ನಾಡಹಬ್ಬ ದಸರಾ ಅಂಗವಾಗಿ ಮೈಸೂರಿನ ವಿವಿಧೋದ್ದೇಶ ಕ್ರೀಡಾಂಗಣದಲ್ಲಿ 80 ಕೆ.ಜಿಯಿಂದ 125 ಕೆ.ಜಿ ಪುರುಷರ ವಿಭಾಗದಲ್ಲಿ ನಡೆಯುತ್ತಿದ್ದ ಪಂದ್ಯವದು. ಬೆಳಗಾವಿಯ ಪೈಲ್ವಾನ್ ಶಿವಯ್ಯ ಪೂಜಾರಿ ಹಾಗೂ ಪೈಲ್ವಾನ್ ಕಿರಣ್ ಅವರ ನಡುವೆ ಕಾದಾಟ ಶುರುವಾಯಿತು. 30 ನಿಮಿಷಕ್ಕೆ ನಿಗದಿಯಾಗಿದ್ದ ಈ ಟೂರ್ನಿಯಲ್ಲಿ ಮದಗಜಗಳಂತೆ ಕಾದಾಡಿ ಪಟ್ಟಿಗೆ ಪ್ರತಿಪಟ್ಟು ಹಾಕುವ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡಿದರು. ಎಲ್ಲರಲ್ಲೂ ಯಾರೂ ಗೆಲ್ಲುತ್ತಾರೆ ಎಂಬ ಕೂತುಹಲ. ಅಂತಿಮವಾಗಿ ಗೆಲುವಿನ ನಗೆ ಬೀರಿದ್ದು, ದಾವಣಗೆರೆಯ ಪೈಲ್ವಾನ್ ಕಿರಣ್.
11-0 ಪಾಯಿಂಟ್‍ಗಳಿಂದ ಮೇಲುಗೈ ಸಾಧಿಸಿದ ಕಿರಣ್ ‘ದಸರಾ ಕಂಠೀರವ’ ಪ್ರಶಸ್ತಿ ಗೆಲ್ಲುವ ಮೂಲಕ ಒಂದೂಕಾಲು ಕೆ.ಜಿ ತೂಕದ ಬೆಳ್ಳಿಗದೆಯನ್ನು ಹೆಗಲಿಗೇರಿಸಿಕೊಂಡರು. ರಫಿಕ್ ಹೊಳಿ, ಕಾರ್ತಿಕ್ ಕಾಟೆಯಂತಹ ಕ್ರೀಡಾಪಟುಗಳನ್ನು ಸೃಷ್ಟಿಸಿದ ದಾವಣಗೆರೆ ಕ್ರೀಡಾ ಹಾಸ್ಟೆಲ್‌ನಿಂದ ಇಬ್ಬರು ಕುಸ್ತಿಪಟುಗಳು ಛಾಪು ಮೂಡಿಸಿದ್ದಾರೆ. ಅವರೇ ಕಿರಣ್ ಹಾಗೂ ಅರ್ಜುನ್ ಡಿ.ಹಲಕುರ್ಕಿ.
ಭದ್ರಾವತಿಯವರಾದ ಕಿರಣ್ ಅವರದು ರೈತ ಕುಟುಂಬ. ತಂದೆ ಕುಸ್ತಿ ಪಟು. ಅವರ ಪ್ರೇರಣೆಯಿಂದಲೇ ಕಿರಣ್‌ಗೆ ಚಿಕ್ಕಂದಿನಿಂದಲೇ ಈ ಸ್ಪರ್ಧೆಯಲ್ಲಿ ಆಸಕ್ತಿ ಮೂಡಿತು. ಕಾರ್ತಿಕ್ ಕಾಟೆ ಇವರಿಗೆ ಪ್ರೇರಣೆ. 2018ರಲ್ಲಿ ರಾಜಸ್ಥಾನದಲ್ಲಿ ನಡೆದ 23 ವರ್ಷದೊಳಗಿನ ಫ್ರೀಸ್ಟೈಲ್ ಕುಸ್ತಿ ಚಾಂಪಿಯನ್‌ಷಿಪ್‍ನಲ್ಲಿ ಬೆಳ್ಳಿ ಪದಕ, 2019ರಲ್ಲಿ ಬೆಳಗಾವಿಯಲ್ಲಿ ನಡೆದ ಕುಸ್ತಿ ಹಬ್ಬದಲ್ಲಿ ’ಕರ್ನಾಟಕ ಕೇಸರಿ' ಪ್ರಶಸ್ತಿಯೊಂದಿಗೆ ₹3.5 ಲಕ್ಷ ಬಹುಮಾನವನ್ನು ತಮ್ಮದಾಗಿಸಿಕೊಂಡರು.
