ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ವಿವಾದಾಸ್ಪದ ಹೇಳಿಕೆಯ ಬೆನ್ನಲ್ಲೇ, ಕೋಚ್ ರವಿಶಾಸ್ತ್ರಿ ಮತ್ತು ಆಡಳಿತಾಧಿಕಾರಿ ಗಳ ಸಮಿತಿಯ (ಸಿಒಎ) ನಡುವೆ ಮಾತಿನ ಜಟಾಪಟಿ ನಡೆದ ವಿಷಯ ಬಹಿರಂಗವಾಗಿದೆ.
ತಂಡದ ಆಡಳಿತ ಮತ್ತು ಸಿಒಎ ನಡುವೆ ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದಿದ್ದ ಸಭೆಯಲ್ಲಿ ಈ ಪ್ರಸಂಗ ನಡೆದಿದ್ದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ಸಿಒಎ ಅಧಿಕಾರಿಗಳ ವಿರುದ್ಧ ಖಾರವಾಗಿ ಮಾತನಾಡಿದ್ದಾರೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಕಳೆದ 15 ವರ್ಷಗಳಲ್ಲಿ ಭಾರತ ತಂಡ ಉತ್ತಮ ಸಾಧನೆ ಮಾಡುತ್ತಿದೆ’ ಎಂದು ರವಿಶಾಸ್ತ್ರಿ ಹೇಳಿದರೆ, ‘ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿದ್ದರೂ ವಿದೇಶಿ ನೆಲದಲ್ಲಿ ಉತ್ತಮ ಸಾಮರ್ಥ್ಯ ತೋರಲು ಯಾಕೆ ಸಾಧ್ಯವಾಗುತ್ತಿಲ್ಲ’ ಎಂದು ಸಿಒಎ ಹಿರಿಯ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
‘ನಿರಂತರವಾಗಿ ಉತ್ತಮ ಸಾಧನೆ ಮಾಡುತ್ತಿದ್ದರೂ ಭಾರತದ ಮಾಧ್ಯಮಗಳು ನಮ್ಮದೇ ತಂಡದ ಬಗ್ಗೆ ಮತ್ತು ತಂಡದ ಆಟಗಾರರ ಬಗ್ಗೆ ನಕಾರಾತ್ಮಕವಾಗಿ ಬರೆಯುತ್ತಿವೆ’ ಎಂದು ರವಿಶಾಸ್ತ್ರಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಈ ಹೇಳಿಕೆಗೆ ಸಿಒಎ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.