ನವದೆಹಲಿ: ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ಮೂರು ಬಾರಿಯ ಒಲಿಂಪಿಕ್ ಚಾಂಪಿಯನ್ ಹಾಗೂ ವಿಶ್ವದಾಖಲೆ ವೀರ ಯಾನ್ ಝೆಲೆಝ್ನಿ ಅವರನ್ನು ತಮ್ಮ ಕೋಚ್ ಆಗಿ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
58 ವರ್ಷ ವಯಸ್ಸಿನ ಝೆಲೆಝ್ನಿ ಅವರು ಅವರು ಆಧುನಿಕ ಯುಗದ ಮಹಾನ್ ಜಾವೆಲಿನ್ ಥ್ರೋವರ್ ಆಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಯಶಸ್ವಿ ವೃತ್ತಿಜೀವನದಲ್ಲಿ ಸತತ ಮೂರು ಒಲಿಂಪಿಕ್ಸ್‌ಗಳಲ್ಲಿ (1992, 1996 ಮತ್ತು 2000) ಅವರು ಚಿನ್ನ ಗೆದ್ದಿದ್ದರು. 1993, 1995 ಮತ್ತು 2001ರಲ್ಲಿ ವಿಶ್ವ ಚಾಂಪಿಯನ್ ಕೂಡ ಆಗಿದ್ದರು. ವಿಶ್ವ ದಾಖಲೆ (98.48 ಮೀ.) ದೀರ್ಘ ಕಾಲದಿಂದ ಅವರ ಹೆಸರಿನಲ್ಲಿದೆ. 1996ರಲ್ಲಿ ಜರ್ಮನಿಯಲ್ಲಿ ಅವರು ಆ ಚಾರಿತ್ರಿಕ ಥ್ರೊ ದಾಖಲಿಸಿದ್ದರು.
ಚೋಪ್ರಾ ಐದು ವರ್ಷಗಳಿಂದ ಜರ್ಮನಿಯ ಕ್ಲಾಸ್ ಬರ್ತೊನೀಟ್ಜ್ ಅವರಿಂದ ತರಬೇತಿ ಪಡೆಯುತ್ತಿದ್ದರು. ಅವರು ಕೌಟುಂಬಿಕ ಕಾರಣಗಳಿಂದ ಒಪ್ಪಂದ ಮುಂದುವರಿಸಿರಲಿಲ್ಲ.
ನೀರಜ್ 2020 ಟೋಕಿಯೊ ಒಲಿಂಪಿಕ್ ಕ್ರೀಡೆಗಳಲ್ಲಿ ಚಿನ್ನ ಗೆದ್ದರೆ, 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿದ್ದರು.
ತಾವು ಝೆಲೆಝ್ನಿ ಅವರ ದೊಡ್ಡ ಅಭಿಮಾನಿಯಾಗಿರುವುದಾಗಿ ಭಾರತದ ಜಾವೆಲಿನ್ ತಾರೆ ಹೇಳಿದ್ದರು. ತಮ್ಮ ಕೌಶಲ ವರ್ಧನೆಗೆ ಝೆಕ್ ತಾರೆಯ ವಿಡಿಯೊಗಳನ್ನು ನೋಡುತ್ತಿದ್ದುದಾಗಿಯೂ ಅವರು ಹೇಳಿದ್ದರು.
‘ನಾನು ಕ್ರೀಡಾಪಟುವಾಗಿ ಬೆಳೆಯುತ್ತಿದ್ದಾಗ, ಯಾನ್ ಅವರ ತಂತ್ರಗಾರಿಕೆ ಮತ್ತು ನಿಖರತೆಯನ್ನು ಮೆಚ್ಚುತ್ತಿದ್ದೆ. ಅವರ ವಿಡಿಯೊಗಳನ್ನು ನೋಡಿ ಹೆಚ್ಚಿನ ಅವಧಿ ಕಳೆಯುತ್ತಿದ್ದೆ. ಅವರು ಹಲವು ವರ್ಷಗಳಿಂದ ಶ್ರೇಷ್ಠ ಜಾವೆಲಿನ್ ತಾರೆಯಾಗಿದ್ದರು. ಅವರಿಂದ ತರಬೇತಿ ಪಡೆಯುತ್ತಿರುವುದು ತಮ್ಮ ಪಾಲಿಗೆ ಅಮೂಲ್ಯ. ಅವರ ಎಸೆತದ ಶೈಲಿ ಹೊಂದಿಕೆಯಾಗುತ್ತಿದೆ. ಅವರ ಜ್ಞಾನ ಹೋಲಿಸಲಸಾಧ್ಯ’ ಎಂದು ನೀರಜ್ ಹೇಳಿದ್ದಾರೆ.
‘ಯಾನ್ ಜೊತೆಗಿರುವುದು ನನ್ನ ಪಾಲಿಗೆ ಗೌರವದ ವಿಷಯ. ನನ್ನ ವೃತ್ತಿಜೀವನದ ಮತ್ತೊಂದು ಆಯಾಮದತ್ತ ಸಾಗುತ್ತಿದ್ದೇನೆ’ ಎಂದು ಹೇಳಿದ್ದಾರೆ.
ನೀರಜ್, ಜಾವೆಲಿನ್‌ನಲ್ಲಿ 90 ಮೀ. ಮೈಲಿಗಲ್ಲು ದಾಟುವ ಯತ್ನದಲ್ಲಿದ್ದಾರೆ. ಝೆಲೆಝ್ನಿ ಅವರ ಅನುಭವ ತಮಗೆ ನೆರವಾಗಬಹುದೆಂಬ ವಿಶ್ವಾಸ ಅವರು.
‘ನೀರಜ್ ಅತ್ಯಂತ ಪ್ರತಿಭಾನ್ವಿತ. ಅವರನ್ನು ವೃತ್ತಿಜೀವನದ ಆರಂಭದಲ್ಲಿ ನೋಡಿದ್ದಾಗ, ಅವರು ಅತ್ಯುತ್ತಮ ಫಲಿತಾಂಶ ನೀಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂಬುದು ಮನವರಿಕೆಯಾಗಿತ್ತು’ ಎಂದು ಯಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯಾನ್ ಝೆಲೆಝ್ನಿ ಅವರು ಈ ಹಿಂದೆ ಹೆಸರಾಂತ ಜಾವೆಲಿನ್ ಪಟುಗಳಾದ ಯಾಕುಬ್ ವಾಡ್ಲೆಚ್, ವಿಟೆಝ್‌ಸ್ಲಾವ್ ವಾಸೆಲಿ, ಬಾರ್ಬೊರಾ ಸ್ಪೊಟೊಕೋವಾ ಅವರಿಗೆ ತರಬೇತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.