ಮುಂಬೈ: 'ಕ್ಲಾಸ್ ಆಫ್ 2020' ವೆಬ್‌ಸರಣಿ ನಟಿ ಜೋಯಿತಾ ಚಟರ್ಜಿ ಅವರು ಟೊಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಮೇಲೆ ಕ್ರಷ್ ಆಗಿರುವುದಾಗಿ ಬಹಿರಂಗ ಪಡಿಸಿದ್ದಾರೆ. 'ನಾನು ಅವರಿಗೆ ಬೀಳುತ್ತೇನೆ ಎಂದು ಅಂದುಕೊಂಡಿರಲೇ ಇಲ್ಲ' ಎಂದು ಭಾವೋದ್ವೇಗದಿಂದ ತಿಳಿಸಿದ್ದಾರೆ.
'ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಬಳಿಕ ನೀರಜ್ ಚೋಪ್ರಾ ಬಗ್ಗೆ ನನಗೆ ತಿಳಿಯಿತು. ನಂತರ ಅವರನ್ನು ಗಮನಿಸಲು ಆರಂಭಿಸಿದೆ. ಇದೇನು ಪ್ರಸಿದ್ಧಿಯ ಬಗ್ಗೆ ಅಲ್ಲ. ಪ್ರತಿಯೊಬ್ಬ ನಟಿಯೂ ಅವರನ್ನು ಹೊಗಳುತ್ತಿದ್ದಾರೆ ಎಂದು ಗೊತ್ತು. ಕೈರಾ ಅಡ್ವಾಣಿ ಅವರಿಂದ ಹಿಡಿದು ಎಲ್ಲ ನಟಿಯರು ಅವರನ್ನು ಹೊಗಳಿದ್ದಾರೆ. ಅವರ ಸಂದರ್ಶನಗಳನ್ನು ವೀಕ್ಷಿಸುತ್ತಿದ್ದೆ. ಹೇಗೆ ಈ ಹುಡುಗ ಇದ್ದಕ್ಕಿದ್ದಂತೆ ಎಲ್ಲರ ಹೃದಯವನ್ನು ಗೆದ್ದನೆಂದು ವಿಸ್ಮಯವಾಯಿತು' ಎಂದು ಜೋಯಿತಾ ಚಟರ್ಜಿ ಹೇಳಿದ್ದಾರೆ.
'ನೀರಜ್ ಅವರ ವಿಡಿಯೊಗಳನ್ನು ನೋಡಲು ಆರಂಭಿಸಿದಾಗ ವಿಭಿನ್ನವಾದ ಸರಳತೆ ಈ ಹುಡುಗನಿಗೆ ಇದೆ ಎಂದೆನಿಸಿತು. ಜೀವನದಲ್ಲಿ ದೊಡ್ಡ ಮಟ್ಟದ ಸಾಧನೆಯನ್ನು ಮಾಡಿದ್ದರೂ ಆತನ ಕಾಲುಗಳು ನೆಲದಲ್ಲೇ ಇವೆ. ಮಾತನಾಡುವ ಶೈಲಿಯಲ್ಲಿ ನಟನೆಯಿಲ್ಲ. ತಪ್ಪಾದ ಇಂಗ್ಲಿಷ್ ಅನ್ನು ಬಳಸುತ್ತಾರೆ. ತಾನು ಹೇಗಿದ್ದೇನೆಯೋ ಹಾಗೆ ತನ್ನನ್ನು ಸ್ವೀಕರಿಸಿದ್ದಾರೆ. ಮಹಿಳೆಯರನ್ನು ಅವರು ನಡೆಸಿಕೊಳ್ಳುವ ರೀತಿಯನ್ನು ನಾನು ಪ್ರೀತಿಸುತ್ತೇನೆ' ಎಂದು ಜೋಯಿತಾ ತಿಳಿಸಿದ್ದಾರೆ.
