ಬೆಂಗಳೂರು: ಕೋವಿಡ್–19 ಸೋಂಕಿನಿಂದ ಚೇತರಿಸಿಕೊಳ್ಳುವ ಸಂದರ್ಭದಲ್ಲಿ ಅನುಭವಿಸಿದ ಪ್ರತ್ಯೇಕವಾಸವು ತನ್ನನ್ನು ಮಾನಸಿಕವಾಗಿ ಗಟ್ಟಿಯಾಗಿಸಿದೆ ಎಂದು ಭಾರತ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ. ಅಂಗಣದಲ್ಲಿ ಎದುರಾಗುವ ಯಾವುದೇ ಸವಾಲು ಎದುರಿಸಲು ಈಗ ನಾನು ಸಜ್ಜಾಗಿದ್ದೇನೆ ಎಂದೂ ಅವರು ನುಡಿದರು.
ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಳ್ಳಲು ಹೋದ ತಿಂಗಳು ಬೆಂಗಳೂರಿಗೆ ಆಗಮಿಸಿದ್ದ ಮನ್‌ಪ್ರೀತ್ ಸೇರಿದಂತೆ ಆರು ಮಂದಿ ಹಾಕಿ ಆಟಗಾರರಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು.
ಕೋವಿಡ್‌ನಿಂದ ಚೇತರಿಸಿಕೊಂಡ ಬಳಿಕಮನ್‌ಪ್ರೀತ್ ಅವರು ಪ್ರತ್ಯೇಕವಾಗಿ ಅಭ್ಯಾಸ ನಡೆಸಿದ್ದರು.ಅವರಲ್ಲಿ ಉತ್ಸಾಹ ತುಂಬಲು ಭಾರತ ಕ್ರೀಡಾ ಪ್ರಾಧಿಕಾರ ಹಾಗೂ ಹಾಕಿ ಇಂಡಿಯಾ ಸತತವಾಗಿ ಪ್ರಯತ್ನ ನಡೆಸಿದ್ದರೂ,ತಂಡದೊಂದಿಗೆ ಇಲ್ಲದಿರುವುದಕ್ಕೆ ಬೇಸರವಾಗುತ್ತಿದೆ ಎಂದು ಮನ್‌ಪ್ರೀತ್ ಹೇಳಿದ್ದಾರೆ.
‘ನಮಗೆ ಒದಗಿಸುತ್ತಿರುವ ಆಹಾರ, ಚಿಕಿತ್ಸೆ ಮತ್ತು ಆಕ್ಸಿಜನ್ ಮಟ್ಟದ ಕುರಿತು ಹಾಕಿ ಇಂಡಿಯಾ ಅಧಿಕಾರಿಗಳು ಪ್ರತಿದಿನ ವಿಚಾರಿಸಿಕೊಳ್ಳುತ್ತಾರೆ. ಕೋಚಿಂಗ್ ಸಿಬ್ಬಂದಿ ಹಾಗೂ ಸಹ ಆಟಗಾರರೂ ವಿಡಿಯೊ ಕರೆಗಳ ಮೂಲಕ ಚರ್ಚಿಸುತ್ತಾರೆ. ಈ ಸಂಗತಿಗಳು ನಮ್ಮನ್ನು ಸದಾ ಲವಲವಿಕೆಯಿಂದಿರಲು ನೆರವಾಗಿವೆ. ಇತರ ಆಟಗಾರರು ಅಂಗಣದಲ್ಲಿದ್ದರೆ ನಾವು ಇನ್ನೂ ಪ್ರತ್ಯೇಕವಾಸದಲ್ಲಿದ್ದೇವೆ ಎಂಬ ಅಲ್ಪ ವೇದನೆ ಇದ್ದರೂ ಮಾನಸಿಕ ಸ್ಥೈರ್ಯ ಹೆಚ್ಚಿಸಿಕೊಳ್ಳಲು ಇದು ಅನುಕೂಲವಾಗಿದೆ‘ ಎಂದು ಮನ್‌ಪ್ರೀತ್ ನುಡಿದರು.
ಆಸ್ಪತ್ರೆಯಲ್ಲಿ ಕಳೆದ ದಿನಗಳನ್ನು ಮನ್‌ಪ್ರೀತ್ ಇದೇ ವೇಳೆ ಮೆಲುಕು ಹಾಕಿದರು.
‘ನಾನು ಮತ್ತು ಸೋಂಕಿತಇತರ ಆಟಗಾರರಿಗೆ ಆ ದಿನಗಳು ಮಾನಸಿಕವಾಗಿ ಸವಾಲಾಗಿದ್ದವು. ಒಂದು ತಿಂಗಳ ಕಾಲ ನಾನು ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಲಿಲ್ಲ. ಅಥ್ಲೀಟ್‌ಗಳ ವೃತ್ತಿಜೀವನದಲ್ಲಿ ಇಂತಹ ದಿನಗಳು ಅತಿ ದೀರ್ಘ ಎನಿಸುತ್ತವೆ‘ ಎಂದು ಮನ್‌ಪ್ರೀತ್ ಹೇಳಿದರು.
ಆಸ್ಪತ್ರೆಯಲ್ಲಿ ನಮಗೆ ಉತ್ತಮ ಸೌಲಭ್ಯಗಳು ದೊರೆತವು. ಮುಖ್ಯ ಕೋಚ್ ಗ್ರಹಾಂ ರೇಡ್ ಅವರು ಯಾವಾಗಲೂ ಆತ್ಮವಿಶ್ವಾಸ ತುಂಬುತ್ತಿದ್ದರು. ತಂಡದ ವೈಜ್ಞಾನಿಕ ಸಲಹೆಗಾರ ರಾಬಿನ್ ಅರ್ಕೆಲ್ ಅವರ ಸಹಕಾರವೂ ಸ್ಮರಣಾರ್ಹ‘ ಎಂದು ಮನ್‌ಪ್ರೀತ್ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.