ನವದೆಹಲಿ: ಬೀಜಿಂಗ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭವನ್ನು ಭಾರತವು ಬಹಿಷ್ಕರಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಘೋಷಿಸಿದ ಬೆನ್ನಲ್ಲೇ ಈ ಕಾರ್ಯಕ್ರಮದ ನೇರ ಪ್ರಸಾರದಿಂದಲೂ ಹಿಂದೆ ಸರಿಯುವುದಾಗಿ ಡಿಡಿ ಸ್ಪೋರ್ಟ್ಸ್ ಪ್ರಕಟಿಸಿದೆ.
ಗಾಲ್ವನ್ ಕಣಿವೆಯ ಘರ್ಷಣೆಯಲ್ಲಿ ಭಾಗಿಯಾಗಿದ್ದ ಚೀನಾದ ಸೈನಿಕನೊಬ್ಬ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ನ ಸಾಂಪ್ರದಾಯಿಕ ಜ್ಯೋತಿ ಹಿಡಿದಿರುವುದನ್ನು ಖಂಡಿಸಿರುವ ಭಾರತದ ರಾಯಭಾರವು ಪ್ರತಿಭಟನೆಯ ಭಾಗವಾಗಿ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭದಲ್ಲಿ ಭಾರತದ ಪ್ರತಿನಿಧಿಗಳು ಭಾಗವಹಿಸದಿರಲು ನಿರ್ಧರಿಸಿದೆ.
2022 ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ಫೆಬ್ರುವರಿ 4ರಂದು ಆರಂಭವಾಗಿ 20ರ ವರೆಗೆ ಜರುಗಲಿದೆ.
'ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಣೆಯ ಪರಿಣಾಮವಾಗಿ ಬೀಜಿಂಗ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳನ್ನು ಡಿಡಿ ಸ್ಪೋರ್ಟ್ಸ್ ಚಾನೆಲ್ ನೇರ ಪ್ರಸಾರ ಮಾಡುವುದಿಲ್ಲ' ಎಂದು ಪ್ರಸಾರ ಭಾರತಿಯ ಸಿಇಒ ಶಶಿ ಶೇಖರ್ ವಂಪತಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.