ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್‌ಗೆ ಆಯ್ಕೆಯಾಗಿರುವ 4X100 ಮೀಟರ್ಸ್ ರಿಲೇ ಮಹಿಳಾ ತಂಡದ ಅಥ್ಲೀಟ್‌ವೊಬ್ಬರು ಉದ್ದೀಪನ ಮದ್ದು ಸೇವಿಸಿರುವುದು ಖಚಿತಪಟ್ಟಿದೆ. ಹೀಗಾಗಿ ಭಾರತ ತಂಡದಿಂದ ಅವರನ್ನು ಕೈಬಿಡುವ ಸಾಧ್ಯತೆಯಿದೆ.
ಉದ್ದೀಪನ ಮದ್ದು ಸೇವಿಸಿರುವ ಅಥ್ಲೀಟ್ ಹೆಸರನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
‘ಕಾಮನ್‌ವೆಲ್ತ್ ಗೇಮ್ಸ್‌ಗೆ ರಿಲೇ ತಂಡಕ್ಕೆ ಆಯ್ಕೆಯಾಗಿದ್ದ ಅಥ್ಲೀಟ್‌ವೊಬ್ಬರು ಉದ್ದೀಪನ ಮದ್ದು ಸೇವಿಸಿದ್ದು ದೃಢಪಟ್ಟಿದೆ. ಅವರು ಕೂಟದಿಂದ ಹಿಂದೆ ಸರಿಯಲಿದ್ದಾರೆ’ ಎಂದು ಉನ್ನತ ಮೂಲಗಳು ತಿಳಿಸಿವೆ. ಮಹಿಳಾ ರಿಲೇ ತಂಡದಲ್ಲಿ ಈಗ ನಾಲ್ಕು ಜನ ಮಾತ್ರ ಉಳಿಯುವಂತಾಗಿದೆ. ಇವರಲ್ಲಿ ಒಬ್ಬರಿಗೆ ಗಾಯದ ಸಮಸ್ಯೆ ಎದುರಾದರೆ ಟ್ರ್ಯಾಕ್ ವಿಭಾಗಕ್ಕೆ ಆಯ್ಕೆಯಾಗಿರುವ ಯಾರಾದರೂ ತಂಡ ಸೇರಬಹುದು. ಅದಾಗ್ಯೂ ಇದು ತಂಡದ ಮೇಲೆ ಪರಿಣಾಮ ಬೀರಲಿದೆ.
ಭಾರತ ಅಥ್ಲೆಟಿಕ್ಸ್ ಫೆಡರೇಷನ್ ಈ ಮೊದಲು ದ್ಯುತಿ ಚಾಂದ್, ಹಿಮಾ ದಾಸ್, ಶ್ರಬಣಿ ನಂದಾ, ಎನ್.ಎಸ್.ಸಿಮಿ, ಎಸ್.ಧನಲಕ್ಷ್ಮೀ ಮತ್ತು ಎಂ.ವಿ. ಜಿಲ್ನಾ ಅವರನ್ನು 37 ಸದಸ್ಯರ ಅಥ್ಲೆಟಿಕ್ಸ್ ತಂಡಕ್ಕೆ ಆಯ್ಕೆ ಮಾಡಿತ್ತು. ಆದರೆ ಭಾರತ ಒಲಿಂಪಿಕ್ ಸಂಸ್ಥೆಯು 36 ಅಥ್ಲೀಟ್‌ಗಳ ಕೋಟಾ ನಿಗದಿಪಡಿಸಿದ್ದರಿಂದ ಜಿಲ್ನಾ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಬಳಿಕ ಧನಲಕ್ಷ್ಮೀ ಅವರು ಉದ್ದೀಪನ ಮದ್ದು ಸೇವಿಸಿದ್ದು ಖಚಿತವಾದ್ದರಿಂದ ಸ್ಥಾನ ಕಳೆದುಕೊಂಡರು. ಆ ಸ್ಥಾನಕ್ಕೆ ಮತ್ತೆ ಜಿಲ್ನಾ ಆಯ್ಕೆಯಾಗಿದ್ದಾರೆ.
ತಡವಾಗಿ ತಂಡ ಸೇರಿದ ಅಥ್ಲೀಟ್ ಮದ್ದು ಸೇವಿಸಿದವರು ಎಂದು ವರದಿ ಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.