ಬೆಂಗಳೂರು: ಲಕ್ಷ್ಯ ಸೇನ್, ಕಿದಂಬಿ ಶ್ರೀಕಾಂತ್ ಮತ್ತು ಪಿ.ವಿ. ಸಿಂಧು ಅವರು ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಜಯಿಸಬಲ್ಲ ಫೇವರಿಟ್ ಅಥ್ಲೀಟ್‌ಗಳು ಎಂದು ಭಾರತ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪುಲ್ಲೇಲ ಗೋಪಿಚಂದ್ ಅಭಿಪ್ರಾಯಪಟ್ಟರು.
ನಗರದಲ್ಲಿ ಜೈನ್ ವಿಶ್ವವಿದ್ಯಾಲಯದ ‘ದ ಸ್ಪೋರ್ಟ್ಸ್ ಸ್ಕೂಲ್’ನಲ್ಲಿ ಸೋಮವಾರ ಆಯೋಜಿಸಿದ್ದ ಯುವ ಅಥ್ಲೀಟ್‌ಗಳೊಂದಿಗೆ ಸಂವಾದದ ಬಳಿಕ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.
l ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಸಿದ್ಧತೆ ಹೇಗಿದೆ? ಪದಕದ ನಿರೀಕ್ಷೆಇದೆಯೇ?
ಕ್ರೀಡಾಕೂಟಕ್ಕೆ ನಮ್ಮ ತಂಡ ಉತ್ತಮವಾಗಿ ಸಜ್ಜು ಗೊಂಡಿದೆ.ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಲಕ್ಷ್ಯ ಮತ್ತು ಶ್ರೀಕಾಂತ್, ಮಹಿಳಾ ಸಿಂಗಲ್ಸ್‌ನಲ್ಲಿ ಸಿಂಧು ಪದಕ ಜಯಿಸುವ ನಿರೀಕ್ಷೆಯಿದೆ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಕೂಡ ಉತ್ತಮ ಸಾಮರ್ಥ್ಯ ತೋರಬಲ್ಲರು.ತಂಡ ವಿಭಾಗದಲ್ಲೂ ನಾವು ಪ್ರಶಸ್ತಿ ಗೆಲ್ಲುವ ಅವಕಾಶ ಹೆಚ್ಚು.
l ಥಾಮಸ್ ಕಪ್ ಟೂರ್ನಿಯ ವಿಜಯದ ಕುರಿತು ಹೇಳಿ..
ಥಾಮಸ್ ಕಪ್ ವಿಜಯ ಒಂದು ಮಹತ್ವದ ಸಾಧನೆ. ವಿಶ್ವ ಚಾಂಪಿಯನ್‌ಷಿಪ್ ಗೆದ್ದಷ್ಟೇ ಖುಷಿ ಅದು. ನಾವು ಇಲ್ಲಿ ಜಯಿಸುತ್ತೇವೆ ಎಂದಾಗ ಹಲವರು ವ್ಯಂಗ್ಯವಾಡಿದ್ದರು. ಈ ಐತಿಹಾಸಿಕ ಗೆಲುವು ದೇಶದ ಇನ್ನುಳಿದ ಆಟಗಾರರಿಗೆ ಸ್ಫೂರ್ತಿಯ ಸೆಲೆಯಾಗಿತ್ತು. ಸಾತ್ವಿಕ್– ಚಿರಾಗ್ ಡಬಲ್ಸ್‌ನಲ್ಲಿ ತೋರಿದ ಸಾಮರ್ಥ್ಯ ಅದ್ಭುತವಾಗಿತ್ತು. ಹಿಂದೆಂದೂ ಆ ರೀತಿಯ ಆಟ ಅವರಿಂದ ಮೂಡಿಬಂದಿರಲಿಲ್ಲ. ಲಕ್ಷ್ಯ, ಶ್ರೀಕಾಂತ್, ಪ್ರಣಯ್ ಕೂಡ ಸಂಚಲನ ಮೂಡಿಸಿದರು.
l ಇತ್ತೀಚಿನ ದಿನಗಳಲ್ಲಿ ಭಾರತದ ಆಟಗಾರರು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ತೋರುತ್ತಿರುವುದಕ್ಕೆ ಕಾರಣ?