ಚಿತ್ರದುರ್ಗದಲ್ಲಿ ಈಚೆಗೆ ನಡೆದ ಪಂದ್ಯಾವಳಿಯಲ್ಲಿ ‘ಚಿನ್ಮೂಲಾದ್ರಿ ಕೇಸರಿ’ ಪ್ರಶಸ್ತಿ ಪಡೆದುಕೊಂಡ ಇವರು, ಮಟ್ಟಿ ಕುಸ್ತಿಗಳಲ್ಲಿ 22 ಬೆಳ್ಳಿಗದೆಗಳನ್ನು ಗೆದ್ದಿದ್ದಾರೆ.ನವೆಂಬರ್ 28ರಿಂದ ಪಂಜಾಬ್‍ನ ಜಲಂಧರ್‌ನಲ್ಲಿ ನಡೆಯುವ ಹಿರಿಯರ ನ್ಯಾಷನಲ್ ಕುಸ್ತಿ ಚಾಂಪಿಯನ್‍ಷಿಪ್‍ನಲ್ಲಿ ಭಾಗವಹಿಸುತ್ತಿದ್ದು, ಅಲ್ಲಿಯೂ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಗುರಿ
ದಾವಣಗೆರೆ ಕ್ರೀಡಾ ಹಾಸ್ಟೆಲ್‌ನ ಮತೊಬ್ಬ ಆಟಗಾರ ಅರ್ಜುನ್ ಡಿ. ಹಲಕುರ್ಕಿ ನವೆಂಬರ್ 2ರಿಂದ ಹಂಗೇರಿಯಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದಾರೆ.
ಶಿರಡಿಯಲ್ಲಿ ಈಚೆಗೆ ನಡೆದ 23 ವರ್ಷದೊಳಗಿನ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನ 55 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಅರ್ಜುನ್ ಅವರು ಹರಿಯಾಣದ ಸಂದೀಪ್ ವಿರುದ್ಧ 10-2ರಲ್ಲಿ ಗೆಲುವು ಸಾಧಿಸುವ ಮೂಲಕ ಅರ್ಹತೆ ಗಿಟ್ಟಿಸಿಕೊಂಡರು.
ಬಾಗಲಕೋಟೆ ಜಿಲ್ಲೆಯ ಬೇವಿನಮಟ್ಟಿ ಗ್ರಾಮದ ಅರ್ಜುನ್ ಅವರದು ಬಡ ಕುಟುಂಬ. ಕುಸ್ತಿ ಅವರ ಕುಟುಂಬಕ್ಕೆ ಕರಗತ. ತಂದೆ ದುರ್ಗಪ್ಪ ಕುಸ್ತಿಪಟು. ಬಾಲ್ಯದಿಂದಲೇ ತಂದೆಯಿಂದ ಇವರೂ ಕುಸ್ತಿ ಪಟ್ಟುಗಳನ್ನು ಕಲಿತರು. ಅರ್ಜುನ್ 6ನೇ ತರಗತಿಯಲ್ಲಿರುವಾಗಲೇ ವಿಶ್ವ ಜೂನಿಯರ್ ಸ್ಕೂಲ್ ಗೇಮ್‍ನಲ್ಲಿ 35 ಕೆ.ಜಿ. ವಿಭಾಗದಲ್ಲಿ ಬೆಳ್ಳಿಯ ಪದಕ ಮುಡಿಗೇರಿಸಿಕೊಂಡರು. ಎರಡು ಬಾರಿ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್, ಎರಡು ಬಾರಿ ಏಷ್ಯನ್ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿದ್ದಾರೆ.
