ದೋಹಾ: ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಅವರು ಶುಕ್ರವಾರ ಇಲ್ಲಿ ನಡೆದ ದೋಹಾ ಡೈಮಂಡ್ ಲೀಗ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಕೂದಲೆಳೆಯ ಅಂತರದಲ್ಲಿ ಚಿನ್ನ ಕಳೆದುಕೊಂಡರು.
2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಚ್ 88.38 ಮೀಟರ್ ಸಾಧನೆಯೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದರು. ಅವರಿಗಿಂತ ಎರಡು ಸೆಂಟಿ ಮೀಟರ್ ಕಡಿಮೆ ದೂರ ಎಸೆದ ಭಾರತದ ನೀರಜ್ ಬೆಳ್ಳಿಗೆ ತೃಪ್ತಿಪಟ್ಟರು. ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.
ಕಳೆದ ಋತುವಿನ ಡೈಮಂಡ್ ಲೀಗ್ ಚಾಂಪಿಯನ್ ಆಗಿರುವ ವಡ್ಲೆಜ್ ಅವರ ಮೂರನೇ ಪ್ರಯತ್ನದಲ್ಲಿ ಈ ಸಾಧನೆ ಮೂಡಿಬಂತು. ಚೋಪ್ರಾ ಅವರು ಕೊನೆಯ ಪ್ರಯತ್ನದಲ್ಲಿ 87.36 ಮೀಟರ್ ದೂರ ಎಸೆದರು. ಭಾರತದ ಮತ್ತೊಬ್ಬ ಸ್ಪರ್ಧಿ ಕಿಶೋರ್ ಜೇನ 76.31 ಮೀ ದೂರ ಎಸೆಯಲಷ್ಟೇ ಶಕ್ತವಾದರು.
ಕಳೆದ ವರ್ಷ ಇಲ್ಲಿನ ಡೈಮಂಡ್ ಲೀಗ್‌ನಲ್ಲಿ ಚೋಪ್ರಾ ಇಲ್ಲಿ ಚಿನ್ನ ಗೆದ್ದಿದ್ದರು. ನಾಲ್ಕು ಸೆಂಟಿ ಮೀಟರ್‌ನಿಂದ ಚಿನ್ನ ಕಳೆದುಕೊಂಡಿದ್ದ ಜಾಕುಬ್ ಈ ಬಾರಿ ಮುಯ್ಯಿ ತೀರಿಸಿಕೊಂಡರು.
ಚೋಪ್ರಾ ಈವರೆಗಿನ ಶ್ರೇಷ್ಠ ಸಾಧನೆ 89.94 ಮೀ. (2022) ಆಗಿದೆ. 90 ಮೀಟರ್ ಸಾಧನೆಯ ಕನಸು ಈ ಕೂಟದಲ್ಲೂ ಈಡೇರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.