತು. ಯು ಚೆನ್– ಉಕ್ಸುವಾನ್ ಇಲ್ಲಿ ಎಂಟನೇ ಶ್ರೇಯಾಂಕ ಪಡೆದಿದ್ದರು.
ಭಾರತದ ಜೋಡಿ ಈ ವರ್ಷ ಇಂಡೊನೇಷ್ಯಾ ಸೂಪರ್ 1000, ಕೊರಿಯಾ ಸೂಪರ್ 500 ಮತ್ತು ಸ್ವಿಸ್ ಸೂಪರ್ 300 ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ ನಂತರ ಕೆಲವು ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿರಲಿಲ್ಲ.
ಸಾತ್ವಿಕ್– ಚಿರಾಗ್ ಉತ್ತಮ ಹೊಂದಾಣಿಕೆಯಿಂದ ಆಡಿದರು. ಪದೇ ಪದೇ ಅಂಕಣದೊಳಗೆ ತಮ್ಮ ಸ್ಥಾನಗಳನ್ನು ಬದಲಾಯಿಸುತ್ತ ಹೋದರು. ಹೀಗಾಗಿ ಇಂಡೊನೇಷ್ಯಾ ಆಟಗಾರರು ಒತ್ತಡಕ್ಕೆ ಸಿಲುಕಿದರು. ಭಾರತದ ಆಟಗಾರರ ಆಕ್ರಮಣದ ಆಟಕ್ಕೆ ತಕ್ಕ ಉತ್ತರ ನೀಡಲು ಸಾಧ್ಯವಾಗಲಿಲ್ಲ. ಮೊದಲ ಗೇಮ್‌ನ ಬಹುತೇಕ ಅವಧಿ ಹೋರಾಟದಿಂದ ಕೂಡಿದ್ದು ಒಂದು ಹಂತದಲ್ಲಿ ಸ್ಕೋರ್ 14–14 ಆಗಿತ್ತು. ಆದರೆ ಚಿರಾಗ್ ಅವರ ಜಾಣ್ಮೆಯ ಆಟದಿಂದ ಭಾರತದ ಜೋಡಿ 19–16ರಲ್ಲಿ ಮುನ್ನಡೆಯಿತು. ನಂತರ ಗೇಮ್ ಗೆಲ್ಲುವುದು ಕಷ್ಟವಾಗಲಿಲ್ಲ.
ಎರಡನೇ ಗೇಮ್‌ನಲ್ಲಿ ಭಾರತದ ಆರಂಭದಿಂದಲೇ ಮುನ್ನಡೆ ಪಡೆಯಿತು. ಮೊದಲು 11–6ರಲ್ಲಿ ನಂತರ 17–10ರಲ್ಲಿ ಲೀಡ್ ಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.