‘ಹಂಗೇರಿಯಲ್ಲಿ ನಡೆಯುವ ವಿಶ್ವ ಚಾಂಪಿಯನ್‌ಷಿಪ್‍ನಲ್ಲಿ ಗೆದ್ದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಬೇಕು ಎಂಬುದು ನನ್ನ ಮುಂದಿನ ಗುರಿ’ ಎಂದು ಅರ್ಜುನ್ ವಿಶ್ವಾಸದಿಂದ ಹೇಳುತ್ತಾರೆ.
ದಾವಣಗೆರೆ ಮಲ್ಲರ ಹೆಜ್ಜೆ ಗುರುತುಗಳು
ದಾವಣಗೆರೆಯ ಕ್ರೀಡಾ ಹಾಸ್ಟೆಲ್‌ನಲ್ಲಿ ಹಿರಿಯರ ವಿಭಾಗದಲ್ಲಿ 54 ಹಾಗೂ ಕಿರಿಯರ ವಿಭಾಗದಲ್ಲಿ 19 ಮಂದಿ ತರಬೇತಿ ಪಡೆಯುತ್ತಿದ್ದಾರೆ. ಇವರಲ್ಲಿ ಕೆಲವರು ಭರವಸೆ ಮೂಡಿಸಿದ್ದಾರೆ. ಇದರ ಫಲವೇ ಈ ಬಾರಿ ಕ್ರೀಡಾನಿಲಯಕ್ಕೆ 10 ಚಿನ್ನ, 8 ಬೆಳ್ಳಿ, 7 ಕಂಚಿನ ಪದಕಗಳು ಬಂದಿವೆ. ಇದರಲ್ಲಿ ಕುಸ್ತಿ ತರಬೇತುದಾರರಾದ ಆರ್. ಶಿವಾನಂದ್ ಅವರ ಶ್ರಮವೂ ಇದೆ. ಅದಕ್ಕಾಗಿಯೇ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಕ್ರೀಡಾನಿಲಯದಲ್ಲಿ ಮಲ್ಲರ ಹೆಜ್ಜೆ ಗುರುತುಗಳು ಸಾಕಷ್ಟಿವೆ. ಕಾರ್ತಿಕ್ ಕಾಟೆ ಎರಡು ಬಾರಿ ‘ದಸರಾ ಕಂಠೀರವ’ ಹಾಗೂ ಎರಡು ಬಾರಿ ‘ದಸರಾ ಕೇಸರಿ’ ಪಡೆದುಕೊಂಡಿರುವ ಇವರು 2014ರಲ್ಲಿ ಕರ್ನಾಟಕ ‘ಕ್ರೀಡಾ ರತ್ನ ಪ್ರಶಸ್ತಿ’ ಮುಡಿಗೇರಿಸಿಕೊಂಡು ಉತ್ತಮ ಹೆಸರು ಪಡೆದಿದ್ದಾರೆ.
ಅಂತರರಾಷ್ಟ್ರೀಯ ಕ್ರೀಡಾಪಟು ರಫೀಕ್ ಹೊಳಿ ಸಾಧನೆ ಅಷ್ಟಿಷ್ಟಲ್ಲ. 2018ರಲ್ಲಿ ಕಾಮನ್‍ವೆಲ್ತ್ ಬೆಳ್ಳಿಪದಕ ಪಡೆದಿದ್ದು, 2 ಬಾರಿ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್ ಅನ್ನು ಪ್ರತಿನಿಧಿಸಿದ್ದಾರೆ. ದಾವಣಗೆರೆಯವರೇ ಆದ ಕೆಂಚಪ್ಪ ಸತತ ಐದು ಬಾರಿ ರಾಷ್ಟ್ರೀಯ ಶಾಲಾ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದುಕೊಂಡಿದ್ದಾರೆ. 2015ರಲ್ಲಿ ಕ್ರೀಡಾರತ್ನ ಪ್ರಶಸ್ತಿ ಪಡೆದ ಆನಂದ್ ಎಲ್. ದಸರಾ ರಾಜ್ಯಮಟ್ಟದ 82 ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರಲ್ಲದೇ ಬಾಹುಬಲಿ ಶಿರಹಟ್ಟಿ, ಶ್ರೀನಿವಾಸ್ ಇ. ಅವರೂ ಉತ್ತಮ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ:ವಿದೇಶಿಗರ ಜೊತೆ ದೇಶಿ ಪೈಲ್ವಾನರ ಸೆಣಸಾಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.