ADVERTISEMENT

ಉಡುಪಿಯಲ್ಲಿ ವೇಟ್‌ಲಿಫ್ಟಿಂಗ್ ಅಕಾಡೆಮಿ: ಗುರುರಾಜ್ ಆಶಯ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 5:38 IST
Last Updated 18 ಸೆಪ್ಟೆಂಬರ್ 2022, 5:38 IST
ಗುರುರಾಜ್ ಪೂಜಾರಿ
ಗುರುರಾಜ್ ಪೂಜಾರಿ   

ಬೆಂಗಳೂರು: ‘ನನಗೀಗ ಮೂವತ್ತು ವರ್ಷ. ಇನ್ನೈದು ವರ್ಷ ಕ್ರೀಡೆಯಲ್ಲಿರುತ್ತೇನೆ. ನಿವೃತ್ತಿಯ ನಂತರ ನನ್ನ ಜಿಲ್ಲೆ ಉಡುಪಿಯಲ್ಲಿ ಅಕಾಡೆಮಿಯೊಂದನ್ನು ಆರಂಭಿಸಿ, ಅಂತರರಾಷ್ಟ್ರೀಯ ವೇಟ್‌ಲಿಫ್ಟರ್‌ಗಳನ್ನು ಸಿದ್ಧಗೊಳಿಸುತ್ತೇನೆ. ಇದು ನನ್ನ ಬಹುದಿನಗಳ ಕನಸು’–

ಸತತ ಎರಡು ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಪದಕ ಸಾಧನೆ ಮಾಡಿರುವ ಗುರುರಾಜ್ ಪೂಜಾರಿ ಅವರ ಮಾತುಗಳಿವು.‘ಪ್ರಜಾವಾಣಿ ಸೆಲೆಬ್ರಿಟಿ’ ಕಾರ್ಯಕ್ರಮದಲ್ಲಿ ಅವರು ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು.

‘ದಶಕದ ಹಿಂದೆ ಕರ್ನಾಟಕದಲ್ಲಿ ವೇಟ್‌ಲಿಫ್ಟಿಂಗ್‌ ಕ್ರೀಡೆ ಉತ್ತಮ ಸ್ಥಿತಿಯಲ್ಲಿತ್ತು. ಬಹಳಷ್ಟು ಕ್ರೀಡಾಪಟುಗಳು ಇದ್ದರು. ಆದರೆ ಈಗ ಹೆಚ್ಚು ಯುವಕ–ಯುವತಿಯರು ಸಿಗುತ್ತಿಲ್ಲ. ರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಕೂಟಗಳಲ್ಲಿ ಕರ್ನಾಟಕದ ಸ್ಪರ್ಧಿಗಳ ಸಂಖ್ಯೆ ಬೆರಳೆಣಿಕೆಯಷ್ಟಾಗಿದೆ. ಇದು ಬೇಸರದ ಸಂಗತಿ’ ಎಂದರು.

ADVERTISEMENT

‘ಗ್ರಾಮೀಣ ಮಟ್ಟದಲ್ಲಿ ಪ್ರತಿಭೆಗಳ ಶೋಧ ನಡೆಯಬೇಕು. ವೇಟ್‌ಲಿಫ್ಟಿಂಗ್‌ನಂತಹ ಕ್ರೀಡೆಗಳಿಗೆ ಬರುವವರು ಬಹುತೇಕ ಶ್ರಮಜೀವಿಗಳ ಹಾಗೂ ಬಡ ಕುಟುಂಬದ ಮಕ್ಕಳೇ ಹೆಚ್ಚು. ಅವರಿಗೆ ಆರ್ಥಿಕವಾಗಿ ಬೆಂಬಲ ನೀಡಬೇಕು. ಜಿಲ್ಲೆಗಳಲ್ಲಿ ವಸತಿ ನಿಲಯ ಆರಂಭಿಸಿ ತರಬೇತಿ, ಶಿಕ್ಷಣಕ್ಕೆ ಅನುಕೂಲ ಕಲ್ಪಿಸಬೇಕು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಗಟ್ಟಿ ಹೆಜ್ಜೆಗಳನ್ನು ಇಡಬೇಕು’ ಎಂದು ಸಲಹೆ ನೀಡಿದರು.

‘ವೇಟ್‌ಲಿಫ್ಟಿಂಗ್‌ನಲ್ಲಿ ಅಂತರರಾಷ್ಟ್ರೀಯ ಸಾಧನೆ ಮಾಡುವ ಮಟ್ಟಕ್ಕೆ ಬೆಳೆಯಲು ಬಹಳಷ್ಟು ಸೌಲಭ್ಯಗಳು ಬೇಕು. ವೆಚ್ಚವೂ ಹೆಚ್ಚು. ಕೇಂದ್ರ ಸರ್ಕಾರದಿಂದ ಖೇಲೊ ಇಂಡಿಯಾ, ಭಾರತ ಕ್ರೀಡಾ ಪ್ರಾಧಿಕಾರದಿಂದ ಟಾಪ್ಸ್‌ ಯೋಜನೆಗಳಿಂದ ಕ್ರೀಡಾಪಟುಗಳಿಗೆ ನೆರವು ಸಿಗುತ್ತಿದೆ. ಬೇರೆ ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಅಂತರರಾಷ್ಟ್ರೀಯ ಪದಕ ಸಾಧಕರಿಗೆ ದೊಡ್ಡ ಮೊತ್ತದ ಬಹುಮಾನ ನೀಡುವಂತಾಗಬೇಕು. ಇದರಿಂದ ಮತ್ತಷ್ಟು ಜನರಿಗೆ ಪ್ರೇರಣೆ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.