ಸೈನಾ ನೆಹ್ವಾಲ್, ಶ್ರೀಕಾಂತ್, ಚಿರಾಗ್, ಸಿಂಧು ಮತ್ತಿತರ ಪ್ರಮುಖ ಆಟಗಾರರಿಂದಾಗಿ ಭಾರತ ಬ್ಯಾಡ್ಮಿಂಟನ್‌ನಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಬರುತ್ತಿದೆ. ಸರ್ಕಾರ, ಭಾರತ ಬ್ಯಾಡ್ಮಿಂಟನ್ ಸಂಸ್ಥೆಗಳು, ಕಾರ್ಪೊರೇಟ್ ಕಂಪನಿಗಳ ಬೆಂಬಲವೂ ಇದರಲ್ಲಿ ಮಹತ್ವದ ಪಾತ್ರ ವಹಿಸಿದೆ.
l ಸೈನಾ ನೆಹ್ವಾಲ್ ಅವರು ಹಳೆಯ ಲಯದಲ್ಲಿ ಆಡುತ್ತಿಲ್ಲ. ಕಾರಣ ಏನಿರಬಹುದು?
ಸೈನಾ ಅವರು ಲಯಕ್ಕೆ ಮರಳುವ ವಿಶ್ವಾಸವಿದೆ. ಈ ಹಿಂದೆ ಅವರು ಹೆಚ್ಚಿನ ಸಾಧನೆ ಮಾಡಿದ್ದಾರೆ. ಗಾಯಗಳೂ ವ್ಯತಿರಿಕ್ತ ಫಲಿತಾಂಶಕ್ಕೆ ಕಾರಣವಾಗಿರಬಹುದು. ಸಿಂಗಪುರ ಓಪನ್ ಟೂರ್ನಿಯಲ್ಲಿ ಚೀನಾದ ಬಿಂಗ್ ಜಿಯಾವೊ ಅವರನ್ನು ಮಣಿಸಿದ್ದು ಸಕಾರಾತ್ಮಕ ಪರಿವರ್ತನೆ.
l ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಮಾನ್ಯತೆ ರದ್ದಾಗಿರುವುದರಿಂದ ಆಟಗಾರರ ಮೇಲೆ ಪರಿಣಾಮ ಬೀರುತ್ತದೆಯಲ್ಲ?
ಈ ಸಮಸ್ಯೆಗೆ ಶೀಘ್ರ ಪರಿಹಾರ ಸಿಗುವ ನಿರೀಕ್ಷೆಯಿದೆ. ಬ್ಯಾಡ್ಮಿಂಟನ್‌ಗೆ ಸಂಬಂಧಿಸಿದಂತೆ ಕರ್ನಾಟಕ ಪ್ರಮುಖ ರಾಜ್ಯವಾಗಿದೆ. ಉದಯೋನ್ಮುಖ ಪ್ರತಿಭೆಗಳು ಇಲ್ಲಿದ್ದಾರೆ. ಈ ವಿವಾದ ದೀರ್ಘಕಾಲ ಮುಂದುವರಿಯುವುದುಕ್ರೀಡೆಯ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯದಲ್ಲ.
‘ಕ್ರೀಡೆಯಲ್ಲಿ ಶಿಸ್ತು ಮಹತ್ವದ್ದು’: ‘ಯಾವುದೇ ಕ್ರೀಡೆಯಲ್ಲಿ ಸೋಲು, ಗೆಲುವಿಗಿಂತ ಶಿಸ್ತು ಮುಖ್ಯ’ ಎಂದು ಪುಲ್ಲೇಲ ಗೋಪಿಚಂದ್ ಕಿವಿಮಾತು ಹೇಳಿದರು.
ಯುವ ಅಥ್ಲೀಟ್‌ಗಳು ಹಾಗೂ ಅವರ ಪೋಷಕರೊಂದಿಗೆ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು.
‘ಕ್ರೀಡೆಯಲ್ಲಿ ಸಾಧನೆ ಮಾಡುವ ಮನಸ್ಸಿದ್ದರೆ ಯಾವುದೇ ಸಮಸ್ಯೆಗಳು ನಮಗೆ ಅಡ್ಡಿಯಾಗುವುದಿಲ್ಲ. ಆಟದಷ್ಟೇ ಆಹಾರ, ನಿದ್ರೆಯೂ ಮುಖ್ಯ‘ ಎಂದು ಭಾರತ ಬ್ಯಾಡ್ಮಿಂಟನ್ ಸಂಸ್ಥೆಯ ಉಪಾಧ್ಯಕ್ಷರೂ ಆಗಿರುವ ಗೋಪಿಚಂದ್ ನುಡಿದರು.
ಗೋಪಿಚಂದ್, ಜೈನ್ ವಿವಿಯ ಬ್ಯಾಡ್ಮಿಂಟನ್ ಗುರುಕುಲ ಅಕಾಡೆಮಿಯ ಸಹ ಸಂಸ್ಥಾಪಕ ಮತ್ತು ಮುಖ್ಯ ಮಾರ್ಗದರ್ಶಕ ಕೂಡ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.