ಟೋಕಿಯೊ: ಹಾಲಿ ಚಾಂಪಿಯನ್ ಮಾರಿಯಪ್ಪನ್ ತಂಗವೇಲು ಅವರು ನಿರೀಕ್ಷೆ ಹುಸಿಗೊಳಿಸಲಿಲ್ಲ. ಶರದ್ ಕುಮಾರ್ ಕೂಡ ಮಿಂಚಿದರು.
ಇವರಿಬ್ಬರು ಮಂಗಳವಾರ ಪ್ಯಾರಾಲಿಂಪಿಕ್ಸ್‌ನ ಪುರುಷರ ಹೈಜಂಪ್ ಟಿ63 ವಿಭಾಗದಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳಿಗೆ ಕೊರಳೊಡ್ಡಿದರು. ಶೂಟಿಂಗ್‌ನಲ್ಲಿಸಿಂಗರಾಜ್ ಅದಾನಾ ಅವರಿಗೆ ಕಂಚು ಒಲಿಯಿತು. ಇದರೊಂದಿಗೆ ಕೂಟದಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ 10ಕ್ಕೆ ತಲುಪಿತು.
26 ವರ್ಷದ ಮಾರಿಯಪ್ಪನ್ 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಮಾರಿಯಪ್ಪನ್ ಚಿನ್ನದ ಪದಕ ಗೆದ್ದುಕೊಂಡಿದ್ದರು.
ಐದು ವರ್ಷದವರಿದ್ದಾಗಲೇ ತಮಿಳುನಾಡಿನ ಮಾರಿಯಪ್ಪನ್ ಅವರ ಮೇಲೆ ಬಸ್ಸು ಹರಿದು ಬಲಗಾಲು ಊನಗೊಂಡಿತ್ತು. ತಂದೆ ಯಾವದೋ ಕಾರಣಕ್ಕೆ ಕುಟುಂಬವನ್ನು ತೊರೆದಾಗ ತಾಯಿ ಕೂಲಿ ಮತ್ತು ತರಕಾರಿ ವ್ಯಾಪಾರ ಮಾಡಿ ಮಕ್ಕಳನ್ನು ಬೆಳೆಸಿದರು.
ಪಾಟ್ನಾದ ಶರದ್ ಕುಮಾರ್ ಎರಡು ವರ್ಷದವರಿದ್ದಾಗ ಎಡಗಾಲಿಗೆ ಪಾರ್ಶ್ವವಾಯು ಬಾಧಿಸಿತ್ತು. ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಅವರು ಎರಡು ಬಾರಿ ಚಿನ್ನ ಗೆದ್ದುಕೊಂಡಿದ್ದಾರೆ.
ಭಾರತದ ಇನ್ನೋರ್ವ ಸ್ಪರ್ಧಿ, 2016ರ ರಿಯೊ ಪ್ಯಾರಾಲಿಂಪಿಕ್ಸ್ ಕಂಚು ವಿಜೇತ ವರುಣ್ ಸಿಂಗ್ ಭಾಟಿ ಏಳನೇ ಸ್ಥಾನ ಗಳಿಸಿದರು. ಭಾರತ ಕೂಟದಲ್ಲಿ ಇದುವರೆಗೆ ಎರಡು ಚಿನ್ನ, ಐದು ಬೆಳ್ಳಿ ಮತ್ತು ಮೂರು ಕಂಚು ಗೆದ್ದಿದೆ.
ಮಾರಿಯಪ್ಪನ್‌ಗೆ ₹ 2 ಕೋಟಿ ಬಹುಮಾನ: ಮಾರಿಯಪ್ಪನ್ ಅವರನ್ನು ಅಭಿನಂದಿಸಿರುವ ತಮಿಳುನಾಡು ಸರ್ಕಾರವು ₹ 2 ಕೋಟಿ ಬಹುಮಾನವನ್ನು ಪ್ರಕಟಿಸಿದೆ.
ಸರೆಹ್ ವಿಶ್ವದಾಖಲೆ: ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಎಸ್‌ಎಚ್1 ಸ್ಪರ್ಧೆಯಲ್ಲಿ ಇರಾನ್ ಸರೆಹ್ ಜವನ್‌ಮರ್ದಿ ವಿಶ್ವದಾಖಲೆಯ (239.2) ಸ್ಕೋರ್‌ನೊಂದಿಗೆ ಚಿನ್ನ ಗೆದ್ದು ಕೊಂಡರು. ಈ ಹಿಂದಿನ ದಾಖಲೆಯು ಭಾರತದ ರುಬಿನಾ ಫ್ರಾನ್ಸಿಸ್ (238.1) ಅವರ ಹೆಸರಿನಲ್ಲಿತ್ತು. ಪೆರುವಿನ ಲಿಮಾದಲ್ಲಿ ಜೂನ್‌ನಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ರುಬಿನಾ ಈ ದಾಖಲೆ ಬರೆದಿದ್ದರು. ರುಬಿನಾ ಅವರು ಈ ಕೂಟದಲ್ಲಿ ಏಳನೇ ಸ್ಥಾನ ಗಳಿಸಿದರು.
