ಬರ್ಮಿಂಗ್‌ಹ್ಯಾಂ: ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳಾ ಹಾಕಿ ಸೆಮಿಫೈನಲ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 0–3 ಅಂತರದ ಸೋಲನುಭವಿಸಿದೆ. ಇದರೊಂದಿಗೆ, ಚಿನ್ನ ಅಥವಾ ಬೆಳ್ಳಿಯ ಪದಕ ಗೆಲ್ಲುವ ಅವಕಾಶ ಕೈತಪ್ಪಿದಂತಾಗಿದೆ.
ನಾಲ್ಕು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವು ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ದಿಟ್ಟತನದ ಆಟ ಪ್ರದರ್ಶಿಸಿತು.
ಆರಂಭದಲ್ಲಿ ಆಕ್ರಮಣಕಾರಿಯಾಗಿ ಆಡಿದ ಭಾರತ ತಂಡಕ್ಕೆ ಎಂಟನೇ ನಿಮಿಷದಲ್ಲಿ ಗೋಲು ಬಾರಿಸುವ ಅವಕಾಶ ದೊರೆಯಿತಾದರೂ ಆಸ್ಟ್ರೇಲಿಯಾ ಆಟಗಾರ್ತಿಯರು ಅದಕ್ಕೆ ಅವಕಾಶ ನೀಡಲಿಲ್ಲ. ಬಳಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸುತ್ತಲೇ ಹೋಯಿತು.
ಬುಧವಾರ ನಡೆದಿದ್ದ ಪಂದ್ಯದಲ್ಲಿ ಕೆನಡಾವನ್ನು 3–2 ಅಂತರದಿಂದ ಮಣಿಸಿದ್ದ ಭಾರತದ ವನಿತೆಯರು ಸೆಮಿಫೈನಲ್ ಪ್ರವೇಶಿಸಿದ್ದರು.
ಈ ಮಧ್ಯೆ, ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 2–0 ಅಂತರದಿಂದ ಮಣಿಸಿರುವ ಇಂಗ್ಲೆಂಡ್ ಫೈನಲ್ ಪ್ರವೇಶಿಸಿದೆ. ಚಿನ್ನಕ್ಕಾಗಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಮಧ್ಯೆ ಪೈಪೋಟಿ ನಡೆಯಲಿದೆ.
ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಕಂಚಿನ ಪದಕಕ್ಕಾಗಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.