ಬರ್ಮಿಂಗ್‌ಹ್ಯಾಂ: ಗುರ್ಜಿತ್ ಕೌರ್ ಗಳಿಸಿದ ಸೊಗಸಾದ ಎರಡು ಗೋಲುಗಳ ಬಲದಿಂದ ಭಾರತ ಮಹಿಳಾ ಹಾಕಿ ತಂಡವು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭರ್ಜರಿ ಗೆಲುವಿನ ಆರಂಭ ಮಾಡಿತು.
ಶುಕ್ರವಾರ ನಡೆದ ಪಂದ್ಯದಲ್ಲಿ ಸವಿತಾ ಪೂನಿಯಾ ನಾಯಕತ್ವದ ಭಾರತ 5–0ಯಿಂದ ತನಗಿಂತ ಕೆಳ ರ‍್ಯಾಂಕಿನ ಘಾನಾ ವಿರುದ್ಧ ಜಯಭೇರಿ ಮೊಳಗಿಸಿತು.
ಗುರ್ಜಿತ್ ಕೌರ್ ಮೂರು ಮತ್ತು 39ನೇ ನಿಮಿಷಗಳಲ್ಲಿ ಗೋಲು ಗಳಿಸಿದರು. ನೇಹಾ ಗೋಯಲ್ (28ನೇ ನಿಮಿಷ), ಸಂಗೀತಾ ಕುಮಾರಿ (36ನೇ ನಿ.) ಮತ್ತು ಸಲೀಮಾ ಟೆಟೆ (56ನೇ ನಿ.) ತಂಡದ ಗೆಲುವಿನಲ್ಲಿ ಮಿಂಚಿದರು.
ಆಟದ ಎಲ್ಲ ವಿಭಾಗಗಳಲ್ಲೂ ಭಾರತ ಪಾರಮ್ಯ ಮೆರೆಯಿತು. ಆದರೆ ಪಂದ್ಯದ ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಘಾನಾದ ಅದ್ಭುತ ಡಿಫೆನ್ಸ್ ಆಟದ ಮುಂದೆ ಸವಿತಾ ಪಡೆಯ ಆಟ ನೀರಸ ಎನಿಸಿತು. ಮಿಡ್‌ಫೀಲ್ಡ್ ಮತ್ತು ಫಾರ್ವರ್ಡ್‌ಲೈನ್‌ನಲ್ಲಿ ಆಟಗಾರ್ತಿಯರ ಮಧ್ಯೆ ಹೊಂದಾಣಿಕೆ ಕಂಡುಬರಲಿಲ್ಲ.
ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿಸುವ ಅವಕಾಶಗಳಲ್ಲೂ ಭಾರತ ಎಡವಿತು. 10 ಅವಕಾಶಗಳ ಪೈಕಿ ಕೇವಲ ಒಂದರಲ್ಲಿ ಭಾರತ ಯಶಸ್ಸು ಸಾಧಿಸಿತು.
ವಿಶ್ವ ರ‍್ಯಾಂಕಿಂಗ್‌ನಲ್ಲಿ ಘಾನಾ 30ನೇ ಸ್ಥಾನದಲ್ಲಿದ್ದರೆ ಭಾರತ 9ನೇ ಸ್ಥಾನದಲ್ಲಿದೆ.
ಭಾರತ ಆರಂಭದಿಂದಲೇ ವೇಗದ ಆಟಕ್ಕೆ ಒತ್ತುನೀಡಿತು. ಮೂರನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗುರ್ಜಿತ್ ಕೌರ್ ತಪ್ಪು ಮಾಡಲಿಲ್ಲ. ಬಲ ಕಾರ್ನರ್‌ನಲ್ಲಿ ಡ್ರ್ಯಾಗ್‌ಫ್ಲಿಕ್ ಮೂಲಕ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು.
ಘಾನಾ ತಂಡಕ್ಕೂ ಎರಡು ಪೆನಾಲ್ಟಿ ಕಾರ್ನರ್ ಲಭಿಸಿದರೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಭಾರತ ತಂಡದ ಮುನ್ನಡೆಯನ್ನು ನೇಹಾ ಎರಡಕ್ಕೇರಿಸಿದರು. ಬಳಿಕ ಸಂಗೀತಾ ಕುಮಾರಿ ಮತ್ತು ಸಲೀಮಾ ಟೆಟೆ ಮೂಲಕ ಗೋಲುಗಳು ಬಂದವು.
ಭಾರತ ತಂಡವು ಶನಿವಾರ ನಡೆಯುವ ಗುಂಪು ಹಂತದ ಎರಡನೇ ಪಂದ್ಯದಲ್ಲಿ ವೇಲ್ಸ್ ತಂಡವನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.