ಆರ್ಚರಿ ಕಂಪೌಂಡ್ ವಿಭಾಗದಲ್ಲಿ ಭಾರತದ ಸವಾಲು ಅಂತ್ಯ: ಆರ್ಚರಿ ಸ್ಪರ್ಧೆಯ ಕಂಪೌಂಡ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ರಾಕೇಶ್ ಕುಮಾರ್ 143–145ರಿಂದ ಚೀನಾದ ಕ್ಸಿನ್ ಲಿಯಾಂಗ್ ಐ ಎದುರು ಎಡವಿದರು.
ಕಂಚು ಗೆದ್ದ ಸಿಂಗರಾಜ್ ಅದಾನಾ
ಕೇವಲ ನಾಲ್ಕು ವರ್ಷಗಳ ಹಿಂದೆ ಶೂಟಿಂಗ್ ಕ್ರೀಡೆಗೆ ಬಂದ ಸಿಂಗರಾಜ್ ಅದಾನಾ ಅವರಿಗೆ ಕಂಚು ತಮ್ಮದಾಗಿಸಿಕೊಂಡಿದ್ದಾರೆ. ಪುರುಷರ ಪಿ1 10 ಮೀ. ಏರ್ ಪಿಸ್ತೂಲ್ ಎಸ್‌ಎಚ್1 ವಿಭಾಗದಲ್ಲಿ ಅವರು ಪದಕ ಗೆದ್ದುಕೊಂಡಿದ್ದಾರೆ.
ಪೋಲಿಯೊ ಪೀಡಿತರಾಗಿರುವ 39 ವರ್ಷದ ಸಿಂಗರಾಜ್ ಎರಡೂ ಕಾಲುಗಳ ಬಲ ಕಳೆದುಕೊಂಡವರು. ಊರುಗೋಲುಗಳೇ ಅವರಿಗೆ ಆಸರೆ. ಅವರ ಪದಕದ ಕನಸಿಗೆ ತಾಯಿಯ ಪ್ರೇರಣೆ ಹೆಚ್ಚಿನದು. ಪತ್ನಿಯೂ ತಮ್ಮ ಮೈಮೇಲಿನ ಆಭರಣ ಮಾರಿ ಪತಿಯ ಸಾಧನೆಯಲ್ಲಿ ಪಾಲು ಗಳಿಸಿದವರು.
ಸಿಂಗರಾಜ್ ಇಲ್ಲಿ ನಡೆದ ಸ್ಪರ್ಧೆಯ ಫೈನಲ್‌ನಲ್ಲಿ ಒಟ್ಟು 216.8 ಪಾಯಿಂಟ್ಸ್ ಗಳಿಸಿ ಮೂರನೇ ಸ್ಥಾನ ಪಡೆದರು. ಅರ್ಹತಾ ಸುತ್ತಿನಲ್ಲಿ ಅವರಿಗೆ ಆರನೇ ಸ್ಥಾನ ಸಿಕ್ಕಿತ್ತು. ಭಾರತದ ಇನ್ನೋರ್ವ ಸ್ಪರ್ಧಿ ಮನೀಷ್ ನರ್ವಾಲ್ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಗಳಿಸಿದರೂ ಫೈನಲ್‌ನಲ್ಲಿ ಏಳನೇ ಸ್ಥಾನ ಪಡೆದು ನಿರಾಸೆ ಮೂಡಿಸಿದರು. ದೀಪೆಂದರ್ ಸಿಂಗ್ 10ನೇ ಸ್ಥಾನ ಗಳಿಸಿದರು.
ಈ ವಿಭಾಗದ ಚಿನ್ನ ಮತ್ತು ಬೆಳ್ಳಿ ಪದಕಗಳು ಚೀನಾದ ಚಾವೊ ಯಾಂಗ್ (237.9, ಪ್ಯಾರಾಂಪಿಕ್ ದಾಖಲೆ) ಮತ್ತು ಹುವಾಂಗ್ ಕ್ಸಿಂಗ್ (237.5) ಅವರ ಪಾಲಾದವು.
ಕೂಟದ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಇದು ಎರಡನೇ ಪದಕ. ಸೋಮವಾರ ಅವನಿ ಲೇಖರಾ ಚಿನ್ನ ಗೆದ್ದುಕೊಂಡಿದ್ದರು.
ಸಿಂಗರಾಜ್ ಅವರು ಈ ವರ್ಷ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ ಪ್ಯಾರಾ ಸ್ಪೋರ್ಟ್ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು.
ಕ್ವಾರ್ಟರ್‌ನಲ್ಲಿ ಸೋತ ಮಹಿಳಾ ಟಿಟಿ ತಂಡ
ಭಾವಿನಾಬೆನ್ ಪಟೇಲ್ ಅವರನ್ನೊಳಗೊಂಡ ಭಾರತದ ಮಹಿಳಾ ಟೇಬಲ್ ಟೆನಿಸ್ ತಂಡವು ಕ್ವಾರ್ಟರ್‌ಫೈನಲ್‌ನಲ್ಲಿ ಚೀನಾ ಎದುರು ಮುಗ್ಗರಿಸಿತು.ಕ್ಲಾಸ್ 4–5 ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾವಿನಾ– ಸೋನಲ್ ಪಟೇಲ್ 2–11, 4–11, 2–11ರಿಂದ ಯಿಂಗ್ ಜೌ ಮತ್ತು ಜಾಂಗ್ ಬಿಯಾನ್ ಅವರಿಗೆ ಸೋತರು. ಕೇವಲ 13 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.