'ಹೆಚ್ಚಿನ ಮಹಿಳಾ ಅಭಿಮಾನಿಗಳು ನೀರಜ್‌ಗೆ ಬೀಳುತ್ತಿರುವುದನ್ನು ನೋಡಿದ್ದೇನೆ. ಅವರನ್ನು ಬಹಳ ಗೌರವಿಸುತ್ತ, ಮೃದುವಾಗಿ ದೂರ ಸರಿಯುವುದನ್ನು ನಾನು ಗಮನಿಸಿದ್ದೇನೆ. ನೀರಜ್‌ನನ್ನು ನೋಡಿ ನನ್ನ ಮನಸ್ಸು ಕರಗಿತು. ಅವರು ನನಗೆ ಸಿಕ್ಕಿದರೆ ಅಥವಾ ಬೇರೆ ಯಾರಿಗೇ ಸಿಕ್ಕಿದರೂ ಆ ಹುಡುಗಿ ಅತ್ಯಂತ ಭಾಗ್ಯಶಾಲಿಯಾಗಲಿದ್ದಾಳೆ' ಎಂದು ಜೋಯಿತಾ ಪ್ರೇಮ ನಿವೇದನೆ ಮಾಡಿದ್ದಾರೆ.
'ನೀರಜ್ ಅವರಲ್ಲಿನ ವಿಭಿನ್ನ ವ್ಯಕ್ತಿತ್ವವೇ ನನ್ನನ್ನು ಸೆಳೆದಿದ್ದು. ಅವರಲ್ಲಿ ಆಕರ್ಷಣೆಯ ಅಯಸ್ಕಾಂತೀಯ ಬಲವಿದೆ ಎಂದೆನಿಸಿತು. ಅದೇ ನನ್ನನ್ನು ಅವರತ್ತ ಸೆಳೆದಿದೆ. ಅವರ ಅಭಿಮಾನಿಗಳು ಪೋಸ್ಟ್ ಮಾಡುವ ನೀರಜ್ ಕುರಿತಾದ ವಿಡಿಯೊಗಳನ್ನು ನೋಡಿದ್ದೇನೆ. ಈ ಪೈಕಿ ವಿವಾಹ ಕಾರ್ಯಕ್ರಮವೊಂದರಲ್ಲಿ ನೀರಜ್ ದೇಸಿ ನೃತ್ಯ ಮಾಡುವುದು ಒಂದು. ಅವರು ಭಾರತಕ್ಕೆ ಹೆಮ್ಮೆ ತಂದಿದ್ದಾರೆ ಎಂಬುದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಹಲವಾರು ಸೆಲೆಬ್ರಿಟಿಗಳು ನೀರಜ್ ಅವರನ್ನು ಫಾಲೋ ಮಾಡುತ್ತಿದ್ದಾರೆ ಆದರೆ ಆ ಪೈಕಿ ಹೆಚ್ಚಿನವರನ್ನು ನೀರಜ್ ಫಾಲೋ ಮಾಡುತ್ತಿಲ್ಲ. ಇಂತಹ ಆ್ಯಟಿಟ್ಯೂಡ್ ನನಗಿಷ್ಟ' ಎಂದು ಜೋಯಿತಾ ಹೇಳಿದ್ದಾರೆ.
'ನೀರಜ್ ಅವರನ್ನು ಭೇಟಿಯಾದರೆ ತಾನು ಏನು ಮಾಡುತ್ತೇನೆ ಎಂಬುದೇ ಯೋಚನೆಗೆ ಸಿಗುತ್ತಿಲ್ಲ ಎನ್ನುವ ಜೋಯಿತಾ, ನೀರಜ್ ಯಾವಾಗ ನನ್ನ ಮುಂದೆ ಇರುತ್ತಾರೆಂದು ಗೊತ್ತಿಲ್ಲ. ನಾನು ಸ್ವಲ್ಪ ಮುಜಗರಕ್ಕೆ ಒಳಗಾಗಬಹುದು. ನನಗೆ ಐಡಿಯಾ ಇಲ್ಲ. ನಿಜಕ್ಕೂ ಆ ಕ್ಷಣದಲ್ಲಿ ನಾನೇನು ಮಾಡಬಹುದೆಂದೇ ಗೊತ್ತಾಗುತ್ತಿಲ್ಲ. ಹಾಗಾಗಿ ನಾನದನ್ನು ಯೋಚಿಸುತ್ತಿಲ್ಲ. ಆ ದಿನ ನನ್ನ ಜೀವನದಲ್ಲಿ ಬರುವಂತಾಗಲಿ' ಎಂದು ಭಾವೋದ್ವೇಗದಿಂದ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.