ADVERTISEMENT

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಚಿನ್ನ ಗೆದ್ದ ಚಿಕ್ಕೇರ, ಭಾರತಕ್ಕೆ 9 ಪದಕ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 13:28 IST
Last Updated 28 ಅಕ್ಟೋಬರ್ 2024, 13:28 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಟಿರಾನಾ (ಅಲ್ಬೇನಿಯಾ): ಚಿರಾಗ್ ಚಿಕ್ಕೇರ, ವಿಶ್ವ 23 ವರ್ಷದೊಳಗಿನವರ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಮೂರನೇ ಭಾರತೀಯ ಎನಿಸಿದರು. ಭಾರತ ಈ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಒಂದು ಚಿನ್ನ, ಒಂದು ಬೆಳ್ಳಿ ಸೇರಿದಂತೆ 9 ಪದಕಗಳೊಡನೆ ಉತ್ತಮ ಸಾಧನೆಗೆ ಪಾತ್ರವಾಯಿತು.

ಪುರುಷರ 57 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ ಚಿರಾಗ್, ಮುಕ್ತಾಯಕ್ಕೆ ಕೆಲವೇ ಸೆಕೆಂಡುಗಳಿರುವಾಗ ಕಿರ್ಗಿಸ್ತಾನದ ಅಬ್ದಿಮಲಿಕ್ ಕರಾಚೊವ್ ಅವರನ್ನು 4–3 ಅಲ್ಪ ಅಂತರದಿಂದ ಮಣಿಸಿದರು.

ADVERTISEMENT

ಅವರು ಪುರುಷರ ವಿಭಾಗದಲ್ಲಿ ವಿಶ್ವ ಚಾಂಪಿಯನ್ ಆದ ಭಾರತದ ಎರಡನೇ ಪೈಲ್ವಾನ್ ಎನಿಸಿದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಅಮನ್ ಸೆಹ್ರಾವತ್ ಈ ಹಿಂದೆ, 2022ರಲ್ಲಿ 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದರು. ಮಹಿಳೆಯರ ವಿಭಾಗದಲ್ಲಿ ರೀತಿಕಾ ಹೂಡಾ ಹೋದ ವರ್ಷ 76 ಕೆ.ಜಿ. ವಿಭಾಗದಲ್ಲಿ ಸ್ವರ್ಣ ಜಯಿಸಿದ್ದರು.

ಚಿಕ್ಕೇರ ಇದಕ್ಕೆ ಮೊದಲಿನ ಮೂರು ಸೆಣಸಾಟಗಳಲ್ಲಿ ಸುಲಭ ಜಯ ಸಾಧಿಸಿದ್ದರು.  ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ 6–1 ರಿಂದ ಗಾವುಕೊಟೊ ಓಝಾವಾ ಅವರನ್ನು, ಎಂಟರ ಘಟ್ಟದಲ್ಲಿ  ಇನುಸ್‌ ಇವಾಬಟಿರೋವ್ ಅವರನ್ನು ಮತ್ತು ಸೆಮಿಫೈನಲ್‌ನಲ್ಲಿ ಅಲನ್ ಒರಾಲ್ಬೆಕ್ ಅವರನ್ನು 8–0 ಯಿಂದ ಮಣಿಸಿದ್ದರು.

ಒಟ್ಟಾರೆ ಈ ಕೂಟದ ರ‍್ಯಾಂಕಿಂಗ್‌ನಲ್ಲಿ ಭಾರತ 82 ಪಾಯಿಂಟ್ಸ್‌ ಸಂಗ್ರಹಿಸಿ ನಾಲ್ಕನೇ ಸ್ಥಾನ ಗಳಿಸಿತು. ಇರಾನ್ (158), ಜಪಾನ್‌ (102) ಮತ್ತು ಅಜರ್‌ಬೈಜಾನ್ (100) ತಂಡಗಳು ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದವರು.

ಪುರುಷರ ಫ್ರೀಸ್ಟೈಲ್‌ನಲ್ಲಿ ಭಾರತ ಇನ್ನೆರಡು ಕಂಚಿನ ಪದಕ ಗೆದ್ದುಕೊಂಡಿತು. ಪುರುಷರ 97 ಕೆ.ಜಿ. ವಿಭಾಗದಲ್ಲಿ ವಿಕಿ, 20 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನ ಮಾಜಿ ಬೆಳ್ಳಿ ವಿಜೇತ ಇವಾನ್ ಪ್ರಿಮಾಚೆಂಕೊ (ಉಕ್ರೇನ್) ಅವರನ್ನು ಸೋಲಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಇದು ಭಾರತ ಪದಕ ಗೆದ್ದ ಗರಿಷ್ಠ ತೂಕ ವಿಭಾಗ.

70 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಸುಜೀತ್‌ ಕಲ್ಕಲ್ ಅವರಿಗೆ ಸ್ವಲ್ಪದರಲ್ಲೇ ಫೈನಲ್ ಪ್ರವೇಶ ತಪ್ಪಿತು. ಆದರೆ ಕಂಚಿನ ಪದಕಕ್ಕೆ ನಡೆದ ಸ್ಪರ್ಧೆಯಲ್ಲಿ ಅವರು 0–4 ಹಿನ್ನಡೆಯಿಂದ ಚೇತರಿಸಿ 13–4 ರಿಂದ ತಾಜಿಕಿಸ್ತಾನದ ಮುಸ್ತಾಫೊ ಅಖಾಮೆಡೊವ್ ಅವರನ್ನು ಮಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.