ADVERTISEMENT

ಬೀಜಿಂಗ್‌ ಚಳಿಗಾಲದ ಒಲಿಂಪಿಕ್ಸ್‌ ಉದ್ಘಾಟನೆ, ಸಮಾರೋಪದ ‘ಲೈವ್‌’ ಇಲ್ಲ: ಡಿಡಿ

ಪಿಟಿಐ
Published 4 ಫೆಬ್ರುವರಿ 2022, 3:04 IST
Last Updated 4 ಫೆಬ್ರುವರಿ 2022, 3:04 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ‘ಬೀಜಿಂಗ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳನ್ನು ‘ಡಿಡಿ ಸ್ಪೋರ್ಟ್ಸ್’ ನೇರ ಪ್ರಸಾರ ಮಾಡುವುದಿಲ್ಲ’ ಎಂದು ಪ್ರಸಾರ ಭಾರತಿ ಸಿಇಒ ಶಶಿ ಶೇಖರ್ ವೆಂಪತಿ ಗುರುವಾರ ಹೇಳಿದ್ದಾರೆ.

2022ರ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಅಥವಾ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಭಾರತ ಸರ್ಕಾರ ಘೋಷಿಸಿದ ಬೆನ್ನಿಗೇ ಡಿಡಿಯಿಂದ ಈ ಘೋಷಣೆ ಹೊರಬಿದ್ದಿದೆ.

ಗಾಲ್ವಾನ್ ಕಣಿವೆಯ ಘರ್ಷಣೆಯಲ್ಲಿ ಭಾಗಿಯಾಗಿದ್ದ ತನ್ನ ಮಿಲಿಟರಿ ಕಮಾಂಡರ್ ಅನ್ನು ಚೀನಾವು ಪ್ರತಿಷ್ಠಿತ ಕ್ರೀಡಾಕೂಟದ ಸಾಂಪ್ರದಾಯಿಕ ಜ್ಯೋತಿ ಹೊರಲು ಅವಕಾಶ ಮಾಡಿಕೊಟ್ಟಿತ್ತು. ಇದು ಭಾರತಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ, ಅಮೆರಿಕ ಕೂಡ ಈ ವಿಚಾರದಲ್ಲಿ ಭಾರತದ ಬೆಂಬಲಕ್ಕೆ ನಿಂತಿದೆ.

ADVERTISEMENT

‘ಬೀಜಿಂಗ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳನ್ನು ದೂರ ದರ್ಶನವು ನೇರ ಪ್ರಸಾರ ಮಾಡುವುದಿಲ್ಲ’ ಎಂದು ವೆಂಪತಿ ಟ್ವೀಟ್ ಮಾಡಿದ್ದಾರೆ.

ಚೀನಾ ಕಮಾಂಡರ್ ಅನ್ನು ಗೌರವಿಸುವ ಚೀನಾದ ಕ್ರಮವನ್ನು ‘ವಿಷಾದನೀಯ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ಚಳಿಗಾಲದ ಒಲಿಂಪಿಕ್ಸ್‌ ಜ್ಯೋತಿ ಹಿಡಿದ ‘ಪೀಪಲ್ಸ್ ಲಿಬರೇಶನ್ ಆರ್ಮಿ (ಚೀನಾ ಸೇನೆ)’ಯ ರೆಜಿಮೆಂಟ್ ಕಮಾಂಡರ್ ಕ್ವಿ ಫಾಬಾವೊ 2020ರ ಗಾಲ್ವಾನ್ ಕಣಿವೆ ಘರ್ಷಣೆಯಲ್ಲಿ ಭಾಗಿಯಾಗಿದ್ದರು. ಆಗ ಕ್ವಿ ತಲೆಗೆ ಗಂಭೀರ ಗಾಯವಾಗಿತ್ತು.

ಘರ್ಷಣೆಯಲ್ಲಿ ಭಾರತದ ಕನಿಷ್ಠ 20 ಸೈನಿಕರು, ಐವರು ಚೀನೀ ಸೈನಿಕರು ಮೃತಪಟ್ಟಿದ್ದರು. ಆದರೂ, ಚೀನಾ ತನ್ನ ಕಡೆಯ ಸಾವುನೋವುಗಳನ್ನು ಒಪ್ಪಿಕೊಂಡಿದ್ದು 8 ತಿಂಗಳ ನಂತರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.