ಹೈದರಾಬಾದ್: ಪಟ್ನಾ ಪೈರೇಟ್ಸ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳು ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯ ಸೆಮಿಫೈನಲ್ ಪ್ರವೇಶಿಸಿದವು.
ಗಚ್ಚಿಬೌಲಿಯ ಜಿಎಂಸಿ ಬಾಲಯೋಗಿ ಕ್ರೀಡಾ ಸಂಕೀರ್ಣದಲ್ಲಿ ಸೋಮವಾರ ನಡೆದ ಎಲಿಮಿನೇಟರ್ ಪಂದ್ಯಗಳಲ್ಲಿ ದಬಂಗ್ ಡೆಲ್ಲಿ ವಿರುದ್ಧ ಪಟ್ನಾ ಪೈರೇಟ್ಸ್ 37–35ರಲ್ಲಿ ಹಾಗೂ ಗುಜರಾತ್ ಜೈಂಟ್ಸ್ ವಿರುದ್ಧ ಹರಿಯಾಣ ಸ್ಟೀಲರ್ಸ್ 42–25ರಲ್ಲಿ ಜಯ ಸಾಧಿಸಿತು.
ಮೊದಲ ಪಂದ್ಯದಲ್ಲಿ ಉಭಯ ತಂಡಗಳ ನಾಯಕರು ಅಮೋಘ ರೇಡಿಂಗ್ ಮೂಲಕ ಮಿಂಚಿದರು. ಆದರೆ ಕೊನೆಯ ಕ್ಷಣಗಳಲ್ಲಿ ‘ಮ್ಯಾಜಿಕ್’ ಮಾಡಿದ ಪಟ್ನಾ ನಾಲ್ಕನೇ ಬಾರಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಮೂಡಿಸಿತು.
ಆರಂಭದಲ್ಲಿ ಸಮಬಲದ ಹೋರಾಟ ತೋರಿದ ಡೆಲ್ಲಿ ನಂತರ ಸತತ ತಪ್ಪು ಎಸಗಿ ಪಾಯಿಂಟ್‌ಗಳನ್ನು ಕಳೆದುಕೊಂಡಿತು. 10ನೇ ನಿಮಿಷದಲ್ಲಿ ಪಟ್ನಾ ನಾಯಕ ಸಚಿನ್ ಇಬ್ಬರನ್ನು ಔಟ್ ಮಾಡುವ ಮೂಲಕ ಎದುರಾಳಿ ಅಂಗಣವನ್ನು ಖಾಲಿ ಮಾಡಿದರು. ಈ ಮೂಲಕ ತಂಡ 12–5ರ ಮುನ್ನಡೆ ಗಳಿಸಲು ನೆರವಾದರು. ಏಕಾಂಗಿ ಹೋರಾಟ ಮಾಡಿದ ಡೆಲ್ಲಿ ನಾಯಕ ಆಶು ಮಲಿಕ್ 15ನೇ ನಿಮಿಷದಲ್ಲಿ ಸೂಪರ್ ರೇಡ್ ಮೂಲಕ ಹಿನ್ನಡೆಯನ್ನು 13–14ಕ್ಕೆ ಇಳಿಸಿದರು. ಮೊದಲಾರ್ಧದ ಅಂತ್ಯಕ್ಕೆ ಡೆಲ್ಲಿ 20–19ರ ಮುನ್ನಡೆ ಸಾಧಿಸಿತು.
ದ್ವಿತೀಯಾರ್ಧದ ಆರಂಭದಲ್ಲಿ ಎರಡೂ ತಂಡಗಳು ಎಚ್ಚರಿಕೆಯ ಆಟವಾಡಿದವು. 29ನೇ ನಿಮಿಷದಲ್ಲಿ ಪಂದ್ಯ 25–25ರಲ್ಲಿ ಸಮ ಆಯಿತು. ನಂತರ ಡೆಲ್ಲಿ ಮುನ್ನಡೆ ಸಾಧಿಸಿತು. ಪಂದ್ಯ ಮುಕ್ತಾಯಕ್ಕೆ 3 ನಿಮಿಷ ಇದ್ದಾಗ 1 ಪಾಯಿಂಟ್ ಮುನ್ನಡೆ ಸಾಧಿಸಿದ ಪಟ್ನಾ ಕೊನೆಯ ನಿಮಿಷದಲ್ಲಿ ಚಾಣಾಕ್ಷ ಆಟವಾಡಿ ಡೆಲ್ಲಿಯನ್ನು ಆಲ್ ಔಟ್ ಮಾಡಿ ಪಂದ್ಯಕ್ಕೆ ಮಹತ್ವದ ತಿರುವು ನೀಡಿತು. ಆಶು ಮಲಿಕ್ 19 ಪಾಯಿಂಟ್ ಗಳಿಸಿದರೆ ಸಚಿನ್ 9 ಪಾಯಿಂಟ್ ಕಲೆ ಹಾಕಿದರು.
ಗುಜರಾತ್‌ಗೆ ನಿರಾಸೆ
ಮಾಜಿ ರನ್ನರ್ ಅಪ್ ಗುಜರಾತ್ ಒಮ್ಮೆಯೂ ಫೈನಲ್ ಪ್ರವೇಶಿಸದ ಹರಿಯಾಣ ವಿರುದ್ಧ ನಿರಾಸೆ ಅನುಭವಿಸಿತು. ಆರಂಭದಿಂದಲೇ ಆಧಿಪತ್ಯ ಸ್ಥಾಪಿಸಿದ ಹರಿಯಾಣ ನಿರಂತರ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಹರಿಯಾಣ ತಂಡಕ್ಕಾಗಿ ರೇಡರ್ ವಿನಯ್ 12 ಪಾಯಿಂಟ್ ಗಳಿಸಿದರೆ ಶಿವಂ 8, ಡಿಫೆಂಡರ್ ಮೋಹಿತ್ ನಂದಾಲ್ 7 ಪಾಯಿಂಟ್ ತಮ್ಮದಾಗಿಸಿಕೊಂಡರು. ಗುಜರಾತ್‌ಗೆ ರೇಡರ್‌ಗಳಾದ ಪ್ರತೀಕ್ ದಹಿಯಾ ಮತ್ತು ರಾಕೇಶ್ ತಲಾ 5 ಪಾಯಿಂಟ್ ತಂದುಕೊಟ್ಟರು.
ಸೆಮಿಫೈನಲ್ ಮುಖಾಮುಖಿ
ಪುಣೇರಿ ಪಲ್ಟನ್–ಪಟ್ನಾ ಪೈರೇಟ್ಸ್
ಜೈಪುರ್ ಪಿಂಕ್ ಪ್ಯಾಂಥರ್ಸ್–ಹರಿಯಾಣ ಸ್ಟೀಲರ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.